'ಧುರಂಧರ್ 2', ನಟಿ ದೀಪಿಕಾ ಪಡುಕೋಣೆ
- ರಣವೀರ್ ಸಿಂಗ್ 'ಧುರಂಧರ್' ಬ್ಲಾಕ್ಬಸ್ಟರ್ ಹಿಟ್
- ಪತಿಯ ಸಿನಿಮಾ ಸೂಪರ್ಹಿಟ್ ಆದ್ರೂ ತುಟಿಬಿಚ್ಚದ ದೀಪಿಕಾ ಪಡುಕೋಣೆ
- ಒಂದೇ ಒಂದು ಮೆಚ್ಚುಗೆಯ ಪೋಸ್ಟ್ ಬಾರದ ಹಿನ್ನೆಲೆ ಸೋಷಿಯಲ್ ಮೀಡಿಯಾದಲ್ಲಿ ಊಹಾಪೋಹಗಳ ಸದ್ದು
ಮುಂಬೈ: 2023ರಲ್ಲಿ ತೆರೆಕಂಡ ಬಾಲಿವುಡ್ನ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ ಬಳಿಕ ನಟ ರಣವೀರ್ ಸಿಂಗ್ ಅವರಿಗೆ ದೊಡ್ಡ ಮಟ್ಟದ ಹಿಟ್ ಸಿಕ್ಕಿರಲಿಲ್ಲ. ಆದರೆ, 2025ರಲ್ಲಿ ರಿಲೀಸ್ ಆದ ಬಹುನಿರೀಕ್ಷಿತ 'ಧುರಂಧರ್' ಸಿನಿಮಾ ನಟನಿಗೆ ಬ್ಲಾಕ್ಬಸ್ಟರ್ ಹಿಟ್ ಕೊರತೆಯನ್ನು ತುಂಬಿದ್ದಲ್ಲದೆ, ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್ಗೆ ಸಾಕ್ಷಿಯಾಗಿದೆ. ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ರಣವೀರ್ ಸಿನಿಮಾ ಭಾರೀ ಸದ್ದು ಮಾಡುತ್ತಿದ್ದು, ನಟನ ಮೇಲಿನ ಭರವಸೆಗಳನ್ನು ದುಪ್ಪಟ್ಟಾಗಿಸಿದೆ.
ಬ್ಲಾಕ್ಬಸ್ಟರ್ 'ಧುರಂಧರ್ 2'
ಮಾ.19ರಂದು ತೆರೆಕಂಡ ಧುರಂಧರ್ 2 ಕೂಡ ಬ್ಲಾಕ್ಬಸ್ಟರ್ ಸಾಲಿಗೆ ಸೇರಿದ್ದು, ಕೇವಲ ನಾಲ್ಕನೇ ದಿನಕ್ಕೆ ಚಿತ್ರವು ಜಾಗತಿಕವಾಗಿ 500 ಕೋಟಿ ರೂ. ಕಬಳಿಸಿದೆ. ಬರೋಬ್ಬರಿ 3 ಗಂಟೆ 49 ನಿಮಿಷಗಳ ರನ್ಟೈಮ್ ಹೊಂದಿರುವ ಸಿನಿಮಾವನ್ನು ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಕುಳಿತು ನೋಡುತ್ತಿರುವ ಸಿನಿಪ್ರಿಯರು, ರಣವೀರ್ ಸಿಂಗ್ ನಟನೆ ಮತ್ತು ಆದಿತ್ಯ ಧರ್ ಅವರ ನಿರ್ದೇಶನವನ್ನು ಮೆಚ್ಚಿದ್ದಾರೆ. ಸಾಕಷ್ಟು ಪಾಸಿಟಿವ್ ವಿಷಯಗಳ ಮಧ್ಯೆ ರಣವೀರ್ ಪತ್ನಿ ದೀಪಿಕಾ ಪಡುಕೋಣೆ ಹೆಸರು ಮುನ್ನೆಲೆಗೆ ಬಂದಿದೆ.
ಪತಿಯ ಸಿನಿಮಾ ಸೂಪರ್ಹಿಟ್ ಆಗಿ ಚಿತ್ರಪ್ರೇಮಿಗಳಿಂದ ಹಾಗೂ ಸಿನಿಮಾ ವಿಮರ್ಶಕರಿಂದ ಭಾರೀ ಮೆಚ್ಚುಗೆಗಳನ್ನು ಗಳಿಸುತ್ತಿರುವಾಗ, ತಾವು ಮಾತ್ರ ನನಗೂ ಈ ಚಿತ್ರಕ್ಕೂ ಸಂಬಂಧವೇ ಇಲ್ಲ ಎನ್ನುವಂತಿರುವುದು ಹಲವರ ಚರ್ಚೆಗೆ ಗ್ರಾಸವಾಗಿದೆ. 'ಧುರಂಧರ್ 2: ದಿ ರಿವೆಂಜ್' ಪ್ರೀಮಿಯರ್ ಪ್ರದರ್ಶನಕ್ಕೆ ಗೈರಾದ ದೀಪಿಕಾ, ಸಿನಿಮಾ ಯಶಸ್ಸು ಅಥವಾ ಚಿತ್ರತಂಡದ ಬಗ್ಗೆ ಎಲ್ಲಿಯೂ ಮಾತನಾಡದೆ ಇರುವುದು ಸದ್ಯ ಒಂದಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.
ಪ್ರದರ್ಶನದಲ್ಲಿ ಕಾಣಲಿಲ್ಲ, ಒಂದೂ ಪೋಸ್ಟ್ ಇಲ್ಲ
ರಣವೀರ್ ಸಿಂಗ್ ಮತ್ತು ಸ್ಟಾರ್ ಕಲಾವಿದರು, ಸಿಬ್ಬಂದಿ ವರ್ಗ ಸೇರಿದಂತೆ ಇಡೀ ಚಿತ್ರತಂಡವೇ ಭಾಗವಹಿಸಿದ್ದ ಮುಂಬೈನ ವಿಶೇಷ ಶೋಗೆ ದೀಪಿಕಾ ಪಡುಕೋಣೆ ಬರಲಿಲ್ಲ. ಮತ್ತೊಂದೆಡೆ, ಗೆಲುವಿನ ಹಾದಿಯಲ್ಲಿ ಸಾಗಿರುವ ಚಿತ್ರದ ಎರಡನೇ ಭಾಗಕ್ಕೆ ಯಾವುದೇ ಮೆಚ್ಚುಗೆ ಅಥವಾ ಅಭಿನಂದನೆ ತಿಳಿಸದ ದೀಪಿಕಾ ನಡೆ ಬೇರೆಯೇ ಕಥೆಯನ್ನು ಹೇಳುತ್ತಿದೆ.
ಮ್ಯೂಸಿಕ್ ಕಾನ್ಸರ್ಟ್ಗೆ ಹಾಜರಿ
ಅತ್ತ ಪ್ರೀಮಿಯರ್ಗೆ ಗೈರಾದ ಸಮಯದಲ್ಲೇ, ದೀಪಿಕಾ ಮುಂಬೈನಲ್ಲಿ ನಡೆದ ಸಿತಾರ್ ಮ್ಯೂಸಿಕ್ ಕಾನ್ಸರ್ಟ್ಗೆ ರಣವೀರ್ ಸಿಂಗ್ ಅವರ ತಾಯಿ ಮತ್ತು ಸಹೋದರಿ ಜೊತೆಗೆ ಭೇಟಿ ನೀಡಿದ್ದರು. ಇದು ನೆಟ್ಟಿಗರ ಊಹಾಪೋಹಗಳಿಗೆ ಇನ್ನಷ್ಟು ಪುಷ್ಠಿ ನೀಡಿತು. ಕೆಲವರು, ಇಲ್ಲಿ ಅವರ ಆದ್ಯತೆಗಳು ಮತ್ತು ಚಿತ್ರಕ್ಕೆ ಎಷ್ಟರ ಮಟ್ಟಿಗೆ ಬೆಂಬಲ ತೋರುತ್ತಿದ್ದಾರೆ ಎಂಬುದನ್ನು ಒತ್ತಿ ಹೇಳುತ್ತಿದೆ ಎಂದೆಲ್ಲ ಅಭಿಪ್ರಾಯಿಸಿದ್ದಾರೆ. ನಟಿಯ ಅಭಿಮಾನಿಗಳು, ಕಪಲೋಕಲ್ಪಿತಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾರೆ,(ಏಜೆನ್ಸೀಸ್).