ಯಾರು ಈ ಅಸಲಿ ಜಮೀಲ್ ಜಮಾಲಿ? ಧುರಂಧರ್ 2 ನೀಡಿದ ಆ ಒಂದು ರೋಚಕ ಟ್ವಿಸ್ಟ್ ನಿಮ್ಮ ಹುಬ್ಬೇರಿದೋದು ಖಚಿತ! Dhurandhar  
ಬಾಲಿವುಡ್

ಯಾರು ಈ ಅಸಲಿ ಜಮೀಲ್ ಜಮಾಲಿ? ಧುರಂಧರ್ 2 ನೀಡಿದ ಆ ಒಂದು ರೋಚಕ ಟ್ವಿಸ್ಟ್ ನಿಮ್ಮ ಹುಬ್ಬೇರಿದೋದು ಖಚಿತ! Dhurandhar

ಪ್ರಮುಖ ಮುಖ್ಯಾಂಶಗಳು

  • ಕೆಜಿಎಫ್​ ಹಾಗೂ ಆರ್​ಆರ್​ಆರ್​ ಸಿನಿಮಾಗಳ ದಾಖಲೆಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ ಧುರಂಧರ್​ 2 ಸಿನಿಮಾ
  • ವಾಸ್ತವ ಮತ್ತು ಕಾಲ್ಪನಿಕತೆಯನ್ನು ಬಹಳ ಸೊಗಸಾಗಿ ಮಿಶ್ರಣ ಮಾಡುವುದರಲ್ಲಿ ನಿರ್ದೇಶಕ ಆದಿತ್ಯ ಧರ್ ಯಶಸ್ವಿ
  • ನೈಜ ಘಟನೆಗಳು ಮತ್ತು ನಿಜ ಜೀವನದ ವ್ಯಕ್ತಿಗಳಿಂದ ಸ್ಫೂರ್ತಿ ಪಡೆದು ದೊಡ್ಡ ಪರದೆಯ ಮೇಲೆ ದೃಶ್ಯ ವೈಭವ
  • ಇಡೀ ಸಿನಿಮಾದಲ್ಲಿ ಎಲ್ಲರ ಗಮನ ಸೆಳೆದ ಜಮೀಲ್​ ಜಮಾಲಿ ಪಾತ್ರಕ್ಕೆ ಮಹತ್ವದ ತಿರುವು ಕೊಟ್ಟ ಧುರಂಧರ್​ 2
Dhurandhar : ದೊಡ್ಡ ತಾರಾಗಣ ಹಾಗೂ ಭರ್ಜರಿ ಬಜೆಟ್‌ನೊಂದಿಗೆ ನಿರ್ದೇಶಕ ಆದಿತ್ಯ ಧರ್​ ನಿರ್ದಶಿಸಿರುವ ಧುರಂಧರ್​ ಪಾರ್ಟ್​ 1 ಮತ್ತು ಪಾರ್ಟ್​ 2 ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆದಿದೆ. ಕೆಜಿಎಫ್​ ಹಾಗೂ ಆರ್​ಆರ್​ಆರ್​ ಸಿನಿಮಾಗಳ ದಾಖಲೆಗಳನ್ನು ಹಿಂದಿಕ್ಕಿ ಧುರಂಧರ್​ 2 ಸಿನಿಮಾ ಮುನ್ನುಗ್ಗುತ್ತಿದೆ. ಈ ಸಿನಿಮಾದಲ್ಲಿ ವಾಸ್ತವ ಮತ್ತು ಕಾಲ್ಪನಿಕತೆಯನ್ನು ಬಹಳ ಸೊಗಸಾಗಿ ಮಿಶ್ರಣ ಮಾಡುವುದರಲ್ಲಿ ನಿರ್ದೇಶಕ ಆದಿತ್ಯ ಧರ್ ಯಶಸ್ವಿಯಾಗಿದ್ದಾರೆ. ನೈಜ ಘಟನೆಗಳು ಮತ್ತು ನಿಜ ಜೀವನದ ವ್ಯಕ್ತಿಗಳಿಂದ ಸ್ಫೂರ್ತಿ ಪಡೆದು, ಈ ಸಿನಿಮಾವನ್ನು ಅತ್ಯಂತ ನೈಜವಾಗಿ ಹಾಗೂ ದೃಶ್ಯ ವೈಭವದೊಂದಿಗೆ ದೊಡ್ಡ ಪರದೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ನೋಡುಗರಿಗೆ ಕಲ್ಪನೆ ಮತ್ತು ವಾಸ್ತವದ ನಡುವಿನ ಗೆರೆ ಕಾಣಿಸುವುದೇ ಇಲ್ಲ. ಇದೊಂದು ವಿಭಿನ್ನ ಪ್ರಯತ್ನವಾಗಿದ್ದು, ಇದರಲ್ಲಿ ಧರ್​ ಗೆಲುವು ಸಾಧಿಸಿದ್ದಾರೆ.
ಕಳೆದ ವರ್ಷ ಧುರಂಧರ್​ ಪಾರ್ಟ್​ 1 ಬಿಡುಗಡೆಯಾದಾಗ ನಟ ರಾಕೇಶ್​ ಬೇಡಿ ಅವರು ನಟಿಸಿದ ಕುತಂತ್ರಿ ಹಾಗೂ ಕಾಮಿಡಿ ರಾಜಕಾರಣಿ ಜಮೀಲ್​ ಜಮಾಲಿ ಪಾತ್ರ ಎಲ್ಲರ ಗಮನ ಸೆಳೆಯಿತು. ಇಡೀ ಕತೆಗೆ ಟ್ವಿಸ್ಟ್​ಗಳನ್ನು ನೀಡುವುದೇ ಇದೇ ಜಮೀಲ್​ ಜಮಾಲಿ ಪಾತ್ರ. ಆತನ ಕುತಂತ್ರಗಳು ಸಿನಿಮಾಗೆ ರೋಚಕ ತಿರುವು ನೀಡುತ್ತವೆ. ಹೀಗಾಗಿ, ಜಮೀಲ್​ ಜಮಾಲಿ ಪಾತ್ರ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಸಿನಿಮಾ ನೋಡಿದವರು ಆತನನ್ನು ವಿಲನ್​ ಎಂದೇ ಭಾವಿಸಿದ್ದರು. ಅಲ್ಲದೆ, ಆ ಸಮಯದಲ್ಲಿ ಸಿನಿಮಾ ನೋಡಿದವರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುವಾಗ ಜಮೀಲ್​ ಜಾಮಾಲಿ ಪಾತ್ರವನ್ನು ಪಾಕಿಸ್ತಾನದ ಮುತ್ತಹಿದಾ ಕ್ವಾಮಿ ಮೂವ್​ಮೆಂಟ್ ( MQM ) ಪಕ್ಷದ ರಾಜಕಾರಣಿ ನಬಿಲ್​ ಗೊಬೊಲ್​ಗೆ ಹೋಲಿಕೆ ಮಾಡಿದರು. ಇದೇ ಗೊಬೊಲ್​ ಈ ಹಿಂದೆ ಪಾಕಿಸ್ತಾನ ಪೀಪಲ್ಸ್​ ಪಾರ್ಟಿಯ (PPP) ನಾಯಕರಾಗಿದ್ದರು.

ಚಿತ್ರಣವನ್ನೇ ಬದಲು ಮಾಡಿದ ಧುರಂಧರ್​ ಪಾರ್ಟ್​ 2

ಆದರೆ, ಯಾವಾಗ ಧುರಂಧರ್​ ಪಾರ್ಟ್​ 2 ಬಿಡುಗಡೆಯಾಯಿತೋ ಜಮೀಲ್​ ಜಮಾಲಿ ಪಾತ್ರವನ್ನು ನೋಡುವ ರೀತಿಯೇ ಕಂಪ್ಲೀಟ್​ ಬದಲಾಯಿತು. ಆ ಕ್ಷಣದವರೆಗೆ ಜಮೀಲ್​ ಜಮಾಲಿ ವಿಲನ್​ ಅಂದುಕೊಂಡಿದ್ದವರು ಕ್ಲೈಮ್ಯಾಕ್ಸ್​ ನೋಡುತ್ತಿದ್ದಂತೆ ಎಲ್ಲರ ಅಭಿಪ್ರಾಯವೇ ಬದಲಾಯಿತು. ಏಕೆಂದರೆ, ಜಮೀಲ್​ ಭಾರತದ ಗುಪ್ತಚರ ಇಲಾಖೆ ಏಜೆಂಟ್​ ಅನ್ನೋದು ಕ್ಲೈಮ್ಯಾಕ್ಸ್​ನಲ್ಲಿ ಬಹಿರಂಗವಾಗುತ್ತದೆ. ಸುಮಾರು 45 ವರ್ಷಗಳಿಂದಲೂ ಪಾಕ್​​​​ ಜತೆಯಾಗಿದ್ದುಕೊಂಡೇ ಭಾರತೀಯ ಸಪ್ಲೈ ಏಜೆಂಟ್​​ ಆಗಿ ಕಾರ್ಯ ನಿರ್ವಹಿಸುವ ಪಾತ್ರವೇ ಜಮೀಲ್​​ ಜಮಾಲಿಯದ್ದಾಗಿದೆ. ಈ ಸ್ಫೋಟಕ ತಿರುವುಗಳನ್ನು ನೋಡಿದ ನೆಟ್ಟಿಗರು ಒಂದು ನಿರ್ಧಾರಕ್ಕೆ ಬಂದರು. ಅದೇನೆಂದರೆ, ಜಮೀಲ್ ಜಮಾಲಿಯ ಹಿಂದಿನ ಸ್ಫೂರ್ತಿ ನಬಿಲ್ ಗೊಬೊಲ್​ ಅಲ್ಲವೇ ಅಲ್ಲ ಎಂದು ಎಲ್ಲರು ನಂಬಿದರು.

ಅಲ್ತಾಫ್​ ಹುಸೈನ್​ ಹೆಸರು ಮುನ್ನೆಲೆಗೆ

ಜಮೀಲ್​ ಪಾತ್ರ ನಬಿಲ್ ಗೊಬೊಲ್​ರಿಂದ ಸ್ಫೂರ್ತಿ ಪಡೆದಿಲ್ಲ ಎಂಬ ವಾದದ ಬಳಿಕ ಇದೀಗ ಮತ್ತೊಂದು ಹೆಸರು ಕೇಳಿಬಂದಿದೆ. ಅದುವೇ ಅಲ್ತಾಫ್​ ಹುಸೈನ್​. ಹೌದು, ಜಮೀಲ್​ ಜಮಾಲಿ ಪಾತ್ರ ಪಾಕಿಸ್ತಾನದ ಮತ್ತೊಬ್ಬ ರಾಜಕಾರಣಿ ಅಲ್ತಾಫ್​ ಹುಸೈನ್​ ಜತೆ ತಳುಕು ಹಾಕಿಕೊಂಡಿದೆ. ಅಂದಹಾಗೆ, ಈ ಹುಸೈನ್​ ಬೇರೆ ಯಾರೂ ಅಲ್ಲ ನಬಿಲ್​ ಗೊಬೊಲ್ ಅವರ​ ಪಕ್ಷಕ್ಕೆ ಸೇರಿದವರು. ಹೇಳಬೇಕೆಂದರೆ, ಮುತ್ತಹಿದಾ ಕ್ವಾಮಿ ಮೂವ್​ಮೆಂಟ್​ ( MQM ) ಪಕ್ಷದ ಸಂಸ್ಥಾಪಕರೇ ಈ ಹುಸೈನ್​. ಸದ್ಯ ಪಾಕಿಸ್ತಾನದಿಂದ ಗಡಿಪಾರಾಗಿರುವ ಹುಸೈನ್​, ಯುನೈಟೆಡ್​ ಕಿಂಗ್​ಡಮ್​ನಲ್ಲಿ ನೆಲೆಸಿದ್ದಾರೆ.

ಅಲ್ತಾಫ್​ ಹುಸೈನ್​ ಹಿನ್ನೆಲೆ ಏನು?

ಅಸಲಿಗೆ ಅಲ್ತಾಫ್​ ಹುಸೇನ್​​​ ಯಾರು? ಅನ್ನೋದನ್ನ ವಿವರವಾಗಿ ನೋಡೋದಾದ್ರೆ ಆತ ಪಾಕಿಸ್ತಾನಿ ಲೀಡರ್​​. ಅಲ್ತಾಫ್​ ಹುಸೇನ್​ 1953ರಲ್ಲಿ ಪಾಕ್​ನ ಕರಾಚಿಯಲ್ಲಿ ಜನಿಸಿದರು. ಈತನ ಮೂಲ ಕುಟುಂಬ ಭಾರತದ ಉತ್ತರಪ್ರದೇಶಲ್ಲಿದೆ. ನಂತರ ಈತ ಪಾಕ್​ಗೆ ಹೋಗಿದ್ದ. ಪಾಕ್​​ನ ಕರಾಚಿ ಯೂನಿವರ್ಸಿಯಲ್ಲಿ ವಿದ್ಯಾಭ್ಯಾಸವನ್ನ ಮುಗಿಸಿದರು. ಅಲ್ಲದೇ ಈ ಯೂನಿವರ್ಸಿಟಿ ಪಾಕ್​ನ ರಾಜಕೀಯದ ಆಗು ಹೋಗುವಿನಲ್ಲಿ ಪ್ರಮುಖ ಪಾತ್ರವನ್ನ ವಹಿಸಿತ್ತು. ಹಾಗಾಗಿ ಚಿಕ್ಕಂದಿನಿಂದಲೂ ಅಲ್ತಾಫ್​ಗೆ ಪಾಕ್​ ರಾಜಕೀಯದಲ್ಲಿ ಒಲವಿತ್ತು. 1984ನಲ್ಲಿ MQM (ಮುತ್ತಾಹಿದ್ದ ಕ್ವಾಮಿ ಮೂಮೆಂಟ್​​) ಪಾರ್ಟಿಯ ಸಂಸ್ಥಾಪಕರಾಗಿದ್ದರು. ಇದರ ಮೂಲಕ ಅಲ್ಲಿನ ಮಹಾಜು ಕಮ್ಯುನಿಟಿ ಜನರ ಹಕ್ಕಿಗಾಗಿ ಕಾರ್ಯ ನಿರ್ವಹಿಸುತ್ತಿದ್ದರು. ದಿನ ಕಳೆದಂತೆ ಪಾಕ್​ನ ಪಾಲಿಟಿಕ್ಸ್​​ನಲ್ಲಿ ಅಲ್ತಾಫ್​ ಹುಸೇನ್​ ಪ್ರಮುಖ ಪಾತ್ರ ವಹಿಸಿದರು. ಕರಾಚಿಯಲ್ಲಿ ಈತನ ಪ್ರಭಾವ ಎಷ್ಟರ ಮಟ್ಟಿಗೆ ಇತ್ತೆಂದ್ರೆ ಅಲ್ಲಿನ ಜನರು ಈತ ಹೇಳಿದ ಮಾತನ್ನು ತಳ್ಳಿ ಹಾಕುತ್ತಲೇ ಇರಲಿಲ್ಲ. ಅದರೂ 1990ರ ಇಸವಿಯ ಕೊನೆಯಲ್ಲಿ ಈತನ ವಿರುದ್ಧ ಹಲವು ಕೇಸ್​ಗಳು ದಾಖಲಾಗಿದ್ದವು. ಅಲ್ಲದೇ ಚೀಲಗಳಲ್ಲಿ ತುಂಬಿದ ದೇಹಗಳು ಕರಾಚಿಯಲ್ಲಿ ಹೆಚ್ಚಾಗಿ ಸಿಕ್ಕಾಗ ಇದು ಅಲ್ತಾಫ್​​ ವಿರುದ್ಧ ಅಲ್ಲಿನ ಜನರು ತಿರುಗಿ ಬೀಳುವಂತೆ ಮಾಡಿದ್ದಲ್ಲದೆ, ಆತನ ವಿರುದ್ಧ ವಿವಾದ ಹೆಚ್ಚಾಯ್ತು. ಇದು ಜನರಲ್ಲಿ ಅಲ್ತಾಫ್​ ಹೆಸರು ಕೇಳಿದ ತಕ್ಷಣ ಭಯ ಮತ್ತು ನಡುಕ ಹುಟ್ಟಿಸುವಂತೆ ಮಾಡಿತು. ಈ ಎಲ್ಲ ಬೆಳವಣಿಗೆಗಳಿಂದ ಪಾಕ್​ ಸರ್ಕಾರ ಈತ ಪಾಕ್​ ಬಿಟ್ಟು ಹೋಗುವಂತೆ ಒತ್ತಡ ಹಾಕಿತು. ಆದ್ದರಿಂದ ಈತ ಪಾಕ್​ ಬಿಟ್ಟು ಲಂಡನ್​ಗೆ ತೆರಳಬೇಕಾದ ಪರಿಸ್ಥಿತಿಯನ್ನ ತಂದೊಡ್ಡಿತು. ಲಂಡನ್​ಗೆ ತೆರಳಿದ ಬಳಿಕ ಅಲ್ಲಿಯೂ ಈತ ತನ್ನ ಪಾರ್ಟಿಯ ಚಟುವಟಿಕೆಗಳನ್ನ ಅಲ್ಲಿನ ಜನರನ್ನು ಒಟ್ಟು ಮಾಡಿ ಮುಂದುವರಿಸುತ್ತಿದ್ದ. 2014ರ ನಂತರ ಈತನ ರಾಜಕೀಯ ಪ್ರಭಾವ ತಣ್ಣಗಾಯ್ತು.

ಹೀಗೊಂದು ಹೋಲಿಕೆ...

ಒಟ್ಟಾರೆಯಾಗಿ, 'ಧುರಂಧರ್' ಸಿನಿಮಾದ ಜಮೀಲ್ ಜಮಾಲಿ ಪಾತ್ರವು ಪಾಕಿಸ್ತಾನದ ರಾಜಕಾರಣಿ ಅಲ್ತಾಫ್ ಹುಸೇನ್ ಅವರ ಜೀವನಕ್ಕೆ ಹತ್ತಿರವಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಚಿತ್ರದಲ್ಲಿ ಯಲೀನಾ ಜಮಾಲಿ ತನ್ನ ತಂದೆ 45ನೇ ವಯಸ್ಸಿನಲ್ಲಿ ಮದುವೆಯಾದ ಬಗ್ಗೆ ಹೇಳುತ್ತಾಳೆ. ಅಂತೆಯೇ ನಿಜ ಜೀವನದಲ್ಲಿ ಅಲ್ತಾಫ್ ಹುಸೇನ್ ಕೂಡ 48ನೇ ವಯಸ್ಸಿನಲ್ಲಿ ತನಗಿಂತ ಅರ್ಧ ವಯಸ್ಸಿನ ಮಹಿಳೆಯನ್ನು ವಿವಾಹವಾಗಿದ್ದರು. ಅಲ್ಲದೆ, ಅಲ್ತಾಫ್ ಹುಸೇನ್ ಲಂಡನ್‌ನಲ್ಲಿ ಭಾರತದ ದೇಶಭಕ್ತಿ ಗೀತೆ 'ಸಾರೆ ಜಹಾನ್ ಸೆ ಅಚ್ಚಾ' ಹಾಡಿರುವುದು ಮತ್ತು ಅವರ ಪೋಸ್ಟರ್‌ಗಳ ಹಿಂದೆ ಭಾರತೀಯ ಗುಪ್ತಚರ ಸಂಸ್ಥೆ RAW ಕೈವಾಡವಿದೆ ಎಂಬ ಇಮ್ರಾನ್ ಖಾನ್ ಅವರ ಹಳೆಯ ಹೇಳಿಕೆಗಳು ಈ ಹೋಲಿಕೆಗೆ ಪುಷ್ಟಿ ನೀಡುವಂತಿವೆ.
ಇನ್ನು ನಿರ್ದೇಶಕ ಆದಿತ್ಯ ಧರ್ ಅವರ ಈ ನಿರೂಪಣೆಗೆ ಪ್ರತಿಯಾಗಿ ನಬಿಲ್ ಗೊಬೊಲ್ ಅವರು 'ಲಿಯಾರಿ ಕಾ ಗಬ್ಬರ್' ಎಂಬ ಹೆಸರಿನ ಸಿನಿಮಾವನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಜಮೀಲ್ ಜಮಾಲಿ ಪಾತ್ರವು ತನ್ನ ಜೀವನವನ್ನೇ ಆಧರಿಸಿದೆ ಎಂಬ ವಾದಗಳ ಬಗ್ಗೆ ಅಲ್ತಾಫ್ ಹುಸೇನ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾದಲ್ಲಿ ನೈಜ ಘಟನೆಗಳನ್ನು ಬಳಸಿಕೊಂಡಿರುವ ರೀತಿ ಈಗ ಎಲ್ಲರ ಗಮನ ಸೆಳೆದಿದ್ದು, ಜಾಲತಾಣದಲ್ಲಿ ಸಖತ್​ ಚರ್ಚೆಯಾಗುತ್ತಿದೆ, (ಏಜೆನ್ಸೀಸ್​).