ಟೈನಿ ಧಿಲ್ಲಾನ್ ಜತೆ ವಿವೇಕ್ ಅಗ್ನಿಹೋತ್ರಿ
- ಫೈಲ್ಸ್ ಓಪನ್ ಬಳಿಕ ಆಪರೇಷನ್ ಕಾರ್ಯಾಚರಣೆಗೆ ಮುಂದಾದ ಬಾಲಿವುಡ್ ನಿರ್ದೇಶಕ
- ಬರಲಿದೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಸಿನಿಮಾ
- ಸದ್ಯದಲ್ಲೇ ಶೂಟಿಂಗ್ ಆರಂಭ
‘ದ ತಾಷ್ಕೆಂಟ್ ಫೈಲ್ಸ್’, ‘ದ ಕಾಶ್ಮೀರ್ ಫೈಲ್ಸ್’, ‘ದ ಬೆಂಗಾಲ್ ಫೈಲ್ಸ್’ನಂತಹ ನೈಜ ಘಟನೆಯಾಧಾರಿತ ಚಿತ್ರಗಳನ್ನೇ ನಿರ್ದೇಶಿಸಿ, ಪ್ರಸಿದ್ಧಿಯಾದವರು ವಿವೇಕ್ ರಂಜನ್ ಅಗ್ನಿಹೋತ್ರಿ. ಇಂತಹ ನಿರ್ದೇಶಕ ಮತ್ತೊಂದು ನೈಜ ಘಟನೆಯಾಧಾರಿತ ಸಿನಿಮಾ ಮಾಡಲಿದ್ದಾರೆ ಎಂಬ ಚರ್ಚೆ ಬಾಲಿವುಡ್‌ನಲ್ಲಿತ್ತು. ಅದರಲ್ಲೂ ವಿವೇಕ್ ಅಗ್ನಿಹೋತ್ರಿ ಈ ಬಾರಿ, ಭಾರತೀಯ ಸೈನಿಕರು, ಪಾಕಿಸ್ತಾನದ ವಿರುದ್ಧ ಕೈಗೊಂಡಿದ್ದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನೇ ತೆರೆ ಮೇಲೆ ತರಲು ನಿರ್ಧರಿಸಿದ್ದು, ಅದಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಆ ಸುದ್ದಿ ಖಚಿತವಾಗಿದ್ದು, ಟಿ-ಸೀರಿಸ್ ನಿರ್ಮಾಣ ಸಂಸ್ಥೆಯು ವಿವೇಕ್ ಜತೆ ಕೈಜೋಡಿಸಿದ್ದು ಸಿನಿಮಾವನ್ನು ಘೋಷಿಸಿದೆ. ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ‘ಟೈನಿ’ ಧಿಲ್ಲಾನ್ ರಚಿಸಿರುವ ‘ಆಪರೇಷನ್ ಸಿಂಧೂರ್: ದ ಅನ್‌ಟೋಲ್ಡ್ ಸ್ಟೋರಿ ಆಫ್ ಇಂಡಿಯಾಸ್ ಡೀಪ್ ಸ್ಟೈಕ್ಸ್ ಇನ್‌ಸೈಡ್ ಪಾಕಿಸ್ತಾನ್’ ಕೃತಿಯಾಧಾರಿಸಿ, ಸಿನಿಮಾ ಮಾಡಲಾಗುತ್ತಿದೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಆರಂಭಗೊಂಡಿವೆ. ಚಿತ್ರದ ಬಗ್ಗೆ ವಿವೇಕ್ ಅಗ್ನಿಹೋತ್ರಿ, ‘ಇದು ಕೇವಲ ಚಿತ್ರವಲ್ಲ, ಸತ್ಯವನ್ನು ಹೇಳುತ್ತದೆ. ’ಆಪರೇಷನ್ ಸಿಂಧೂರ’ ಕೇವಲ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ಪ್ರತೀಕಾರವಲ್ಲ, ಬದಲಾಗಿ, ಭಾರತ ತನ್ನ ಯುದ್ಧದ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದೆ. ಇದಕ್ಕಾಗಿ ನಾನು ಮತ್ತು ತಂಡ ಆಳವಾಗಿ ಅಧ್ಯಯನ ನಡೆಸಿದ್ದೇವೆ. ವಿವಿಧ ಸೇನೆಗಳ ಮುಖಂಡರನ್ನು ಭೇಟಿ ಮಾಡಿ, ಏನೆಲ್ಲಾ ಘಟನೆಗಳು ನಡೆದವು ಎಂಬುದನ್ನು ತಿಳಿದುಕೊಂಡಿದ್ದೇವೆ’ ಎಂದಿದ್ದಾರೆ. -ಏಜೆನ್ಸೀಸ್
ಪಾಕಿಸ್ತಾನದ ವಿರುದ್ಧ ಪ್ರತೀಕಾರ
ಅದು 2025ರ ಏಪ್ರಿಲ್ 22. ಜಮ್ಮು ಕಾಶ್ಮೀರದ ಪಹಲ್ಗಾಮ್‌ಗೆ ತೆರಳಿದ್ದ ಭಾರತೀಯ ಪ್ರವಾಸಿಗರ ಮೇಲೆ ಪಾಕಿಸ್ತಾನದ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಅಮಾಯಕರು ಬಲಿಯಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಎಂಬ ಹೆಸರಿನಲ್ಲಿ ಮೇ 7ರಂದು ಕಾರ್ಯಾಚರಣೆ ನಡೆಸಿ, ಉಗ್ರರ ಅಡುಗುತಾಣಗಳಿಗೆ ಹೊಕ್ಕು ಸದೆಬಡೆದಿತ್ತು. ಈ ಕಾರ್ಯಾಚರಣೆ ಕುರಿತು ನಿವೃತ್ತ ಸೇನಾಧಿಕಾರಿ ಕೆ.ಜೆ.ಎಸ್. ‘ಟೈನಿ’ ಧಿಲ್ಲಾನ್ ‘ಆಪರೇಷನ್ ಸಿಂಧೂರ್’ ರಚಿಸಿದ್ದು, ಈ ಪುಸ್ತಕಧಾರಿತವಾಗಿ ಸಿನಿಮಾ ಮೂಡಿಬರಲಿದೆ. 2025ರ ಮೇ 6ರಿಂದ 10ರೊಳಗೆ ನಡೆದ ಘಟನೆಗಳ ಮೇಲೆ ಸಿನಿಮಾ ಬೆಳಕು ಚೆಲ್ಲಲಿದೆ.