ಆ ನಾಲ್ಕು ಗಂಟೆ... ಧುರಂಧರ್​ 2 ಸಿನಿಮಾ ವೀಕ್ಷಿಸಿ ಅಚ್ಚರಿ ಹೇಳಿಕೆ ನೀಡಿದ ರನ್​ ಮೆಷಿನ್​ ವಿರಾಟ್​ ಕೊಹ್ಲಿ! Virat Kohli  
ಬಾಲಿವುಡ್

ಆ ನಾಲ್ಕು ಗಂಟೆ... ಧುರಂಧರ್​ 2 ಸಿನಿಮಾ ವೀಕ್ಷಿಸಿ ಅಚ್ಚರಿ ಹೇಳಿಕೆ ನೀಡಿದ ರನ್​ ಮೆಷಿನ್​ ವಿರಾಟ್​ ಕೊಹ್ಲಿ! Virat Kohli

ಪ್ರಮುಖ ಮುಖ್ಯಾಂಶಗಳು

  • ಸದ್ಯ ಬಾಲಿವುಡ್​ನಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರೆಂದರೆ ಅದು ಧುರಂಧರ್​ 2
  • ಮಾರ್ಚ್​ 19ರಂದು ಬಿಡುಗಡೆಯಾದ ಧುರಂಧರ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ
  • ಅನೇಕ ಗಣ್ಯ ವ್ಯಕ್ತಿಗಳು ಈ ಸಿನಿಮಾವನ್ನು ನೋಡಿ ಮನಸಾರೆ ಕೊಂಡಾಡುತ್ತಿದ್ದಾರೆ
  • ಇದೀಗ ಧುರಂಧರ್​-2 ಸಿನಿಮಾವನ್ನು ವೀಕ್ಷಿಸಿರುವ ವಿರಾಟ್​ ಕೊಹ್ಲಿ ಪ್ರಶಂಸೆಯ ಸುರಿಮಳೆಗೈದಿದ್ದಾರೆ
Virat Kohli : ಸದ್ಯ ಬಾಲಿವುಡ್​ನಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರೆಂದರೆ ಅದು ಧುರಂಧರ್​ 2. ಮೊದಲ ಭಾಗದ ಯಶಸ್ಸಿನ ಬೆನ್ನಲ್ಲೇ ಮಾರ್ಚ್​ 19ರಂದು ಬಿಡುಗಡೆಯಾದ ಧುರಂಧರ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಈಗಾಗಲೇ ವಿಶ್ವದಾದ್ಯಂತ 1500 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿರುವ ಧುರಂಧರ್​ 2 ಕೆಜಿಎಫ್​ ಮತ್ತು ಆರ್​ಆರ್​ಆರ್​ ಸಿನಿಮಾಗಳ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ಅನೇಕ ಗಣ್ಯ ವ್ಯಕ್ತಿಗಳು ಈ ಸಿನಿಮಾವನ್ನು ನೋಡಿ ಕೊಂಡಾಡುತ್ತಿದ್ದಾರೆ. ಸಿನಿಮಾ ಇತಿಹಾಸದಲ್ಲೇ ಇಲ್ಲಿಯವರೆಗೆ ಇಂಥದ್ದೊಂದು ಸ್ಪೈ ಥ್ರಿಲ್ಲರ್​ ಸಿನಿಮಾ ಬಂದಿರಲಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ, ಟೀಮ್​ ಇಂಡಿಯಾ ಸೂಪರ್​ ಸ್ಟಾರ್​, ದಾಖಲೆಗಳ ಸರದಾರ, ಚೇಸ್​ ಮಾಸ್ಟರ್​, ರನ್​ ಮೆಷಿನ್​ ಹಾಗೂ ಕ್ರಿಕೆಟ್​ ಲೋಕ ಕಿಂಗ್​ ಎಂದೇ ಖ್ಯಾತಿಯಾಗಿರುವ ವಿರಾಟ್​ ಕೊಹ್ಲಿ, ಧುರಂಧರ್​-2 ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದಾರೆ. 
ಇತ್ತೀಚೆಗೆ ಧುರಂಧರ್​ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾಗಿ ವಿರಾಟ್​ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬಹಿರಂಗಪಡಿಸಿದ್ದಾರೆ. ಇದು ಅದ್ಭುತ ಚಿತ್ರವಾಗಿದ್ದು, ಭಾರತೀಯ ಚಿತ್ರರಂಗದಲ್ಲಿ ಇಂತಹ ಅನುಭವವನ್ನು ನಾನು ಹಿಂದೆಂದೂ ನೋಡಿಲ್ಲ ಎಂದು ಕೊಹ್ಲಿ ಸಿಕ್ಕಾಪಟ್ಟೆ ಧುರಂಧರ್​ 2 ಸಿನಿಮಾವನ್ನು ಹೊಗಳಿದ್ದಾರೆ. 
ನಾನು ಇಂದು ಧುರಂಧರ್​ 2 ಸಿನಿಮಾ ನೋಡಿದೆ. ಭಾರತೀಯ ಚಿತ್ರರಂಗದಲ್ಲಿ ಇಂತಹ ಅದ್ಭುತ ಸಿನಿಮಾ ಅನುಭವವನ್ನು ನಾನು ಹಿಂದೆಂದೂ ನೋಡಿಲ್ಲ ಎಂದು ನಾನು ಹೇಳಬಲ್ಲೆ. ಅದು ಎಲ್ಲಾ ರೀತಿಯ ಭಾವನೆಗಳನ್ನು ಹೊರತಂದಿತು. ಸುಮಾರು 4 ಗಂಟೆಗಳ ಕಾಲ ನಾನು ಒಮ್ಮೆಯೂ ಕಣ್ಣು ಮಿಟುಕಿಸಲಿಲ್ಲ. ಆದಿತ್ಯ... ನೀವು ಸೃಷ್ಟಿಸಿದ ಈ ಪವಾಡದಲ್ಲಿ ನಿಮ್ಮ ಪ್ರತಿಭೆ ಮತ್ತು ದೃಢಸಂಕಲ್ಪ ಗೋಚರಿಸುತ್ತದೆ. ನಿಮಗೆ ಹ್ಯಾಟ್ಸ್ ಆಫ್. ನೀವು ಓರ್ವ ಮಹಾನ್​ ಪ್ರತಿಭೆ. ಎಲ್ಲಾ ನಟರು ತಮ್ಮ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ರಣವೀರ್ ಸಿಂಗ್ ಈ ಸಿನಿಮಾದ ನಂತರ ಹೊಸ ಎತ್ತರವನ್ನು ತಲುಪಿದ್ದಾರೆ. ನಿಮ್ಮ ನಟನೆ ಅದ್ಭುತವಾಗಿದೆ. ವಾವ್ ಎಂದು ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ.
'ಧುರಂಧರ್ 2' ಸಿನಿಮಾವು ಮೊದಲ ಭಾಗದ ಯಶಸ್ಸಿನ ನಂತರ ಸಿದ್ಧವಾಗಿರುವ ಒಂದು ಪಕ್ಕಾ ಕಮರ್ಷಿಯಲ್ ಆಕ್ಷನ್ ಎಂಟರ್ಟೈನರ್ ಆಗಿದೆ. ಈ ಚಿತ್ರದಲ್ಲಿ ಭರ್ಜರಿ ಆಕ್ಷನ್ ಸನ್ನಿವೇಶಗಳು, ರೋಚಕ ತಿರುವುಗಳು ಮತ್ತು ಪವರ್‌ಫುಲ್ ಸಂಭಾಷಣೆಗಳಿದ್ದು, ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುತ್ತಿದೆ. ಈ ಸಿನಿಮಾದಲ್ಲಿ ಖ್ಯಾತ ಬಾಲಿವುಡ್ ನಟ ರಣ್‌ವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಪಂಜಾಬ್ ರೆಜಿಮೆಂಟ್‌ನ ಸೈನಿಕ ಮತ್ತು ಗೂಢಚಾರಿ ಜಸ್ಕಿರತ್ ಸಿಂಗ್ ರಂಗಿ (ಹಮ್ಜಾ) ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಗಣವಿದ್ದು, ಸಂಜಯ್ ದತ್ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಆಗಿ, ಆರ್. ಮಾಧವನ್ ಐಬಿ (IB) ನಿರ್ದೇಶಕ ಅಜಯ್ ಸನ್ಯಾಲ್ ಆಗಿ ಮತ್ತು ಅರ್ಜುನ್ ರಾಂಪಾಲ್ ಪವರ್‌ಫುಲ್ ವಿಲನ್ ಮೇಜರ್ ಇಕ್ಬಾಲ್ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಕ್ಷಯ್ ಖನ್ನಾ, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಆದಿತ್ಯ ಧರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಇನ್ನೂ ಕ್ರಿಕೆಟ್​ ವಿಚಾರಕ್ಕೆ ಬರುವುದಾದರೆ, ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್‌ನಲ್ಲಿ ಬಿಜಿಯಾಗಿದ್ದಾರೆ. ತಾವು ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026 ರಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಈವರೆಗೂ ಆಡಿರುವ ಎರಡೂ ಪಂದ್ಯಗಳನ್ನು ಆರ್​ಸಿಬಿ ಗೆದ್ದಿದೆ. ಹೀಗಾಗಿ, ಉತ್ತಮ ನೆಟ್​ ರನ್​ ರೇಟ್​ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಆರ್​ಸಿಬಿ ಜಿಗಿದಿದೆ, (ಏಜೆನ್ಸೀಸ್​).