ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾ
- 2017ರಲ್ಲಿ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಾಲಿವುಡ್ ನಟ ವಿನೋದ್ ಖನ್ನಾ ವಿಧಿವಶ
- ಬ್ಲಾಡರ್ ಕ್ಯಾನ್ಸರ್‌ನಿಂದ ವಿನೋದ್ ಖನ್ನಾ ಸಾವು
- ಈ ಕಾಯಿಲೆಗೂ ಮೊದಲೇ ಅವರಿಗೆ ಆ ಸಮಸ್ಯೆ ಇತ್ತು ಎಂದ ಪತ್ನಿ
ಮುಂಬೈ: 2017ರಲ್ಲಿ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ವಿಧಿವಶರಾದ ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾ, ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಪತ್ನಿ ಕವಿತಾ, ಮಕ್ಕಳನ್ನು ಅಗಲಿದರು. ತಮ್ಮ ಪತಿಯ ಸಾವಿನ ಕೊನೆಯ ದಿನಗಳನ್ನು ನೆನೆದು ಭಾವುಕರಾದ ಕವಿತಾ ಖನ್ನಾ, ವಿನೋದ್ ಅವರ ಆರೋಗ್ಯ ಸಮಸ್ಯೆ ಎಷ್ಟು ಹದಗೆಟ್ಟಿತ್ತು ಎಂಬುದರ ಬಗ್ಗೆ ಕೆಲವು ಅಚ್ಚರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಖನ್ನಾ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಆದರೆ, ಅವರು ಬಹಳ ಹಿಂದೆಯೇ ಮತ್ತೊಂದು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಅವರ ಪತ್ನಿ ಕವಿತಾ ಖನ್ನಾ ತಿಳಿಸಿದ್ದಾರೆ. ಅದುವೇ ಶ್ವಾಸಕೋಶದ ಕ್ಯಾನ್ಸರ್. ಈ ಸಮಸ್ಯೆಯಿಂದ ಅವರು ತುಂಬ ನರಳುತ್ತಿದ್ದರೂ ಎಂಬುದೇ ನಮಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ವಿನೋದ್ ಖನ್ನಾ ಪತ್ನಿ ಹೇಳಿದ್ದೇನು?
"2001ರಲ್ಲಿ ವರ್ಷಕ್ಕೊಮ್ಮೆ ಮಾಡಿಸುವ ತಪಾಸಣೆಯಲ್ಲಿ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ವಿಪರೀತ ಸಿಗರೇಟ್ ಸೇದುತ್ತಿದ್ದ ಕಾರಣ, ಅವರಿಗೆ ಕ್ಯಾನ್ಸರ್ ತಗುಲಿತ್ತು. ದಿನಕ್ಕೆ 40ರಿಂದ 80 ಧಮ್ ಹೊಡೆಯುತ್ತಿದ್ದರು. ಮತ್ತು ಆ ಸಮಯದಲ್ಲಿ ವೈದ್ಯರು ಅವರ ಶ್ವಾಸಕೋಶದ ಭಾಗವನ್ನೇ ತೆಗೆಯಬೇಕು. ಇಲ್ಲವಾದರೆ, ಅಪಾಯ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದ್ದರು" ಎಂದರು.
"ನಾವು ಅನೇಕ ವೈದ್ಯಕೀಯ ಅಭಿಪ್ರಾಯಗಳನ್ನು ಪಡೆದ ಬಳಿಕ ಮುಂದಿನ ಹೆಜ್ಜೆಯಾಗಿ ಆಧ್ಯಾತ್ಮಿಕ ಮಾರ್ಗದರ್ಶನದತ್ತ ಒಲವು ತೋರಿದೆವು. ಅದಾದ ಬಳಿಕ ಆಗಾಗ್ಗೆ ಹಲವಾರು ಸ್ಕ್ಯಾನ್‌ಗಳನ್ನು ಮಾಡಿಸುತ್ತಿದ್ದೆವು. ಯಾವುದರಲ್ಲೂ ಅವರ ಶ್ವಾಸಕೋಶದ ಕ್ಯಾನ್ಸರ್‌ನ ಬಗ್ಗೆ ಸಾಕ್ಷಿಗಳನ್ನು ತೋರಿಸಲಿಲ್ಲ. ಆ ನಂತರ, ವಿದೇಶದಲ್ಲಿ ಪರಿಣಿತಿ ಹೊಂದಿರುವ ವೈದ್ಯರಿಗೂ ತೋರಿಸಿದೆವು. ಅಲ್ಲಿನ ವೈದ್ಯರು ಈ ಚೇತರಿಕೆ ನಂಬಲು ಸಾಧ್ಯವಾಗ್ತಿಲ್ಲ ಎಂದರು. ಇದೆಲ್ಲ ಮುಗಿತು ಎನ್ನುವ ಹೊತ್ತಿಗೆ ಅಂದರೆ 10 ವರ್ಷಗಳ ಬಳಿಕ ಅವರಿಗೆ ಬ್ಲ್ಯಾಡರ್ನಲ್ಲಿ ಕ್ಯಾನ್ಸರ್ ಪತ್ತೆಯಾಯಿತು. ಈ ಕಾಯಿಲೆಯ ವಿರುದ್ಧ ಅವರು ತಮ್ಮ ಉಸಿರಿನ ಕೊನೆವರೆಗೂ ಹೋರಾಡಿದರು" ಎಂದಿದ್ದಾರೆ.
ಕುಡಿತ ತ್ಯಜಿಸಿ
ಜರ್ಮನಿ, ಲಂಡನ್ನಿಂದ ಬಂದ ಮೇಲೆ ಖನ್ನಾಗೆ ವೈದ್ಯರು ಮದ್ಯಪಾನ ಮಾಡದಂತೆ ಎಚ್ಚರಿಸಿದರು. ಇದೆಲ್ಲವನ್ನೂ ಬಿಟ್ಟು ಆರೋಗ್ಯವಾಗಿಯೇ ಇದ್ದೀನಿ ಎನ್ನುವಂತೆ ಅವರಿದ್ದರು. ಆದ್ರೆ, ಒಳಗಿನಿಂದಲೇ ಕೊಲ್ಲುತ್ತ ಬಂದ ಬ್ಲಾಡರ್ ಕ್ಯಾನ್ಸರ್ಗೆ ವಿನೋದ್ ಬಲಿಯಾದರು ಎಂದು ಕವಿತಾ ಹೇಳಿದ್ದಾರೆ,(ಏಜೆನ್ಸೀಸ್).