ಅತಿ ಹೆಚ್ಚು ರನ್ಟೈಮ್ ಹೊಂದಿರುವ ಸಿನಿಮಾಗಳು
- ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ 'ಧುರಂಧರ್'
- 3 ಗಂಟೆ 49 ನಿಮಿಷಗಳ ರನ್ಟೈಮ್ ಹೊಂದಿರುವ ಸಿನಿಮಾ
- ಇದೇ ಮೊದಲಲ್ಲ, ಈ ಹಿಂದೆ ಹಲವು ಚಿತ್ರಗಳು ಇದಕ್ಕಿಂತ ಹೆಚ್ಚಿನ ರನ್ಟೈಮ್ ಹೊಂದಿವೆ
ಮುಂಬೈ: ಕಳೆದ ವರ್ಷ ಡಿಸೆಂಬರ್ನಲ್ಲಿ ಮೊದಲ ಭಾಗ ಮತ್ತು ಇತ್ತೀಚೆಗಷ್ಟೇ ರಿಲೀಸ್ ಆದ 'ಧುರಂಧರ್' ಚಿತ್ರದ ಎರಡನೇ ಭಾಗ ಸದ್ಯ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ನಟ ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ಬ್ಲಾಕ್ಬಸ್ಟರ್ ಚಿತ್ರ ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ ಮತ್ತು ಅಪಾರ ಸಂಖ್ಯೆಯ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಒಂದಷ್ಟು ನೈಜ ಘಟನೆಯನ್ನು ಆಧರಿಸಿ, ಕಾಲ್ಪನಿಕ ಕಥೆಯನ್ನು ಜೋಡಿಸಿ, ನೋಡುಗರಿಗೆ ಉತ್ತಮ ದೃಶ್ಯಗಳನ್ನು ಕಟ್ಟಿಕೊಟ್ಟಿರುವ 'ಧುರಂಧರ್', ಬರೋಬ್ಬರಿ 3 ಗಂಟೆ 49 ನಿಮಿಷಗಳ ದೀರ್ಘ ರನ್ಟೈಮ್ ಹೊಂದಿದೆ. ಮೊದಲ ಭಾಗಕ್ಕೆ ಹೋಲಿಸಿದರೆ, ಇದಕ್ಕೆ ಹೆಚ್ಚಿನ ಸಮಯ ನೀಡಲಾಗಿದೆ. ಅಷ್ಟು ಗಂಟೆಗಳ ಕಾಲ ಥಿಯೇಟರ್ನಲ್ಲಿ ಕುಳಿತು ಸಿನಿಮಾ ನೋಡುವುದು ಸವಾಲೇ ನಿಜ ಎಂದು ಅನೇಕರು ಅಭಿಪ್ರಾಯಿಸಿದ್ದಾರೆ. ಅಸಲಿಗೆ, ಧುರಂಧರ್ ಚಿತ್ರಕ್ಕಿಂತ ಹೆಚ್ಚು ರನ್ಟೈಮ್ ಹೊಂದಿರುವ ಸಿನಿಮಾಗಳು ಅದಾಗಲೇ ಚಿತ್ರಮಂದಿರಗಳಲ್ಲಿ ಸಿನಿಪ್ರೇಕ್ಷಕರನ್ನು ಮನರಂಜಿಸಿ ಹೋಗಿವೆ.
ದಶಕಗಳ ಹಿಂದೆಯೇ 4 ಗಂಟೆಗೂ ಮೀರಿದ ರನ್ಟೈಮ್ ಹೊಂದಿರುವ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಗಳಿಸಿವೆ. ಹಾಗೆ ನೋಡುವುದಾದರೆ, ಧುರಂಧರ್ ಚಿತ್ರದ ರನ್ಟೈಮ್ ಏನೇನೂ ಅಲ್ಲ. ಕಳೆದ ವರ್ಷಗಳಲ್ಲಿ ದೀರ್ಘ ಸಮಯವನ್ನು ಹೊಂದಿರುವ ಸಿನಿಮಾಗಳು ಬಂದಿರುವುದು ತೀರ ಕಡಿಮೆಯೇ. ಇಲ್ಲಿವೆ ನೋಡಿ ಅತಿ ಹೆಚ್ಚು ರನ್ಟೈಮ್ ಹೊಂದಿದ ಅಗ್ರ 5 ಭಾರತೀಯ ಚಿತ್ರಗಳು.
1. LOC: ಕಾರ್ಗಿಲ್ (2003)
ಜೆ.ಪಿ. ದತ್ತ ಅವರ ಕಾರ್ಗಿಲ್ ಯುದ್ಧ ಆಧರಿಸಿದ ಈ ಚಿತ್ರವು ಬರೋಬ್ಬರಿ 4 ಗಂಟೆ 15 ನಿಮಿಷಗಳ (255 ನಿಮಿಷ) ರನ್ಟೈಮ್ ಹೊಂದಿದೆ. ಡಿಸೆಂಬರ್ 2023ರಲ್ಲಿ ಬಿಡುಗಡೆಯಾದ ಈ ಬ್ಲಾಕ್ಬಸ್ಟರ್ ಸಿನಿಮಾದಲ್ಲಿ ಅಕ್ಷಯ್ ಖನ್ನಾ, ಸಂಜಯ್ ದತ್, ಅಜಯ್ ದೇವಗನ್, ಸೈಫ್ ಅಲಿ ಖಾನ್ ಮತ್ತು ಸುನಿಲ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣವೇ ನಟಿಸಿದೆ.
2. ಮೇರಾ ನಾಮ್ ಜೋಕರ್ (1970)
ರಾಜ್ ಕಪೂರ್ ನಿರ್ದೇಶಿಸಿದ ಈ ಚಿತ್ರವು 3 ದಶಕಗಳಿಗೂ ಹೆಚ್ಚು ಕಾಲ ಭಾರತೀಯ ರಂಗಭೂಮಿ ಟೈಟಲ್ ಆಗಿಯೇ ಉಳಿದಿದೆ. 4 ಗಂಟೆ 8 ನಿಮಿಷಗಳ (248 ನಿಮಿಷ) ರನ್ಟೈಮ್ ಹೊಂದಿದ ಸಿನಿಮಾ, ಚಿತ್ರಮಂದಿರಗಳಲ್ಲಿ ಫ್ಲಾಪ್ ಆಯಿತು. ಸಿಮಿ ಗರೆವಾಲ್, ಕ್ಸೇನಿಯಾ ರಿಯಾಬಿಂಕಿನಾ, ಪದ್ಮಿನಿ, ಮನೋಜ್ ಕುಮಾರ್, ರಾಜೇಂದ್ರ ಕುಮಾರ್, ಧರ್ಮೇಂದ್ರ ಮತ್ತು ದಾರಾ ಸಿಂಗ್ ಸೇರಿದಂತೆ ಮುಂತಾದ ಕಲಾವಿದರು ನಟಿಸಿದ್ದಾರೆ.
3. ಸಂಗಮ್ (1964)
ಲಂಡನ್, ಪ್ಯಾರಿಸ್ ಮತ್ತು ಸ್ವಿಟ್ಜರ್ಲೆಂಡ್ ಸೇರಿ ವಿದೇಶಗಳಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರಗಳಲ್ಲಿ ಒಂದಾದ 'ಸಂಗಮ್' ಒಂದು ಪ್ರಣಯ ಸಂಗೀತ ನಾಟಕವಾಗಿದ್ದು, ಇದನ್ನು ರಾಜ್ ಕಪೂರ್ ನಿರ್ದೇಶಿಸಿದ್ದಾರೆ. 3 ಗಂಟೆ 58 ನಿಮಿಷಗಳ (238 ನಿಮಿಷ) ಚಿತ್ರದಲ್ಲಿ ವೈಜಯಂತಿಮಾಲ ಮತ್ತು ರಾಜೇಂದ್ರ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
4. ಧುರಂಧರ್ 2: ದಿ ರಿವೆಂಜ್ (2026)
ಆದಿತ್ಯ ಧರ್ ನಿರ್ದೇಶಿಸಿದ ಮತ್ತು ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2'. ಮಾರ್ಚ್ 19ರಂದು ತೆರೆಕಂಡಿರುವ 'ದಿ ರಿವೆಂಜ್' 3 ಗಂಟೆ 49 ನಿಮಿಷಗಳ (229 ನಿಮಿಷ) ಪ್ರದರ್ಶನವನ್ನು ಹೊಂದಿದೆ. ಪ್ರಸ್ತುತ, ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಾಣುತ್ತಿದ್ದು, ಪ್ರೇಕ್ಷಕರಿಂದ ಥಿಯೇಟರ್ಗಳು ತುಂಬುತ್ತಿರುವುದು ಖುಷಿಯ ಸಂಗತಿ.
5. ಲಗಾನ್ (2001)
ಅಮೀರ್ ಖಾನ್ ನಟಿಸಿದ ಕ್ರೀಡಾ ಡ್ರಾಮಾ ಚಿತ್ರವು ಬರೋಬ್ಬರಿ 3 ಗಂಟೆ 44 ನಿಮಿಷಗಳ (224 ನಿಮಿಷ) ರನ್ಟೈಮ್ ಹೊಂದಿದೆ. ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ ಈ ಚಿತ್ರದಲ್ಲಿ ಗ್ರೇಸಿ ಸಿಂಗ್, ರಾಚೆಲ್ ಶೆಲ್ಲಿ ಮತ್ತು ಪಾಲ್ ಬ್ಲ್ಯಾಕ್‌ಥಾರ್ನ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಿಲೀಸ್ ಆದ ಸಮಯದಲ್ಲಿ ಇದು ಅತ್ಯಂತ ದುಬಾರಿ ಭಾರತೀಯ ಚಿತ್ರ ಎಂದು ವರದಿಯಾಯಿತು,(ಏಜೆನ್ಸೀಸ್).