ಧುರಂಧರ್ ಚಿತ್ರದ ನಟ ಅರ್ಜುನ್ ರಾಂಪಾಲ್
- ಮಾ.19ರಂದು ಜಾಗತಿಕವಾಗಿ ತೆರೆಕಂಡ 'ಧುರಂಧರ್ 2'
- ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ಸಿನಿಮಾ
- 2008ರ ಮುಂಬೈ ದಾಳಿ ನೆನೆದ ನಟ ಅರ್ಜುನ್ ರಾಂಪಾಲ್
- ಧುರಂಧರ್ ನನ್ನ ಸೇಡಿನ ಸಿನಿಮಾ ಎಂದ ನಟ
ಬೆಂಗಳೂರು: ಕಳೆದ ವಾರ ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡ ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ಸ್ಪೈ-ಥ್ರಿಲ್ಲರ್ 'ಧುರಂಧರ್ 2' (Dhurandhar 2) ಇದೀಗ ಬ್ಲಾಕ್ಬಸ್ಟರ್ ಹಿಟ್ ಸಾಲಿಗೆ ಸೇರ್ಪಡೆಗೊಂಡಿದೆ. ಕೇವಲ ಬಾಕ್ಸ್ ಆಫೀಸ್ನಲ್ಲಿ ಮಾತ್ರ ಅಬ್ಬರಿಸದ ರಣವೀರ್ ಚಿತ್ರ, ಸಿನಿಪ್ರಿಯರ ಕುತೂಹಲವನ್ನು ಭಾಗ 1ಕ್ಕಿಂತ 2ರಲ್ಲಿ ದುಪ್ಪಟ್ಟಾಗಿಸಿದೆ. ರಿಲೀಸ್ ಆದ ನಾಲ್ಕೇ ದಿನಕ್ಕೆ 'ರಿವೆಂಜ್' ಕಥೆಯನ್ನೊಳಗೊಂಡ ಈ ಸಿನಿಮಾ ವಿಶ್ವಾದ್ಯಂತ 500 ಕೋಟಿ ರೂ. ಕ್ಲಬ್ ಸೇರಿದೆ. ಇದು ಚಿತ್ರತಂಡಕ್ಕೆ ಅತಿದೊಡ್ಡ ಯಶಸ್ಸನ್ನು ತಂದೊಟ್ಟಿದೆ.
ಈಗಾಗಲೇ ಸಿನಿಮಾ ನೋಡಿರುವ ಪ್ರೇಕ್ಷಕರು ಚಿತ್ರತಂಡದ ಶ್ರಮಕ್ಕೆ, ತೋರಿಸುವ ರೀತಿಗೆ ಮೆಚ್ಚುಗೆ, ಪ್ರಶಂಸೆ ಮತ್ತು ಉತ್ತಮ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಮತ್ತೊಂದೆಡೆ, ನಟ ರಣವೀರ್ ಸಿಂಗ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿರುವುದು ಚಿತ್ರದ ಗೆಲುವಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಕೇವಲ ರಣವೀರ್ ಪಾತ್ರ ಮಾತ್ರವಲ್ಲ, ಅವರೊಟ್ಟಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಅಕ್ಷಯ್ ಖನ್ನಾ, ಸಾರಾ ಅರ್ಜುನ್ ಮತ್ತು ಅರ್ಜುನ್ ರಾಂಪಾಲ್ ಕೂಡ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಧುರಂಧರ್ 2 ಭರ್ಜರಿ ಯಶಸ್ಸಿನ ಬೆನ್ನಲ್ಲೇ ತಮ್ಮ ಹಳೆಯ ಸೇಡಿನ ಬಗ್ಗೆ ತುಟಿಬಿಚ್ಚಿದ ನಟ ಅರ್ಜುನ್ ರಾಂಪಾಲ್, ಈ ಚಿತ್ರ ನನ್ನ ದ್ವೇಷದ ಕಿಚ್ಚನ್ನು ತೀರಿಸಿಕೊಳ್ಳಲು ತುಂಬ ಸಹಾಯ ಮಾಡಿತು. ಅದಕ್ಕಾಗಿ, ನಮ್ಮ ನಿರ್ದೇಶಕ ಆದಿತ್ಯ ಧರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. 2008ರಲ್ಲಿ ಪಾಕಿಸ್ತಾನ ಉಗ್ರರು ಮುಂಬೈನ ತಾಜ್ ಹೋಟೆಲ್ ಮೇಲೆ ನಡೆಸಿದ ದಾಳಿ ನನ್ನನ್ನು ಮಾನಸಿಕ ಖಿನ್ನತೆಗೆ ದೂಡಿತ್ತು. ಕಾರಣ, ಅಂದು ಆ ದುರಂತ ಸಂಭವಿಸಿದ ನಾನೂ ಅಲ್ಲಿಯೇ ಇದ್ದೆ ಎಂದಿದ್ದಾರೆ.
ಆ ದುರಂತ ಸಂಭವಿಸಿದ ದಿನವೇ ನನ್ನ ಜನ್ಮದಿನ. ಹಾಗಾಗಿ, ಈಗಲೂ ಘಟನೆ ದುಃಖ ಕೊಡುತ್ತೆ. ಹುಟ್ಟುಹಬ್ಬವನ್ನು ಸ್ನೇಹಿತರ ಜೊತೆ ಆಚರಿಸಿಕೊಳ್ಳಲು ತಾಜ್ ಹೋಟೆಲ್ ಬುಕ್ ಮಾಡಿದ್ದೆ. ಘಟನೆಯ ಹಿಂದಿನ ದಿನ ಅಲ್ಲಿಯೇ ಉಳಿದುಕೊಂಡಿದ್ದೆ. ನನ್ನನ್ನು ಭೇಟಿಯಾಗಲು ಬಂದ ಸ್ನೇಹಿತರನ್ನು ಕರೆದುಕೊಂಡು ಬರಲು ಹೊರಗೆ ಹೋಗಿದ್ದೆ. ನಮ್ಮ ಪುಣ್ಯ, ಅವತ್ತು ನಾವೆಲ್ಲ ಬಾರ್ನಲ್ಲಿ ಇದ್ದೆವು. ಆರ್ಡರ್ ಮಾಡಿದ ಕೆಲವೇ ಹೊತ್ತಲ್ಲಿ ಮೊದಲ ಬಾಂಬ್ ಮಹೀಮ್ ಸಮೀಪದಲ್ಲಿ ಬ್ಲಾಸ್ಟ್ ಆಯಿತು. ಜೋರು ಶಬ್ದ ಕೇಳಿ ಒಂದು ನಿಮಿಷ ಮೈಕಂಪಿಸಿತು. ಏನಾಯಿತು ಎಂದು ಗಾಬರಿಗೊಂಡೆವು ಎಂದರು.
ಆರಂಭದಲ್ಲಿ ಇದೊಂದು ಗ್ಯಾಂಗ್ ವಾರ್ ಎಂದು ಹಲವರು ಹೇಳಿದರು. ಘಟನೆಯ 10 ನಿಮಿಷಗಳಲ್ಲಿ, ನಮ್ಮ ಫೋನ್‌ಗಳು ಅಲರ್ಟ್ ಆದವು. ಕೊಲಾಬಾದಲ್ಲಿ ಯಾವುದೋ ಗ್ಯಾಂಗ್ ವಾರ್ ಭುಗಿಲೆದ್ದಿದೆ ಎಂಬ ಸಂದೇಶ ಬಂದಿತು. ನನ್ನ ಹುಟ್ಟುಹಬ್ಬದಂದೇ 26/11 ಭೀಕರ ದಾಳಿಯನ್ನು ನಾನು ನೋಡಿದೆ. ಘಟನೆಯ ಮರುದಿನ ಬೆಳಗ್ಗೆ ನಾನು ಮನೆಗೆ ಹಿಂತಿರುಗುವಾಗ, ನನ್ನ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಯಾವಾಗ ನಿರ್ದೇಶಕರು ಚಿತ್ರದಲ್ಲಿ 26/11 ದೃಶ್ಯವನ್ನು ನನಗೆ ವಿವರಿಸಿದರೋ, ಆಗಲೇ ಅಂದುಕೊಂಡೆ ಇದು ನನ್ನ ಸೇಡಿನ ಸಮಯ ಎಂದು. 'ಧುರಂಧರ್'ನಲ್ಲಿ ನಾನು ಮಾಡಿದ್ದು ಅದನ್ನೇ. ಇಲ್ಲಿ ಹೇಳಲು ಬಯಸುವುದು ಒಂದೇ 'ಭಾರತ್ ಮಾತಾ ಕಿ ಜೈ' ಎಂದು ಭಾವುಕರಾದರು,(ಏಜೆನ್ಸೀಸ್).