'ಬಾರ್ಡರ್ 2' ಹಾಗೂ 'ಧುರಂದರ್' ಚಿತ್ರದ ಪೋಸ್ಟರ್ಗಳು
- ವರುಣ್ ಧವನ್, ಸನ್ನಿ ಡಿಯೋಲ್ ನಟನೆಯ ಬಾರ್ಡರ್ 2
- ಬಹುನಿರೀಕ್ಷಿತ ಚಿತ್ರದ ರಿಲೀಸ್ಗೆ ತಟ್ಟಿದ ತಾಂತ್ರಿಕ ದೋಷ
- ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಿದ್ದ ಸಿನಿಪ್ರಿಯರಿಗೆ ಭಾರೀ ನಿರಾಶೆ
ಮುಂಬೈ: ಬಾಲಿವುಡ್ನ ಬಹುನಿರೀಕ್ಷಿತ 'ಬಾರ್ಡರ್ 2' ಸಿನಿಮಾ ಇಂದು ದೇಶವ್ಯಾಪಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆಗಳನ್ನೇ ಪಡೆದುಕೊಳ್ಳುತ್ತಿದೆ. ಆದರೆ, ಮೊದಲ ದಿನದ ಮೊದಲ ಶೋಗೆ ಉಂಟಾದ ತಾಂತ್ರಿಕ ಸಮಸ್ಯೆಗಳು ಸದ್ಯ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಕಾಡಿದ್ದಂತು ಸತ್ಯ.
'ಧುರಂದರ್' ಬಳಿಕ ಬಾಲಿವುಡ್ನ ಮತ್ತೊಂದು ಚಿತ್ರದ ಮೇಲೆ ಭಾರೀ ನಿರೀಕ್ಷೆ ಹಾಗೂ ಹೈಪ್ ಪಡೆದ ನಟ ಸನ್ನಿ ಡಿಯೋಲ್, ವರುಣ್ ಧವನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಬಾರ್ಡರ್ 2' ಚಿತ್ರದ ಮಾರ್ನಿಂಗ್ ಶೋಗೆ ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಿಕೊಂಡಿದ್ದ ಸಿನಿಪ್ರಿಯರಿಗೆ ಕೊನೆ ಸಮಯದಲ್ಲಿ ಭಾರೀ ನಿರಾಶೆ ಉಂಟಾಯಿತು. ಕಾರಣ, ಟೆಕ್ನಿಕಲ್ ಸಮಸ್ಯೆಯಿಂದ ಬೆಳಗ್ಗಿನ ಶೋಗಳು ದಿಢೀರ್ ರದ್ದಾಯಿತು. ಈ ತೊಂದರೆ ಒಂದಲ್ಲ, ಎರಡಲ್ಲ ಹಲವು ಚಿತ್ರಮಂದಿರಗಳಲ್ಲಿ ಕಾಡಿತು.
ಮಾರ್ನಿಂಗ್ ಶೋಗಳು ಕ್ಯಾನ್ಸಲ್
ಇಂದು ಬೆಳಗ್ಗೆ 7.30 ಮತ್ತು 8 ಗಂಟೆಯ ಫಸ್ಟ್ ಶೋಗಳನ್ನು ಎಂದಿನಂತೆ ಪ್ರಸಾರ ಮಾಡಲು ನಿಗದಿ ಪಡಿಸಲಾಗಿತ್ತು. ಆದಾಗ್ಯೂ, ತಾಂತ್ರಿಕ ಸಮಸ್ಯೆಗಳಿಂದಾಗಿ, ಚಿತ್ರದ ಫೈನಲ್ ಪ್ರಿಂಟ್ ಅನ್ನು ಕೆಲವು ಚಿತ್ರಮಂದಿರಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸಲು ಸಾಧ್ಯವಾಗಲಿಲ್ಲ. ವರದಿಗಳ ಪ್ರಕಾರ, 192 ನಿಮಿಷಗಳ ದೊಡ್ಡ ರನ್ಟೈಮ್ ಹೊಂದಿರುವ ಬಾರ್ಡರ್ 2 ಚಿತ್ರದ ಡೌನ್ಲೋಡಿಂಗ್ ಸುಮಾರು 3ರಿಂದ 4 ಗಂಟೆಗಳ ಅವಧಿ ತೆಗೆದುಕೊಂಡಿದ್ದೇ ಪ್ರದರ್ಶಕರಿಗೆ ಬೆಳಗಿನ ಶೋಗಳನ್ನು ರದ್ದು ಮಾಡುವಂತಾಯಿತು ಎಂದು ವರದಿಯಾಗಿದೆ.
ಧುರಂದರ್ಗೂ ಇದೇ ಸಮಸ್ಯೆ ಕಾಡಿತ್ತು!
ಈ ಸಮಸ್ಯೆ ಕೇವಲ 'ಬಾರ್ಡರ್ 2' ಚಿತ್ರಕ್ಕೆ ಮಾತ್ರವಲ್ಲ, ರಣವೀರ್ ಸಿಂಗ್ ಅಭಿನಯದ ಬ್ಲಾಕ್ಬಸ್ಟರ್ ಹಿಟ್ 'ಧುರಂದರ್'ಗೂ ತಟ್ಟಿದೆ ಎನ್ನಲಾಗಿದೆ. ಡಿ.04ರಂದು ಪ್ರೀಮಿಯರ್ ಶೋ ಪ್ರಸಾರಕ್ಕೆ ಮುಂದಾಗಿದ್ದ ಚಿತ್ರತಂಡಕ್ಕೆ ಇದೇ ರೀತಿ ಟೆಕ್ನಿಕಲ್ ಸಮಸ್ಯೆಗಳು ಕಾಡತೊಡಗಿತು. ಸದ್ಯ ವರುಣ್ ಧವನ್ ಸಿನಿಮಾಗೆ ಕಾಡಿರುವ ಸಮಸ್ಯೆಯಿಂದ ಮೊದಲ ದಿನದ ಗಳಿಕೆಗೆ ಹೊಡೆತ ಬಿದ್ದಿದ್ದು, ಗಳಿಕೆಯಲ್ಲಿ ವ್ಯತ್ಯಾಸ ಕಂಡುಬರಲಿದೆ ಎಂಬುದು ಖಚಿತ,(ಏಜೆನ್ಸೀಸ್).