ಮುಂಬೈ: ಆದಿತ್ಯ ಧರ್ ನಿರ್ದೇಶನದ ಧುರಂಧರ್ 2 ಇದೀಗ ಜಾಗತಿಕವಾಗಿ ಪ್ರಶಂಸೆ ಮತ್ತು ಪ್ರಾಬಲ್ಯ ಸಾಧಿಸಿದೆ. ಈ ಸಿನಿಮಾ ನೋಡಿದ ನಂತರ ಅನೇಕ ಅಭಿಮಾನಿಗಳು ಕಥೆಯನ್ನು ಹಾಡಿ ಹೊಗಳುತ್ತಿದ್ದಾರೆ. ಆದಾಗ್ಯೂ, ಚಿತ್ರದ ಬಗ್ಗೆ ಹೆಚ್ಚುತ್ತಿರುವ ಸಂಚಲನದ ನಡುವೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಹಂಚಿಕೊಂಡಿದ್ದಾರೆ ಎನ್ನಲಾದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸ್ಕ್ರೀನ್‌ಶಾಟ್‌ನಲ್ಲಿ ಶಾರುಖ್ ಧುರಂಧರ್ ಚಿತ್ರವನ್ನು ಹೊಗಳಿದ್ದು, ಚಿತ್ರದ ಅಭಿನಯ, ಪ್ರಮಾಣ ಮತ್ತು ಭಾವನಾತ್ಮಕ ಆಳವನ್ನು ಶ್ಲಾಘಿಸುವ ದೀರ್ಘ ಟಿಪ್ಪಣಿ ಇದೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಪೋಸ್ಟ್ನಲ್ಲೇನಿದೆ?
ಈಗಷ್ಟೇ 'ಧುರಂಧರ್ 2' ಸಿನಿಮಾ ನೋಡಿದೆ... ನಿಜ ಹೇಳಬೇಕೆಂದರೆ, ಸಿನಿಮಾ ಮನಸ್ಸಿನಲ್ಲೇ ಉಳಿದುಬಿಡುತ್ತದೆ. ಹೆಮ್ಮೆ ಮತ್ತು ಶಕ್ತಿಯಿಂದ ಕೂಡಿದ ಚಿತ್ರವಿದು. ಪ್ರತಿಯೊಂದು ಕ್ಷಣ ಕೂಡಾ ನೇರವಾಗಿ ಹೃದಯಕ್ಕೆ ತಟ್ಟುತ್ತದೆ ಇದನ್ನೇ ಅಸಲಿ ಸಿನಿಮಾ ಎನ್ನೋದು. ಅದ್ಭುತ ನಟನೆ, ದೈತ್ಯಾಕಾರದ ಮೇಕಿಂಗ್ ಮತ್ತು ಪ್ರತಿಯೊಂದನ್ನೂ ಅನುಭವಿಸುವಂತೆ ಮಾಡುವ ಕಥೆ ಹೇಳುವ ರೀತಿ ಅದ್ಭುತವಾಗಿದೆ.
ರಣವೀರ್ ಸಿಂಗ್ ಅವರ ಎಮೋಷನ್ ಅಬ್ಬಾ! ಇಡೀ ತಂಡಕ್ಕೆ ನನ್ನ ತುಂಬು ಪ್ರೀತಿ. ಆದಿತ್ಯ ಧರ್ ಅವರು ಎಂದಾದರೂ ನನಗೊಂದು ಸಿನಿಮಾದಲ್ಲಿ ಅವಕಾಶ ನೀಡುತ್ತಾರೆ ಎಂದು ಭಾವಿಸುತ್ತೇನೆ. ಅವರೊಂದಿಗೆ ಕೆಲಸ ಮಾಡಲು ನಾನು ಹಪಹಪಿಸುತ್ತಿದ್ದೇನೆ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
ವೈರಲ್ ಕಥೆಯ ಹಿಂದಿನ ಸತ್ಯ
ಈ ಪೋಸ್ಟ್ ಎಲ್ಲೆಡೆ ವೈರಲ್ ಆದ ನಂತರ ಇದು ನಕಲಿ ಎಂದು ದೃಢಪಟ್ಟಿದೆ. ಆದಾಗ್ಯೂ, ಖಾನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಂತಹ ಯಾವುದೇ ಪೋಸ್ಟ್ಗಳನ್ನು ಹಂಚಿಕೊಂಡಿಲ್ಲ. ಇದೊಂದು ಸಾಮಾಜಿಕ ಬಳಕೆದಾರರು ಡಿಜಿಟಲ್ ರೂಪದಲ್ಲಿ ರಚಿಸಿರುವಂತೆ ಕಂಡುಬಂದಿದೆ.
ಪೋಸ್ಟ್ ಸುಳ್ಳು ಎಂದು ಅನೇಕ ಬಳಕೆದಾರರು ಬೇಗನೆ ಗಮನಿಸಿ, ಇದನ್ನು ಎಡಿಟ್ ಮಾಡಲಾಗಿದೆ. ಶಾರುಖ್ ಖಾನ್ ಈ ಕಥೆಯನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಶಾರುಖ್ ಅವರ ಮುಂಬರುವ ಚಿತ್ರ
ವೃತ್ತಿ ಜೀವನದಲ್ಲಿ ಶಾರುಖ್ ಖಾನ್ ಸಿದ್ಧಾರ್ಥ್ ಆನಂದ್ ನಿರ್ದೇಶನದ ಕಿಂಗ್ ಚಿತ್ರದ ಶೂಟಿಂಗ್ನಲ್ಲಿದ್ದಾರೆ. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಸುಹಾನಾ ಖಾನ್, ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ಅನಿಲ್ ಕಪೂರ್, ಅರ್ಷದ್ ವಾರ್ಸಿ, ರಾಘವ್ ಜುಯಾಲ್ ಮತ್ತು ಜೈದೀಪ್ ಅಹ್ಲಾವತ್ ನಟಿಸುತ್ತಿದ್ದಾರೆ (ಏಜೆನ್ಸೀಸ್).