ಕೆಲವು ಸಿನಿಮಾಗಳು ಮೊದಲ ಬಾರಿ ರಿಲೀಸ್ ಆದಾಗ ಹೆಚ್ಚು ಸದ್ದು ಮಾಡುವುದಿಲ್ಲ. ಆದರೆ, ಯೂಟ್ಯೂಬ್ ಅಥವಾ
ಟಿವಿಯಲ್ಲಿ ಬಂದಾಗ, ಪ್ರೇಕ್ಷಕರಿಗೆ ಅದ್ಭುತ ಅಂತನ್ನಿಸಿಬಿಡುತ್ತವೆ. 2018ರ "ತುಂಬಾದ್' ಜನರಿಗೆ ಅದೇ ಅನುಭವ ನೀಡಿದ್ದ ಚಿತ್ರ. ರಾಹಿ ಅನಿಲ್ ಬಾರ್ವೆ ನಿರ್ದೇಶನದ ಸೋಹಮ್ ಶಾ ನಟಿಸಿದ್ದ ಈ ಹಾರರ್ ಸಿನಿಮಾ ಬಿಡುಗಡೆಯಾದಾಗ ಹೆಚ್ಚು ಸದ್ದು ಮಾಡಿರಲಿಲ್ಲ. ಹಾಕಿದ ಬಜೆಟ್ನಷ್ಟೇ ಗಳಿಕೆ ಮಾಡಿಕೊಂಡು ಥಿಯೇಟರ್ಗಳಿಂದ ಹೊರಬಂದಿತ್ತು. ಆದರೆ, ಯೂಟ್ಯೂಬ್ನಲ್ಲಿ ನೋಡಿದ ಜನ ಚಿತ್ರವನ್ನು ಹಾಡಿ ಹೊಗಳಿದ್ದರು. ಆ ಬಳಿಕ 2024ರಲ್ಲಿ ಸಿನಿಮಾ ರಿ&ರಿಲೀಸ್ ಆಗಿ, ₹38 ಕೋಟಿ ಗಳಿಕೆ ಮಾಡಿಕೊಳ್ಳುವ ಮೂಲಕ, ಮರುಬಿಡುಗಡೆಯಾಗಿ ಅತಿ ಹೆಚ್ಚು ಕಲೆಕ್ಷನ್ ಮಾಡಿಕೊಂಡ ಎರಡನೇ ಬಾಲಿವುಡ್ ಸಿನಿಮಾ ಎಂಬ ದಾಖಲೆ ಬರೆಯಿತು. ಅದೇ ಸಮಯದಲ್ಲಿ "ತುಂಬಾದ್ 2' ಬಗ್ಗೆ ನಾಯಕ ಸೋಹಮ್ ಹೇಳಿಕೊಂಡಿದ್ದರು.
ಕೆಲ ತಿಂಗಳ ಹಿಂದೆ ನವಾಜುದ್ದಿನ್ ಸಿದ್ದಿಕಿ ಚಿತ್ರತಂಡ ಸೇರಿರುವ ಬಗ್ಗೆ ವರದಿಯಾಗಿತ್ತು. ಇದೀಗ ಶೂಟಿಂಗ್ ಪ್ರಾರಂಭಿಸಿರುವ "ತುಂಬಾದ್ 2' ತಂಡ, ಹೊಸ ಟೀಸರ್ ಮೂಲಕ ಅಪ್ಡೇಟ್ ನೀಡಿದೆ. ಮೊದಲ ಭಾಗದಲ್ಲಿ ಮನುಷ್ಯನ ಹಣದಾಹದ ಕುರಿತ ಕಥೆಯಿದ್ದರೆ, ಸೀಕ್ವೆಲ್ನಲ್ಲಿ ಸಾವನ್ನು ಗೆಲ್ಲುವ ಮದ್ದಿನ ಕುರಿತ ಕಥೆಯಿರಲಿದೆ ಎನ್ನಲಾಗಿದೆ. ಚಿತ್ರಕ್ಕೆ "ಪ್ರಳಯ ಬರಲಿದೆ' ಎಂಬ ಅಡಿಬರಹವಿದ್ದು, ಮೊದಲ ಭಾಗಕ್ಕಿಂತ ದೊಡ್ಡ ಮಟ್ಟದಲ್ಲಿ ಸೀಕ್ವೆಲ್ ಮೂಡಿಬರಲಿದೆ ಎನ್ನಲಾಗಿದೆ. "ತುಂಬಾದ್'ನ ಸಹ ನಿರ್ದೇಶಕ ಆದೇಶ್ ಪ್ರಸಾದ್ "ತುಂಬಾದ್ 2'ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಮುಂಬೈನಲ್ಲಿ 8 ಎಕರೆ ಜಾಗದಲ್ಲಿ ನಿರ್ಮಿಸಲಾಗಿರುವ ಬೃಹತ್ ಸೆಟ್ನಲ್ಲಿ ಶೂಟಿಂಗ್ ನಡೆಸಲಾಗುತ್ತಿದೆ. &ಏಜೆನ್ಸೀಸ್