ಬಾಲಿವುಡ್​ ನಟ ಸೋನು ಸೂದ್ (ಚಿತ್ರ Instagram) 
ಬಾಲಿವುಡ್

ಅರಳುವ ಮುನ್ನವೇ ಬಾಡಿದ ಮೊಗ್ಗುಗಳು...ಬಾಲಕಿಯರ ಸಾವಿಗೆ ಕಂಬನಿ ಮಿಡಿದ ಸೋನು ಸೂದ್! Sonu Sood

ಪ್ರಮುಖ ಮುಖ್ಯಾಂಶಗಳು

  • ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದ ಭೀಕರ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ
  • ಕೊರಿಯನ್ ಸಂಸ್ಕೃತಿಗೆ ಮರುಳಾಗಿದ್ದ ಮೂವರು ಸಹೋದರಿಯರು ಅಪಾರ್ಟ್​ಮೆಂಟ್​ನ ಒಂಬತ್ತನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ
  • ಈ ಘಟನೆಗೆ ಕುರಿತಾಗಿ ಬಾಲಿವುಡ್​ ನಟ ಸೋನು ಸೂದ್ ತೀವ್ರ ವಿಕ್ಷಾದ ವ್ಯಕ್ತ ಪಡಿಸಿದ್ದಾರೆ
  • 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಗೇಮಿಂಗ್ ಅನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು
ಉತ್ತರಪ್ರದೇಶ: ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದ ಭೀಕರ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಕೊರಿಯನ್ ಸಂಸ್ಕೃತಿಗೆ ಮರುಳಾಗಿದ್ದ ಮೂವರು ಸಹೋದರಿಯರು ಅಪಾರ್ಟ್​ಮೆಂಟ್​ನ ಒಂಬತ್ತನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಗೆ ಕುರಿತಾಗಿ ಬಾಲಿವುಡ್​ ನಟ ಸೋನು ಸೂದ್ (Sonu Sood) ಪ್ರತಿಕ್ರಿಯೆ ನೀಡಿದ್ದಾರೆ.
ಸೋನು ಸೂದ್​ ಹೇಳಿದ್ದೇನು?
ಡಿಜಿಟಲ್ ಮಾನ್ಯತೆ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದರ ಕುರಿತು ನಟ ಸೋನು ಸೂದ್ ತಮ್ಮ ಎಕ್ಸ್​ ಖಾತೆಯಲ್ಲಿ ಬಲವಾದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇಂದು ಗಾಜಿಯಾಬಾದ್‌ನಲ್ಲಿ ಮೂವರು ಯುವತಿಯರು ಪ್ರಾಣ ಕಳೆದುಕೊಂಡರು. ಇದು ಯಾವುದೇ ಹಿಂಸಾಚಾರಕ್ಕಾಗಲೀ ಅಥವಾ ಬಡತನಕ್ಕಾಗಲಿ ನಡೆದ ಸಾವಲ್ಲ. ಬದಲಿಗೆ ಆನ್‌ಲೈನ್ ಗೇಮಿಂಗ್ ಮತ್ತು ಡಿಜಿಟಲ್ ವ್ಯಸನದ ಕಾಣದ ಒತ್ತಡಕ್ಕೆ ಸಿಲುಕಿ ಸಂಭವಿಸಿದ ದುರಂತ.
ತಂತ್ರಜ್ಞಾನದ ಅಪಾಯದ ಕುರಿತು ಈ ಹಿಂದೆ ಧ್ವನಿ ಎತ್ತಿದ್ದನ್ನು ನೆನಪಿಸಿಕೊಂಡ ಅವರು, ಶಿಕ್ಷಣದ ಉದ್ದೇಶವನ್ನು ಹೊರತುಪಡಿಸಿ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಗೇಮಿಂಗ್ ಅನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಮಕ್ಕಳಿಗೆ ಬೇಕಾಗಿರುವುದು ಸೋಶಿಯಲ್ ಮೀಡಿಯಾದ ಅಲ್ಗಾರಿದಮ್‌ಗಳಲ್ಲ ಅಥವಾ ನಿರಂತರವಾದ ಸ್ಕ್ರೀನ್ ಸಮಯವಲ್ಲ. ಬದಲಿಗೆ ಪೋಷಕರ ಮಾರ್ಗದರ್ಶನ ಮತ್ತು ಬೆಂಬಲದ ಅಗತ್ಯವಿದೆ. ಆದಾಗ್ಯೂ, ಸ್ಕ್ರೀನ್​ ಸಮಯ ಹೆಚ್ಚಾದಂತೆ ಮಕ್ಕಳು ವಾಸ್ತವದಿಂದ ದೂರವಾಗುತ್ತಿದ್ದಾರೆ. ಈ ಒಬ್ಬಂಟಿತನವೇ ಅವರನ್ನು ಆನ್​ಲೈನ್​ ಗೇಮ್​ಗಳತ್ತ ಗಮನ ಸೆಳೆಯುತ್ತಿವೆ ಎಂದರು.
ತಂತ್ರಜ್ಞಾನವು ಕೇವಲ ಒಂದು ಸಾಧನವಾಗಬೇಕೇ ಹೊರತು, ಅದು ಮಕ್ಕಳ ಜೀವನದ ನಿರ್ಧಾರವಾಗಬಾರದು. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಸಮಯವನ್ನು ನೀಡಬೇಕು. ಈ ಸಮಯದಲ್ಲಿ ಅವರಿಗೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದು ಪುನರುಚ್ಚಿಸಿದ್ದಾರೆ.
ಏನಿದು ಕೊರಿಯನ್ ಪ್ರೇಮ ಆಟ?
ಗಾಜಿಯಾಬಾದ್ ತನಿಖೆಯ ನಿಕಟ ಮೂಲಗಳು ಹೇಳುವಂತೆ ಆಟವು ಅಪರಿಚಿತ ವ್ಯಕ್ತಿಯೊಬ್ಬ ಮಗುವಿನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಥವಾ ಕೆಲವು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಂಭಾಷಣೆಯನ್ನು ಪ್ರಾರಂಭಿಸುವುದರೊಂದಿಗೆ ಆಟ ಪ್ರಾರಂಭವಾಗುತ್ತದೆ.
ಈ ವ್ಯಕ್ತಿಯು ಕೊರಿಯನ್ ಅಥವಾ ಕನಿಷ್ಠ ಪಕ್ಷ ವಿದೇಶಿ ಪ್ರಜೆ ಎಂದು ಹೇಳಿಕೊಂಡು ಸ್ನೇಹ ಮತ್ತು ಪ್ರೀತಿಯ ಬಗ್ಗೆ ಮಾತನಾಡುತ್ತಾನೆ. ಇದರ ನಂತರ, ಸ್ವಲ್ಪ ನಂಬಿಕೆಯನ್ನು ಸ್ಥಾಪಿಸಿದ ನಂತರ, ಮಕ್ಕಳಿಗೆ ಒಂದೊಂದೆ ಟಾಸ್ಕ್​ಗಳನ್ನು ನೀಡಲು ಪ್ರಾರಂಭಿಸುತ್ತಾನೆ. ಪ್ರಾರಂಭದಲ್ಲಿ ಸವಾಲುಗಳು ತೀರಾ ಸುಲಭವಾಗಿರುತ್ತವೆ.
ನಂತರ ಆಟದ ಹಂತಗಳು ಏರಿಕೆಯಾದಂತೆ ಸವಾಲುಗಳ ತೀವ್ರತೆ ಸಹ ಹೆಚ್ಚುತ್ತಾ ಹೋಗುತ್ತದೆ. ಈ ಆಟವನ್ನು ಒಮ್ಮೆ ಪ್ರಾರಂಭಿಸಿದರೆ ಸತತ 50 ದಿನಗಳವರೆಗೆ ಆಟವನನ್ನು ಆಡಲೇ ಬೇಕಾಗುತ್ತದೆ. ಒಂದು ವೇಳೆ ಆಟವನ್ನು ಅರ್ಧಕ್ಕೆ ನಿಲ್ಲಿಸಲು ಮುಂದಾದರೆ ಗೇಮ್ ಮಾಸ್ಟರ್, ಬ್ಲಾಕ್​ಮೇಲ್​ ಮಾಡಲು ಪ್ರಾರಂಭಿಸುತ್ತಾನೆ ಎಂದು ಮೂಲಗಳು ತಿಳಿಸಿವೆ (ಏಜೆನ್ಸೀಸ್​).