ಬಾಲಿವುಡ್‌ನ 'ನಕಲಿ ಪ್ರೀತಿ'ಯ ಮುಖವಾಡ ಕಳಚಿದ ಜಾಕಿರ್ ಖಾನ್
- ಬಾಕ್ಸ್ ಆಫೀಸ್ನಲ್ಲಿನ ಧೂಳೆಬ್ಬಿಸುತ್ತಿರುವ ಸಿನಿಮಾ ಧುರಂಧರ್ 2
- ಧುರಂಧರ್ ಸಿನಿಮಾದ ಯಶಸ್ಸನ್ನು ನೋಡಿ ಬಾಲಿವುಡ್ನವರ ಹೊಟ್ಟೆ ಉರಿಯುತ್ತಿದೆ
- ಬಾಲಿವುಡ್‌ನ 'ನಕಲಿ ಪ್ರೀತಿ'ಯ ಮುಖವಾಡ ಕಳಚಿದ ಜಾಕಿರ್ ಖಾನ್
ಮುಂಬೈ: ಬಾಲಿವುಡ್ ಅಂದಮೇಲೆ ಅಲ್ಲಿ ಬಣ್ಣದ ಮಾತುಗಳಿಗೆ ಕೊರತೆಯಿಲ್ಲ. ಮುಖದ ಮೇಲೆ ಹಲ್ಲು ಕಿರಿದು ಗ್ರೇಟ್ ಮೂವಿ ಎನ್ನುತ್ತಾ ಈ ಸಿನಿಮಾ ಹಾಳಾಗಿ ಹೋಗಲಿ ಎಂದು ಹೇಳುವುದು ಗುಟ್ಟಾಗಿ ಉಳಿದಿಲ್ಲ. ಆದರೆ, ಇಡೀ ಚಿತ್ರರಂಗವೇ ಸಾಲುಗಟ್ಟಿ ನಿಂತಿದ್ದ ವೇದಿಕೆಯ ಮೇಲೆ ನಿಂತು, ಈ ನಕಲಿ ಪ್ರೀತಿಯ ಮುಖವಾಡವನ್ನು ಖ್ಯಾತ ಸ್ಟ್ಯಾಂಡ್-ಅಪ್ ಕಾಮೆಡಿಯನ್ ಜಾಕಿರ್ ಖಾನ್ (Zakir Khan Roast Bollywood) ಕಿತ್ತೆಸೆದಿದ್ದಾರೆ.
2026ರ ಸ್ಕ್ರೀನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದ ಜಾಕಿರ್, ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿರುವ ರಣವೀರ್ ಸಿಂಗ್ ನಟನೆಯ ಧುರಂಧರ್: ದಿ ರಿವೆಂಜ್ (Dhurandhar 2) ಚಿತ್ರದ ಯಶಸ್ಸು ಮತ್ತು ಅದರ ಬಗ್ಗೆ ಬಾಲಿವುಡ್ ಮಂದಿಗಿರುವ ಹೊಟ್ಟೆಕಿಚ್ಚನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಗೇಲಿ ಮಾಡಿದ್ದಾರೆ.
ಎಲ್ಲರಿಗೂ ಉರಿಯುತ್ತಿದೆ ಅನ್ನೋದು ಗೊತ್ತು
ಆದಿತ್ಯ ಧರ್ ನಿರ್ದೇಶನದ ಧುರಂಧರ್ 2 ಈಗ ಕೇವಲ ಸಿನಿಮಾವಾಗಿ ಉಳಿದಿಲ್ಲ, ಅದೊಂದು ದಾಖಲೆಗಳ ಯಂತ್ರವಾಗಿ ಬದಲಾಗಿದೆ. ಈ ಯಶಸ್ಸಿನ ಬಗ್ಗೆ ಮಾತನಾಡಿದ ಜಾಕಿರ್ ಖಾನ್, ಬಾಲಿವುಡ್ ಸೆಲೆಬ್ರಿಟಿಗಳನ್ನು ಉದ್ದೇಶಿಸಿ ಸಖತ್ ಟಾಂಗ್ ಕೊಟ್ಟಿದ್ದಾರೆ.
ನೀವು ಸೋಷಿಯಲ್ ಮೀಡಿಯಾದಲ್ಲಿ ಎಷ್ಟೇ ಅಭಿನಂದನಾ ಪೋಸ್ಟ್‌ಗಳನ್ನು ಹಾಕಬಹುದು, ಇನ್‌ಸ್ಟಾಗ್ರಾಮ್‌ನಲ್ಲಿ ಎಷ್ಟೇ ಸ್ಟೋರಿಗಳನ್ನು ಶೇರ್ ಮಾಡಬಹುದು ಅಥವಾ ಸಂದರ್ಶನಗಳಲ್ಲಿ ಇದು ನನ್ನ ಫೇವರೆಟ್ ಸಿನಿಮಾ ಎಂದು ಹೇಳಬಹುದು. ಆದರೆ ಅಸಲಿ ಸತ್ಯ ಏನೆಂದರೆ, ಧುರಂಧರ್ ಸಿನಿಮಾದ ಈ ಭರ್ಜರಿ ಕಲೆಕ್ಷನ್ ನೋಡಿ ಇಲ್ಲಿ ಕುಳಿತಿರುವ ಎಲ್ಲರಿಗೂ ಒಳಗೊಳಗೇ ಭರ್ಜರಿಯಾಗಿ ಉರಿಯುತ್ತಿದೆ (ಸಬ್ಕಿ ಜಲ್ತಿ ತೋ ಹೈ) ಎಂದು ಜಾಕಿರ್ ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ನಗೆಯ ಚಟಾಕಿ ಸಿಡಿಯಿತು.
ಬಾಂದ್ರಾ-ಜುಹೂನಲ್ಲಿ ಎದ್ದಿದೆ ಹೊಗೆ!
ಜಾಕಿರ್ ಅಲ್ಲಿಗೆ ಸುಮ್ಮನಾಗಲಿಲ್ಲ. ಚಿತ್ರದ ಕಥೆ ಪಾಕಿಸ್ತಾನದ ಲಿಯಾರಿ ಹಿನ್ನೆಲೆಯಲ್ಲಿ ಇರುವುದನ್ನು ಉಲ್ಲೇಖಿಸಿ ಮತ್ತೊಂದು ಪಂಚ್ ನೀಡಿದರು. ಸಿನಿಮಾದಲ್ಲಿ ಬಾಂಬ್ ಸಿಡಿದಿದ್ದು ಲಿಯಾರಿಯಲ್ಲಿ ಇರಬಹುದು, ಆದರೆ ಅದರ ಹೊಗೆ ಮಾತ್ರ ಬಾಲಿವುಡ್ ಗಣ್ಯರು ವಾಸಿಸುವ ಬಾಂದ್ರಾ ಮತ್ತು ಜುಹೂವರೆಗೆ ಹಬ್ಬುತ್ತಿದೆ ಎಂದು ಕಾಲೆಳೆದಿದ್ದಾರೆ. ಅಂದರೆ ಸಿನಿಮಾದ ಗೆಲುವು ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳ ನಿದ್ದೆಗೆಡಿಸಿದೆ ಎಂಬುದನ್ನು ಅವರು ಮಾರ್ಮಿಕವಾಗಿ ಹೇಳಿದ್ದಾರೆ.
ದಾಖಲೆಗಳ ಧುರಂಧರ: 1,600 ಕೋಟಿ ಪಾರ್!
ರಣವೀರ್ ಸಿಂಗ್ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಯಾರೂ ಊಹಿಸದ ಮಟ್ಟಕ್ಕೆ ಬೆಳೆದಿದೆ. ಕೇವಲ 18 ದಿನಗಳಲ್ಲಿ ಭಾರತದಲ್ಲಿ 1,000 ಕೋಟಿ ರೂಪಾಯಿ ಗಳಿಸಿದರೆ, ವಿಶ್ವಾದ್ಯಂತ ಬರೋಬ್ಬರಿ 1,600 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ.
ಬಾಲಿವುಡ್‌ನ ಹಳೆಯ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಿರುವ ಧುರಂಧರ್ 2, ಚಿತ್ರಮಂದಿರಗಳಲ್ಲಿ ಇಂದಿಗೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಉದ್ಯಮದ ಮಂದಿ ಹೊರಗಡೆ ಎಷ್ಟೇ ನಗುಮುಖ ಪ್ರದರ್ಶಿಸಿದರೂ, ಇಷ್ಟು ದೊಡ್ಡ ಮಟ್ಟದ ಗೆಲುವು ಹಲವರಿಗೆ ಅಸೂಯೆ ಹುಟ್ಟಿಸಿರುವುದು ಸುಳ್ಳಲ್ಲ ಎಂಬುದು ಜಾಕಿರ್ ಮಾತಿನ ಮರ್ಮವಾಗಿದೆ,(ಏಜನ್ಸೀಸ್).