ಮುಂಬೈ: ತನ್ನ ಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ (Shreya Ghoshal Buys Flat), ಈಗ ಮುಂಬೈನ ಅತ್ಯಂತ ದುಬಾರಿ ಪ್ರದೇಶವೊಂದರಲ್ಲಿ ಹೊಸ ವಿಳಾಸ ಹೊಂದಿದ್ದಾರೆ. ಮುಂಬೈನ ಪ್ರೀಮಿಯಂ ಏರಿಯಾ ಎಂದೇ ಕರೆಸಿಕೊಳ್ಳುವ 'ವರ್ಲಿ'ಯಲ್ಲಿ ಶ್ರೇಯಾ ಘೋಷಾಲ್ ಬರೋಬ್ಬರಿ 29.70 ಕೋಟಿ ರೂಪಾಯಿ ಬೆಲೆಯ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಬಗ್ಗೆ ಸೋಮವಾರ ವರದಿಯಾಗಿದೆ.
ಕುಟುಂಬದೊಂದಿಗೆ ಹೊಸ ಮನೆಗೆ ಲಗ್ಗೆ
ವರದಿಗಳ ಪ್ರಕಾರ, ಶ್ರೇಯಾ ಘೋಷಾಲ್ ಅವರು ತಮ್ಮ ತಂದೆ ಬಿಶ್ವಜಿತ್ ಘೋಷಾಲ್ ಮತ್ತು ತಾಯಿ ಶಮಿಷ್ಠಾ ಘೋಷಾಲ್ ಅವರೊಂದಿಗೆ ಜಂಟಿಯಾಗಿ ಈ ಆಸ್ತಿಯನ್ನು ಖರೀದಿಸಿದ್ದಾರೆ. ಮುಂಬೈನ ವರ್ಲಿಯಲ್ಲಿರುವ 'ಗೋದ್ರೆಜ್ ಟ್ರೈಲಜಿ' (Godrej Trilogy) ಎಂಬ ಪ್ರತಿಷ್ಠಿತ ವಸತಿ ಸಂಕೀರ್ಣದಲ್ಲಿ ಈ ಫ್ಲಾಟ್ ಇದೆ. ಏಪ್ರಿಲ್ 1, 2026 ರಂದು ಈ ಆಸ್ತಿಯ ನೋಂದಣಿ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಂಡಿದೆ.
ಮನೆಯ ವಿಶೇಷತೆಗಳೇನು?
ವಿಸ್ತೀರ್ಣ: ಈ ಅಪಾರ್ಟ್‌ಮೆಂಟ್ ಸುಮಾರು 2,430 ಚದರ ಅಡಿ ಕಾರ್ಪೆಟ್ ಪ್ರದೇಶವನ್ನು ಹೊಂದಿದೆ (ಒಟ್ಟು ವಿಸ್ತೀರ್ಣ 2,750 ಚದರ ಅಡಿ).
ಪಾರ್ಕಿಂಗ್: ಈ ಐಷಾರಾಮಿ ಫ್ಲಾಟ್ ಜೊತೆಗೆ ಮೂರು ಕಾರ್ ಪಾರ್ಕಿಂಗ್ ಸ್ಥಳಗಳನ್ನು ಸಹ ನೀಡಲಾಗಿದೆ.
ಶುಲ್ಕ: ಈ ಆಸ್ತಿ ಖರೀದಿಗಾಗಿ ಶ್ರೇಯಾ ಘೋಷಾಲ್ ಅವರು 1.78 ಕೋಟಿ ರೂಪಾಯಿ ಮುದ್ರಾಂಕ ಶುಲ್ಕ (Stamp Duty) ಮತ್ತು 30,000 ರೂಪಾಯಿ ನೋಂದಣಿ ಶುಲ್ಕವನ್ನು ಪಾವತಿಸಿದ್ದಾರೆ.
ರಿಯಾಲಿಟಿ ಶೋನಿಂದ ಹಿಡಿದು ವರ್ಲಿಯ ಬಂಗಲೆಯವರೆಗೆ..
'ಸಾ ರಿ ಗ ಮ ಪ' ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಶ್ರೇಯಾ ಘೋಷಾಲ್, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ದೇವದಾಸ್' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಂದಿನವರೆಗೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಇವರು, ಇಂದು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕಿಯರಲ್ಲಿ ಒಬ್ಬರಾಗಿದ್ದಾರೆ. ಇವರ ತಂದೆ ಬಿಶ್ವಜಿತ್ ಘೋಷಾಲ್ ಅವರು ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದರೆ, ತಾಯಿ ಶಮಿಷ್ಠಾ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರೆ.
ತಮ್ಮ ಕಠಿಣ ಪರಿಶ್ರಮದಿಂದ ಬೆಳೆದಿರುವ ಶ್ರೇಯಾ, ಈಗ ಮುಂಬೈನ ಐಷಾರಾಮಿ ಜೀವನಶೈಲಿಗೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ವರ್ಲಿ ಪ್ರದೇಶವು ಈಗಾಗಲೇ ಹಲವು ಬಾಲಿವುಡ್ ತಾರೆಯರು ಮತ್ತು ಉದ್ಯಮಿಗಳ ನೆಚ್ಚಿನ ತಾಣವಾಗಿದ್ದು, ಈಗ ಶ್ರೇಯಾ ಘೋಷಾಲ್ ಕೂಡ ಆ ಸಾಲಿಗೆ ಸೇರ್ಪಡೆಯಾಗಿದ್ದಾರೆ,(ಏಜೆನ್ಸೀಸ್).