ಕುಂಭಮೇಳ ಗರ್ಲ್ ಮೊನಾಲಿಸಾ ಭೋಸ್ಲೆ ಮದುವೆ ಈಗ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ 
ಬಾಲಿವುಡ್

ಮೊನಾಲಿಸಾ ಮದುವೆ ವಿವಾದ: ಇದು ನಿಜವಾದ ಕೇರಳಾ ಸ್ಟೋರಿ ಎಂದ ನಿರ್ದೇಶಕ ಸನೋಜ್ ಮಿಶ್ರಾ! Sanoj Mishra on Monalisa Marriage

ಪ್ರಮುಖ ಮುಖ್ಯಾಂಶಗಳು

  • ಕುಂಭಮೇಳ ಗರ್ಲ್ ಮೊನಾಲಿಸಾ ಭೋಸ್ಲೆ ಮದುವೆ ಈಗ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ
  • ಉತ್ತರ ಪ್ರದೇಶದ ಮುಸ್ಲಿಂ ನಟ ಫರ್ಮಾನ್ ಖಾನ್ ಅವರನ್ನ ಮದುವೆಯಾಗಿರುವ ಮೊನಾಲಿಸಾ
  • ತಿಲಕ, ರುದ್ರಾಕ್ಷಿ ಧರಿಸಿ ಮೋಸ ಮಾಡಿದ ಫರ್ಮಾನ್: ನಿರ್ದೇಶಕ ಸನೋಜ್ ಮಿಶ್ರಾ
ತಿರುವನಂತಪುರ: ಸೋಷಿಯಲ್ ಮೀಡಿಯಾದಲ್ಲಿ ಕುಂಭಮೇಳ ಗರ್ಲ್ ಎಂದೇ ಖ್ಯಾತಿ ಪಡೆದಿರುವ ನಟಿ ಮೊನಾಲಿಸಾ ಭೋಸ್ಲೆ ಅವರ ಮದುವೆ ಈಗ ದೇಶಾದ್ಯಂತ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕೇರಳದ ದೇವಸ್ಥಾನವೊಂದರಲ್ಲಿ ಉತ್ತರ ಪ್ರದೇಶದ ಮುಸ್ಲಿಂ ನಟ ಫರ್ಮಾನ್ ಖಾನ್ ಅವರನ್ನ ಮದುವೆಯಾಗಿರುವ ಮೊನಾಲಿಸಾ ವಿರುದ್ಧ ಈಗ ಲವ್ ಜಿಹಾದ್ ಆರೋಪಗಳು ಕೇಳಿಬರುತ್ತಿವೆ.

ನಿರ್ದೇಶಕ ಸನೋಜ್ ಮಿಶ್ರಾ ಸ್ಫೋಟಕ ಆರೋಪ!

ಮೊನಾಲಿಸಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ಆಸಕ್ತಿ ಹೊಂದಿದ್ದ ಖ್ಯಾತ ನಿರ್ದೇಶಕ ಸನೋಜ್ ಮಿಶ್ರಾ (Sanoj Mishra on Monalisa Marriage) ಈ ಮದುವೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಈ ಮದುವೆಯ ಹಿಂದೆ ನಿಷೇಧಿತ ಸಂಘಟನೆ ಪಿಎಫ್‌ಐ (PFI) ಕೈವಾಡವಿದೆ ಎಂದು ಆರೋಪಿಸಿ ಪೊಲೀಸ್ ದೂರನ್ನೂ ದಾಖಲಿಸಿದ್ದಾರೆ.
ಇದು ಸಣ್ಣ ವಿಷಯವಲ್ಲ, ಮೊನಾಲಿಸಾ ಲಕ್ಷಾಂತರ ಬಡ ಮತ್ತು ಅಶಿಕ್ಷಿತ ಹುಡುಗಿಯರಿಗೆ ಐಕಾನ್ ಆಗಿದ್ದಾಳೆ. ಅವಳೇ ಇಂತಹ ಬಲೆಗೆ ಬಿದ್ದರೆ ಮಿಕ್ಕವರ ಗತಿಯೇನು? ಎಂದು ಮಿಶ್ರಾ ಪ್ರಶ್ನಿಸಿದ್ದಾರೆ. ಈ ಪ್ರಕರಣ ಈಗ ಸಿಎಂ ಕಚೇರಿ ತಲುಪಿದ್ದು, ಡಿಜಿಪಿ ಅವರಿಗೆ ತನಿಖೆಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ತಿಲಕ, ರುದ್ರಾಕ್ಷಿ ಧರಿಸಿ ಮೋಸ ಮಾಡಿದ ಫರ್ಮಾನ್

ಫರ್ಮಾನ್ ಖಾನ್ ತನ್ನ ಗುರುತನ್ನು ಮರೆಮಾಚಿ ಮೊನಾಲಿಸಾ ಕುಟುಂಬಕ್ಕೆ ಮೋಸ ಮಾಡಿದ್ದಾನೆ ಎಂಬುದು ನಿರ್ದೇಶಕರ ಆರೋಪವಾಗಿದೆ. ಉಜ್ಜಯಿನಿಯಲ್ಲಿ ಮೊನಾಲಿಸಾ ಕುಟುಂಬವನ್ನು ಭೇಟಿಯಾದಾಗ ಫರ್ಮಾನ್ ತನ್ನನ್ನು ಲಕ್ಕಿ ಎಂದು ಪರಿಚಯಿಸಿಕೊಂಡಿದ್ದು, ಹಣೆ ಮೇಲೆ ತಿಲಕ, ಕುತ್ತಿಗೆಯಲ್ಲಿ ರುದ್ರಾಕ್ಷಿ ಧರಿಸಿ ತಾನು ಹಿಂದೂ ಎಂಬಂತೆ ನಟಿಸಿದ್ದ.
ಮಹಾಕಾಲ ದೇವಸ್ಥಾನದಲ್ಲಿ ಪೂಜೆಯನ್ನೂ ಮಾಡಿದ್ದ. ಯಾರೂ ಆತ ಮುಸ್ಲಿಂ ಇರಬಹುದು ಎಂದು ಸಂಶಯ ಪಟ್ಟಿರಲಿಲ್ಲ ಎಂದು ಮಿಶ್ರಾ ಹೇಳಿದ್ದಾರೆ. ಅಲ್ಲದೆ, ಫರ್ಮಾನ್ ಖಾನ್‌ಗೆ ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಮತ್ತು ಶಾರ್ಜೀಲ್ ಇಮಾಮ್ ಜೊತೆ ಸಂಪರ್ಕವಿದೆ ಎಂದು ಅವರು ಆರೋಪಿಸಿದ್ದಾರೆ.

ನಟಿ ಮೊನಾಲಿಸಾ ಹೇಳೋದೇನು?

ಈ ಎಲ್ಲಾ ಆರೋಪಗಳನ್ನು ನಟಿ ಮೊನಾಲಿಸಾ ಮತ್ತು ಅವರ ಪತಿ ಫರ್ಮಾನ್ ಖಾನ್ ತಳ್ಳಿಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊನಾಲಿಸಾ, ನಮ್ಮ ಮದುವೆ ಸಂಪೂರ್ಣವಾಗಿ ಹಿಂದೂ ಸಂಪ್ರದಾಯದಂತೆ ನಡೆದಿದೆ. ನಾವಿಬ್ಬರೂ ನಮ್ಮ ಧರ್ಮವನ್ನು ಬದಲಾಯಿಸಿಲ್ಲ.
ಮನೆಯವರು ನನ್ನನ್ನು ಇಷ್ಟವಿಲ್ಲದ ಕಡೆ ಮದುವೆ ಮಾಡಲು ಮುಂದಾಗಿದ್ದರಿಂದ ನಾನು ಫರ್ಮಾನ್ ಅವರನ್ನು ಮದುವೆಯಾಗಲು ನಿರ್ಧರಿಸಿದೆ. ಇದಕ್ಕೆ ಯಾರ ಒತ್ತಾಯವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪತ್ನಿಯ ಮಾತಿಗೆ ದನಿಗೂಡಿಸಿದ ಫರ್ಮಾನ್ ಖಾನ್, ನಮಗೆ ಎಲ್ಲಾ ಧರ್ಮಗಳು ಸಮಾನ. ಮೊನಾಲಿಸಾ ಆಸೆಯಂತೆ ದೇವಸ್ಥಾನದಲ್ಲಿ ಮದುವೆಯಾಗಿದ್ದೇವೆ. ಇದು ಲವ್ ಜಿಹಾದ್ ಅಲ್ಲ, ಕೇವಲ ಪ್ರೀತಿ ಎಂದಿದ್ದಾರೆ.

ದಿ ಕೇರಳ ಸ್ಟೋರಿ ನೆನಪಿಸಿದ ನಿರ್ದೇಶಕ

ಈ ಪ್ರಕರಣವು ಕೇವಲ ಸಿನಿಮಾ ಕಥೆಯಲ್ಲ, ಇದು ನಿಜವಾದ ಕೇರಳದ ಕಥೆ ಎಂದು ಸನೋಜ್ ಮಿಶ್ರಾ ಬಣ್ಣಿಸಿದ್ದಾರೆ. ಕೇರಳದಲ್ಲಿ ಸಾವಿರಾರು ಹುಡುಗಿಯರನ್ನು ಮತಾಂತರಿಸಿ ವಿದೇಶಕ್ಕೆ ಸಾಗಿಸಲಾಗುತ್ತಿದೆ ಎಂಬ ಆತಂಕಕಾರಿ ಹೇಳಿಕೆಯನ್ನೂ ನೀಡಿದ್ದಾರೆ.
ಒಟ್ಟಿನಲ್ಲಿ, ಈ ಮದುವೆ ಈಗ ವೈಯಕ್ತಿಕ ವಿಚಾರವಾಗಿ ಉಳಿಯದೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಇದು ನಿಜಕ್ಕೂ ಪ್ರೀತಿಯ ಮದುವೆಯೇ ಅಥವಾ ಇದರ ಹಿಂದೆ ಸಂಘಟಿತ ಪಿತೂರಿ ಇದೆಯೇ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ,(ಏಜನ್ಸೀಸ್​).