- ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ, ಸಲೀಂ ಖಾನ್ ಆರೋಗ್ಯದಲ್ಲಿ ಏರುಪೇರು
- ತಂದೆಯ ಅನಾರೋಗ್ಯದ ಸುದ್ಧಿ ಕೇಳುತ್ತಿದ್ದಂತೆಯೇ, ಆಸ್ಪತ್ರಗೆ ಓಡೋಡಿ ಬಂದ ಸಲ್ಮಾನ್
- ಸಲೀಂ ಖಾನ್ ಅವರನ್ನು ಹಿಂದಿ ಚಿತ್ರರಂಗದ ಪ್ರಮುಖ ಚಿತ್ರಕಥೆಗಾರರಲ್ಲಿ ಒಬ್ಬರಾಗಿದ್ದರು
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ, ಹಿರಿಯ ಚಿತ್ರಕಥೆಗಾರ (Salim Khan)
ಸಲೀಂ ಖಾನ್ (90) ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಇಂದು (ಫೆ. 17) ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ತಂದೆಯ ಅನಾರೋಗ್ಯದ ಸುದ್ಧಿ ಕೇಳುತ್ತಿದ್ದಂತೆಯೇ, ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಸಲ್ಮಾನ್ ಖಾನ್, ಅರ್ಬಾಜ್ ಖಾನ್, ಸೊಹೈಲ್ ಖಾನ್ ಮತ್ತು ಕುಟುಂಬದ ಇತರ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ಸಲೀಂ ಖಾನ್ ಆರೋಗ್ಯವನ್ನು ವಿಚಾರಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಸಲ್ಮಾನ್ ಭಾರೀ ಭದ್ರತೆಯ ನಡುವೆ ಆವರಣದಿಂದ ಹೊರ ಬರುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಅವರು ಯಾವುದೇ ಮಾಧ್ಯಮಗಳೊಂದಿಗೆ ಮಾತನಾಡದೇ ನೇರವಾಗಿ ವಾಹನವನ್ನು ತಲುಪಿದ್ದಾರೆ.
ವಯೋಸಹಜ ಕಾಯಿಲೆ ಅಥವಾ ದಿನನಿತ್ಯದ ತಪಾಸಣೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದಿಯೇ ಎಂಬುದರ ಬಗ್ಗೆ ಕುಟುಂಬಸ್ಥರು ಈವರೆಗೂ ಮಾಹಿತಿ ನೀಡಿಲ್ಲ. ಪ್ರಸ್ತುತ ಅವರು ವೈದ್ಯರ ನಿಗಾದಲ್ಲಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವರದಿಯಾಗಿದೆ.
ಸಲೀಂ ಖಾನ್ ಅವರನ್ನು ಹಿಂದಿ ಚಿತ್ರರಂಗದ ಪ್ರಮುಖ ಚಿತ್ರಕಥೆಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಜಾವೇದ್ ಅಖ್ತರ್ ಅವರೊಂದಿಗೆ ಸೇರಿ ಇವರು ತಮ್ಮ ಕಥನಾ ಶೈಲಿಯಲ್ಲೇ ಬದಲಾಯಿಸಿ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದ್ದರು.
ಸುಮಾರು 12 ವರ್ಷಗಳ ಕಾಲ ಅತ್ಯಂತ ಯಶಸ್ವಿ ವೃತ್ತಿಪರ ಪಾಲುದಾರಿಕೆಯನ್ನು ಹೊಂದಿದ್ದ ಈ ಜೋಡಿ, ಒಟ್ಟು 24 ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇವರ 20 ಚಿತ್ರಗಳು ಬ್ಲಾಕ್‌ಬಸ್ಟರ್ ಹಿಟ್ ಪಡೆದಿದ್ದವು.
ಶೋಲೆ, ದೀವಾರ್, ಜಂಜೀರ್ ಮತ್ತು ಡಾನ್ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯವಾದ ಕೆಲವು ಚಲನಚಿತ್ರಗಳನ್ನು ಬರೆದರು. ಇದು ಅಮಿತಾಭ್ ಬಚ್ಚನ್ ಅವರಿಗೆ ಆ್ಯಂಗ್ರಿ ಎಂಗ್ ಮ್ಯಾನ್ ಎಂಬ ಬಿರುದನ್ನು ಪಡೆಯಲು ಸಹಾಯ ಮಾಡಿತು (ಏಜೆನ್ಸೀಸ್).