ಸಾಯಿ ಪಲ್ಲವಿ  
ಬಾಲಿವುಡ್

ಸಾಯಿ ಪಲ್ಲವಿ ಬಾಲಿವುಡ್​ ಪದಾರ್ಪಣೆ ಚಿತ್ರವೇ ಕಾಪಿ ಕ್ಯಾಟ್​? ಹಿಂದಿ ಸಿನಿಮಾದ ಪೋಸ್ಟರ್​ಗೆ ನೆಟ್ಟಿಗರಿಂದ ಟೀಕೆ | Sai Pallavi

ಪ್ರಮುಖ ಮುಖ್ಯಾಂಶಗಳು

  • ಅಭಿಮಾನಿಗಳ ನೆಚ್ಚಿನ 'ನ್ಯಾಚ್ಯುರಲ್ ಬ್ಯೂಟಿ' ಬಾಲಿವುಡ್​ಗೆ ಪದಾರ್ಪಣೆ
  • 'ಏಕ್​ ದಿನ' ಚಿತ್ರದ ಮೂಲಕ ಹಿಂದಿ ಚಿತ್ರೋದ್ಯಮಕ್ಕೆ ಸಾಯಿ ಪಲ್ಲವಿ ಎಂಟ್ರಿ
  • ಚಿತ್ರದ ಫಸ್ಟ್​ ಲುಕ್​ ಹೊರಬಿದ್ದ ಬೆನ್ನಲ್ಲೇ ಕಾಪಿ ಕ್ಯಾಟ್​ ಎಂದು ಟೀಕೆ
ಮುಂಬೈ: ಬಹುಭಾಷಾ ತಾರೆ, ನ್ಯಾಚ್ಯುರಲ್​ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ಸಾಯಿ ಪಲ್ಲವಿ (Sai Pallavi) ಮಾಲಿವುಡ್‌ನಲ್ಲಿ ನಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ತಮ್ಮ ಮೊದಲ ಚಿತ್ರ 'ಪ್ರೇಮಂ' ಮೂಲಕ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡ ನಟಿ, ಮೊದಲ ಸಿನಿಮಾದಲ್ಲೇ ನಟಿಯಾಗಿ ಅಭಿನಯಿಸಿ, ತಮ್ಮನ್ನು ತಾವು ಸಾಬೀತುಪಡಿಸಿಕೊಂಡರು. ಇದಾದ ಬಳಿಕ ತೆಲುಗು ಹಾಗೂ ತಮಿಳಿನಲ್ಲಿ ಅವಕಾಶಗಳ ಸುರಿಮಳೆಯನ್ನೇ ಪಡೆದ ಪಲ್ಲವಿ, ಬ್ಲಾಕ್​ಬಸ್ಟರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ನಟಿ ಹಿಂದಿ ಚಿತ್ರೋದ್ಯಮಕ್ಕೆ ಪದಾರ್ಪಣೆ ಮಾಡುತ್ತಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ.

ಬಹುಬೇಡಿಕೆಯ ಸ್ಟಾರ್​ ನಟಿ

ತಮಿಳಿನ ಸ್ಟಾರ್​ ನಿರ್ದೇಶಕ ಮಣಿರತ್ನಂ ಅವರಂತಹ ಬಹುಬೇಡಿಕೆಯ​ ನಿರ್ದೇಶಕರು ಸಾಯಿ ಪಲ್ಲವಿ ಜತೆ ಸಿನಿಮಾ ಮಾಡುವ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆಂದರೆ ನಟಿಯ ಪ್ರತಿಭೆ ಎಂಥದ್ದು ಎಂಬುದನ್ನು ಇಲ್ಲಿ ಅರ್ಥೈಸಿಕೊಳ್ಳಬಹುದು. ಇತ್ತೀಚೆಗೆ, ಶಿವಕಾರ್ತಿಕೇಯನ್ ಜತೆಗೆ 'ಅಮರನ್' ಚಿತ್ರದಲ್ಲಿ ನಟಿಸಿದ ಸಾಯಿ ಪಲ್ಲವಿ ಬ್ಲಾಕ್​ಬಸ್ಟರ್​ ಹಿಟ್​ ಕಂಡರು. ಅದರಲ್ಲೂ, ಇಡೀ ಚಿತ್ರದಲ್ಲಿ ನಾಯಕನಿಗಿಂತ ಹೆಚ್ಚು ಗಮನ ಸೆಳೆಯುವುದೇ ನಾಯಕಿ ಎಂಬುದು ಮತ್ತೊಂದು ವಿಶೇಷ. ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ಸಾಯಿ ಪಲ್ಲವಿ ಈಗ ಬಾಲಿವುಡ್​ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ನ್ಯಾಚ್ಯುರಲ್​ ಬ್ಯೂಟಿ ಈಗ ಬಾಲಿವುಡ್​ಗೆ 'ಏಕ್​ ದಿನ' ಚಿತ್ರದ ಮುಖೇನ ಎಂಟ್ರಿ ಕೊಡುತ್ತಿರುವುದು ಹಲವರ ಕುತೂಹಲ ಕೆರಳಿಸಿದೆ. ಅಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್​ಗೆ ಜೋಡಿಯಾಗಿರುವ ಸಾಯಿ ಪಲ್ಲವಿಗೆ ಇದು ಮೊದಲ ಹಿಂದಿ ಚಿತ್ರ ಎಂಬುದು ಗಮನಾರ್ಹ. ಇತ್ತೀಚೆಗಷ್ಟೇ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹೊರಬಿದ್ದಿದ್ದು, ಸೋಷಿಯಲ್ ಮೀಡಿಯಾದಲ್ಲಿ 'ಕಾಪಿ ಕ್ಯಾಟ್'​ ಚರ್ಚೆಗೆ ಗ್ರಾಸವಾಗಿದೆ.

ಥೈ ಭಾಷೆಯ ಚಿತ್ರದ ಕಾಪಿ?

ಈ ಪೋಸ್ಟರ್ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇದು ಥೈ ಭಾಷೆಯ ಸಿನಿಮಾದ ಪೋಸ್ಟರ್​ನಂತಿದೆ. ನಟಿಯ ಚಿತ್ರದ ಫಸ್ಟ್​ ಲುಕ್​​ ಅದನ್ನೇ ಹೋಲುತ್ತಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. 2016ರಲ್ಲಿ ಬಿಡುಗಡೆಯಾದ ಥಾಯ್ ಲವ್ ಡ್ರಾಮಾ 'ಒನ್ ಡೇ' ಪೋಸ್ಟರ್ ಹೇಗಿದೆಯೋ, ಅದೇ ರೀತಿ ಸಾಯಿ ಪಲ್ಲವಿ ಅವರ ಹೊಸ ಚಿತ್ರ 'ಏಕ್ ದಿನ್' ಪೋಸ್ಟರ್‌ಯಿದೆ ಎಂದಿದ್ದಾರೆ.
ಪೋಸ್ಟರ್ ಮಾತ್ರವಲ್ಲ, ಚಿತ್ರದ ಹೆಸರೂ ಬಹುತೇಕ 'ಒನ್ ಡೇ' ಅರ್ಥವನ್ನೇ ಸೂಚಿಸುತ್ತಿದೆ. ಇದು ಸಿನಿಪ್ರಿಯರಲ್ಲಿ ತೀರ ಗೊಂದಲ ಹುಟ್ಟುಹಾಕಿದ್ದು, ಥೈ ಭಾಷೆಯ ಚಿತ್ರವನ್ನೇ ರಿಮೇಕ್ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಕೆಲವರು ಇದು ಕಾಪಿ ಕ್ಯಾಟ್​ ಎಂದು ನೇರವಾಗಿ ಚಿತ್ರತಂಡಕ್ಕೆ ಪ್ರಶ್ನಿಸಿದ್ದಾರೆ. ಈ ಕುರಿತಂತೆ ಇಲ್ಲಿಯವರೆಗೆ ಚಿತ್ರದ ನಿರ್ಮಾಣ ಸಂಸ್ಥೆ ಆಗಲಿ ಅಥವಾ 'ಆಮೀರ್ ಖಾನ್ ಪ್ರೊಡಕ್ಷನ್ಸ್' ಆಗಲಿ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ,(ಏಜೆನ್ಸೀಸ್).