ಸನ್ನಿ ಲಿಯೋನ್ ಚಿತ್ರ ಪೋಸ್ಟ್ ಮಾಡಿ ಗಲಿಬಿಲಿ ಮೂಡಿಸಿದ ಆರ್. ಅಶ್ವಿನ್!
ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ (Ravichandran Ashwin) ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಮಾಜಿ ನೀಲಿಚಿತ್ರ ತಾರೆ ಮತ್ತು ಹಾಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ (sunny leone) ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಗಲಿಬಿಲಿ ಮೂಡಿಸಿದರು. ಜತೆಗೆ ಚೆನ್ನೈನ ಗಲ್ಲಿಯೊಂದರ ಚಿತ್ರವನ್ನೂ ಪ್ರಕಟಿಸಿದ್ದರು. ಆದರೆ, ಸನ್ನಿ ಲಿಯೋನ್ ಪೋಸ್ಟ್ ಆಗಿದ್ದನ್ನು ನೋಡಿದ ಅಭಿಮಾನಿಗಳು, ಅಶ್ವಿನ್ ಖಾತೆ ಹ್ಯಾಕ್ ಆಗಿದೆಯೇ ಎಂಬ ಗೊಂದಲಕ್ಕೀಡಾದರು. ಇದು ಪರೋಡಿ ಖಾತೆಯಿಂದ ಆಗಿರುವ ಪೋಸ್ಟ್ ಇರಬಹುದೇ ಎಂಬ ಪರಿಶೀಲನೆಯನ್ನೂ ನಡೆಸಿದರು.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆಗಳೂ ನಡೆದವು. ಅಂತಿಮವಾಗಿ ಅಶ್ವಿನ್ ಅವರ ಈ ನಿಗೂಢ ಅರ್ಥದ ಪೋಸ್ಟ್ಅನ್ನು ಡಿಕೋಡ್ ಮಾಡುವಲ್ಲಿ ಹೆಚ್ಚಿನವರು ಯಶಸ್ವಿಯೂ ಆದರು. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಸೋಮವಾರ ತಮಿಳುನಾಡು ಪರ 9 ಎಸೆತಗಳಲ್ಲೇ 30 ರನ್ ಸಿಡಿಸಿ ಗೆಲುವಿನಲ್ಲಿ ಮಿಂಚಿದ ಯುವ ಆಲ್ರೌಂಡರ್ ಸನ್ನಿ ಸಂಧು (Sunny Sandhu) ಅವರನ್ನು ಉಲ್ಲೇಖಿಸಿ ಅಶ್ವಿನ್ ಈ ಪೋಸ್ಟ್ ಹಾಕಿದ್ದರು.
ಕಿರಿದಾದ ದಾರಿಗೆ ತಮಿಳಿನಲ್ಲಿ "ಸಂಧು' ಎನ್ನುತ್ತಾರೆ. ಹೀಗಾಗಿ ಅಶ್ವಿನ್, "ಸನ್ನಿ ಸಂಧು' ಹೆಸರನ್ನು ಈ ರೀತಿ ಚಿತ್ರದ ಮೂಲಕ ತಿಳಿಸಿದ್ದರು. ಐಪಿಎಲ್ ಹರಾಜಿಗೆ 30 ಲಕ್ಷ ರೂ. ಮೂಲಬೆಲೆಯೊಂದಿಗೆ ಹೆಸರು ನೋಂದಾಯಿಸಿಕೊಂಡಿರುವ 22 ವರ್ಷದ ಸನ್ನಿ ಸಂಧು, ಹರಾಜಿನಲ್ಲಿ ಭಾರಿ ಬೇಡಿಕೆ ಪಡೆಯಬಹುದು ಎಂಬುದನ್ನು ಕೂಡ ಅಶ್ವಿನ್ ಈ ಪೋಸ್ಟ್ ಮೂಲಕ ತಿಳಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.