- ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರಿಗೆ ಸಂಬಂಧಿಸಿದ ಕಾಂತಾರ ಮಿಮಿಕ್ರಿ ವಿವಾದ
- ಪ್ರಕರಣದ ಗಂಭೀರತೆ ಮತ್ತು ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಏಪ್ರಿಲ್ 10 ಕ್ಕೆ ವಿಚಾರಣೆ ನಡೆಸಲು ಮುಂದೂಡಿದೆ
- ರಣವೀರ್ ಸಿಂಗ್ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದ ಕ್ಷಮೆಯಾಚನೆಯನ್ನು ಕೋರ್ಟ್ ಆಕ್ಷೇಪಿಸಿದೆ
ಬೆಂಗಳೂರು: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರಿಗೆ ಸಂಬಂಧಿಸಿದ ಕಾಂತಾರ ಮಿಮಿಕ್ರಿ ವಿವಾದದ ಕಾನೂನು ಪ್ರಕ್ರಿಯೆಗಳು ತೀವ್ರಗೊಂಡಿದ್ದು, ಮಂಗಳವಾರ ಹೈಕೋರ್ಟ್‌ನಲ್ಲಿ ಈ ಕುರಿತು ವಿಚಾರಣೆ ನಡೆಯಿತು. ಪ್ರಕರಣದ ಗಂಭೀರತೆ ಮತ್ತು ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಏಪ್ರಿಲ್ 10 ಕ್ಕೆ ಮುಂದೂಡಲು ನಿರ್ಧರಿಸಿದೆ.
ಹೈಕೋರ್ಟ್‌ನಲ್ಲಿ ನಡೆದಿದ್ದೇನು?
ರಣವೀರ್ ಸಿಂಗ್ ಮತ್ತು ಕಾಂತಾರ ಚಿತ್ರದ ದೃಶ್ಯದ ಮಿಮಿಕ್ರಿ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ವಿಚಾರದ ಕುರಿತು ಕರ್ನಾಟಕ ಹೈಕೋರ್ಟ್ ನಡೆಸಿದ ವಿಚಾರಣೆಯಲ್ಲಿ ನಟನ ವಕೀಲರು ನ್ಯಾಯಾಲಯಕ್ಕೆ ಕ್ಷಮೆಯಾಚಿಸಲು ಅಫಿಡವಿಟ್ ಸಲ್ಲಿಸಲು ಸಿದ್ಧರಿರುವುದಾಗಿ ತಿಳಿಸಿದರು.
ವಿಚಾರಣೆಯ ಸಮಯದಲ್ಲಿ, ರಣವೀರ್ ಸಿಂಗ್ ಅವರು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದ ಕ್ಷಮೆಯಾಚನೆಯನ್ನು ಪ್ರಾಸಿಕ್ಯೂಷನ್ ಬಲವಾಗಿ ವಿರೋಧಿಸಿದೆ. ಈ ಕ್ಷಮೆಯಾಚನೆಯು ನೇರವಾಗಿ ನಟನಿಂದ ಬಂದಿಲ್ಲ. ಬದಲಾಗಿ ಅವರ ಪಿಆರ್ ಮತ್ತು ಸಾಮಾಜಿಕ ಮಾಧ್ಯಮ ನಿರ್ವಹಣಾ ತಂಡದಿಂದ ಬಂದಿದೆ ಎಂದು ಶಂಕೆ ವ್ಯಕ್ತಪಡಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು ರಣವೀರ್ ಸಿಂಗ್ ಅವರು ಈ ಘಟನೆಯಿಂದ ವೈಯಕ್ತಿಕವಾಗಿ ಬಹಳ ನೋವನ್ನು ಅನುಭವಿಸಿದ್ದಾರೆ. ಕೇವಲ ಸಾಮಾಜಿಕ ಜಾಲತಾಣದ ಪೋಸ್ಟ್ಗೆ ಕ್ಷಮೆಯಾಚಿಸದೇ, ಶೀಘ್ರದಲ್ಲೇ ನ್ಯಾಯಾಲಯದ ಮುಂದೆ ಅಧೀಕೃತ ಲಿಖಿತ ಕ್ಷಮೆಯಾಚಿಸುವುದಾಗಿ ಹೇಳಿದರು.
ಘಟನೆ ಹಿನ್ನಲೆ ಏನು?
ನವೆಂಬರ್ 2025 ರಲ್ಲಿ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ( IFFI ) ಸಮಾರೋಪ ಸಮಾರಂಭದಲ್ಲಿ ರಣವೀರ್ ವೇದಿಕೆ ಮೇಲೆ ಕಾಣಿಸಿಕೊಂಡರು. ಈ ವೇಳೆ ಕಾಂತಾರ ಯಶಸ್ಸನ್ನು ಸ್ಮರಿಸುತ್ತಾ, ದೈವ ನರ್ತನ ಮತ್ತು ದೈವದ ವಿಶಿಷ್ಟ ಕೂಗನ್ನು ಅನುಕರಿಸಿದರು. ಇದಾದ ಬಳಿಕ ಬೆಂಗಳೂರು ಮೂಲದ ವಕೀಲರೊಬ್ಬರು ಈ ಕೃತ್ಯವು ಈ ಪ್ರದೇಶದಲ್ಲಿ ಆಚರಿಸಲಾಗುವ ಪವಿತ್ರ ಆಚರಣೆಯನ್ನು ಅವಮಾನಿಸಿದೆ ಎಂದು ಆರೋಪಿಸಿ ದೂರು ದಾಖಲಿಸಿದರು.
ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ನಟನ ವಕೀಲರು ವಾದಿಸಿರುವಂತೆ, ರಣವೀರ್ ಸಿಂಗ್ ದೈವದ ಸನ್ನೆಗಳನ್ನು ಮಾಡಿದ್ದು ಯಾರನ್ನೂ ಟೀಕಿಸುವುದಕ್ಕಲ್ಲ. ಬದಲಾಗಿ ರಿಷಬ್ ಶೆಟ್ಟಿ ಅವರು ಕಾಂತಾರ ಚಿತ್ರದ ಮೂಲಕ ಸೃಷ್ಟಿಸಿದ ಅದ್ಭುತ ಕಲೆಯಿಂದಾಗಿ. ಆದರೆ, ಇದನ್ನು ಆಕ್ರಮಣಕಾರಿ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಸಿಂಗ್ಗೆ ದೈವ ಸಾಂಪ್ರದಾಯವನ್ನು ಅವಮಾನಿಸುವ ಯಾವುದೇ ದುರದ್ದೇಶ ಇರಲಿಲ್ಲ ಎಂದು ವಕೀಲರು ವಾದ ಮಂಡಿಸಿದರು.
ಆದಾಗ್ಯೂ, ರಣವೀರ್ ಸಿಂಗ್ ಪರ ವಕೀಲರು ಕೋರಿದ ತುರ್ತು ವಿಚಾರಣೆಯ ಮನವಿಯನ್ನು ಹೈಕೋರ್ಟ್ ತಿರಸ್ಕರಿಸುವ ಮೂಲಕ ಮಹತ್ವದ ಪೀಠಿಕೆ ಹಾಕಿದೆ. ಸೆಲೆಬ್ರಿಟಿಗಳು ಎಂಬ ಕಾರಣಕ್ಕೆ ನ್ಯಾಯಾಲಯದ ಪಟ್ಟಿಯಲ್ಲಿ ವಿಶೇಷ ಅಥವಾ ಆದ್ಯತೆಯ ಪರಿಗಣನೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಂಗ್ ವಿರುದ್ಧ ಟೀಕೆಗಳು ವ್ಯಕ್ತವಾದ ನಂತರ ನಟ ಕ್ಷಮೆಯಾಚಿಸಿದರು. ಎಲ್ಲಾ ಸಂಸ್ಕೃತಿಗಳ ಬಗ್ಗೆ ನನಗೆ ಆಳವಾದ ಗೌರವವಿದೆ ಮತ್ತು ಅಪರಾಧ ಮಾಡುವ ಉದ್ದೇಶವಿಲ್ಲ ಎಂದು ಹೇಳಿದರು.
ದೂರುದಾರರು ಎತ್ತಿದ ಆಕ್ಷೇಪಣೆಗಳು
ಆದಾಗ್ಯೂ, ದೂರುದಾರರ ಕಡೆಯವರು ಈ ಕ್ಷಮೆಯನ್ನು ಒಪ್ಪಲಿಲ್ಲ. ಇಲ್ಲಿಯವರೆಗೆ ನೀಡಲಾದ ಕ್ಷಮೆಯಾಚನೆಯಲ್ಲಿ ಪ್ರಾಮಾಣಿಕತೆ ಕೊರತೆಯಿದೆ. ರಣವೀರ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮೂಲಕ ಕ್ಷಮೆಯಾಚಿಸಿದ್ದಾರೆ. ಮೌಖಿಕವಾಗಿ ಕ್ಷಮೆ ಕೇಳಿಲ್ಲ ಎಂದು ಗಮನ ಸೆಳೆದರು.
ಎರಡೂ ಕಡೆಯ ವಾದ ಮತ್ತು ಪ್ರತಿವಾದಗಳನ್ನು ಆಲಿಸಿದ ನಂತರ, ಕರ್ನಾಟಕ ಹೈಕೋರ್ಟ್ ಏಪ್ರಿಲ್ 10 ಕ್ಕೆ ಪ್ರಕರಣವನ್ನು ಮುಂದೂಡಲಾಯಿತು (ಏಜೆನ್ಸೀಸ್).