Ranveer Singh  
ಬಾಲಿವುಡ್

Ranveer Singh: ಡಾನ್-3 ವಿವಾದ ನಡುವೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ರಣವೀರ್ ಸಿಂಗ್!

ಬಾಬುಪ್ರಸಾದ್​ ಮೋಡಿಸ್​
ಬೆಂಗಳೂರು: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರು ಮಂಗಳವಾರ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಡಾನ್ 3 ಚಿತ್ರದ ವಿವಾದ, FWICE ನ ಸಹಕಾರ ನಿರಾಕರಣೆ ನಿರ್ದೇಶನ ಹಾಗೂ ಕಾಂತಾರ ವಿವಾದದ ನಡುವೆಯೇ ನಟನ ಈ ಭೇಟಿ ಸಾಕಷ್ಟು ಗಮನ ಸೆಳೆದಿದೆ.
ಮೈಸೂರಿನ ಪ್ರಸಿದ್ಧ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ರಣವೀರ್ ಸಿಂಗ್ ನೆಲದ ಮೇಲೆ ಕುಳಿತು ಪೂಜೆ ಸಲ್ಲಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪೂಜೆಯ ಬಳಿಕ ದೇವಸ್ಥಾನದ ಅರ್ಚಕರೊಂದಿಗೆ ಅವರು ಫೋಟೋಗಳಿಗೂ ಪೋಸ್ ನೀಡಿದರು. ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ರಣವೀರ್ ಶಾಂತ ಹಾಗೂ ಸರಳವಾಗಿ ವರ್ತಿಸಿದ್ದು ಗಮನ ಸೆಳೆಯಿತು.

ಕರ್ನಾಟಕ ಹೈಕೋರ್ಟ್ ಆದೇಶದ ಹಿನ್ನೆಲೆ

ಕೆಲವು ವಾರಗಳ ಹಿಂದೆ ಕಾಂತಾರ ಚಿತ್ರದ ದೃಶ್ಯವನ್ನು ಅನುಕರಿಸಿದ ಆರೋಪದಲ್ಲಿ ರಣವೀರ್ ವಿರುದ್ಧ ದಾಖಲಿಸಲಾಗಿದ್ದ FIR ಅನ್ನು Karnataka High Court ರದ್ದುಪಡಿಸಿತ್ತು. ಈ ಪ್ರಕರಣದಲ್ಲಿ ಕೆಲವು ಸಂಘಟನೆಗಳು ನಟ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದವು. ಏಪ್ರಿಲ್ 2026ರಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್, ರಣವೀರ್ ನೀಡಿದ ನಿರ್ವ್ಯಾಜ ಕ್ಷಮಾಪಣೆಯನ್ನು ಸ್ವೀಕರಿಸಿ ನಾಲ್ಕು ವಾರಗಳೊಳಗೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಸೂಚಿಸಿತ್ತು. ನಟ ಕೂಡ ನ್ಯಾಯಾಲಯದ ಸೂಚನೆ ಪಾಲಿಸುವುದಾಗಿ ಒಪ್ಪಿಕೊಂಡಿದ್ದರು.

ಮುಂಬೈ ವಿಮಾನ ನಿಲ್ದಾಣದಲ್ಲಿ ರಣವೀರ್

ದೇವಾಲಯಕ್ಕೆ ತೆರಳುವ ಮೊದಲು ರಣವೀರ್ ಸಿಂಗ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಮುಖಕ್ಕೆ ಮಾಸ್ಕ್ ಹಾಗೂ ಕಣ್ಣಿಗೆ ಗಾಗಲ್ಸ್ ಧರಿಸಿ ಅವರು ಕಡಿಮೆ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಬಿಳಿ ಕುರ್ಥಾ-ಪೈಜಾಮಾ ಮತ್ತು ನೆಹರು ಜಾಕೆಟ್ ಧರಿಸಿದ್ದ ನಟನ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಯಿತು.

ಡಾನ್ 3 ವಿವಾದ ತೀವ್ರ

ಇದಕ್ಕೂ ಮಧ್ಯೆ Don 3 ಚಿತ್ರದಿಂದ ರಣವೀರ್ ಹೊರಬಂದಿರುವ ವಿಚಾರವೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. Federation of Western India Cine Employees (FWICE) ಇತ್ತೀಚೆಗೆ ನಟನ ವಿರುದ್ಧ ಸಹಕಾರ ನಿರಾಕರಣೆ ನಿರ್ದೇಶನ ಹೊರಡಿಸಿತ್ತು. ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರ ಮನವಿಗೆ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ನಿರ್ದೇಶಕ ಫರ್ಹನಾ ಆಕ್ತರ್​ ಹಾಗೂ ನಿರ್ಮಾಪಕ ರಿತೇಶ್​​ ಅವರು FWICE ಮುಂದೆ ದೂರು ಸಲ್ಲಿಸಿದ್ದರು.

45 ಕೋಟಿ ರೂ. ವೆಚ್ಚದ ಆತಂಕ

FWICE ಹೇಳಿಕೆಯ ಪ್ರಕಾರ, ಡಾನ್ 3 ಚಿತ್ರದ ಪೂರ್ವ ತಯಾರಿಗಾಗಿ ಈಗಾಗಲೇ ಸುಮಾರು 45 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇಂತಹ ಹಂತದಲ್ಲಿ ಪ್ರಮುಖ ನಟ ಚಿತ್ರದಿಂದ ಹೊರಬಂದರೆ ನಿರ್ಮಾಪಕರಿಗೆ ಭಾರೀ ಆರ್ಥಿಕ ನಷ್ಟವಾಗಬಹುದು ಎಂದು ಫರ್ಹಾನ್ ಅಖ್ತರ್ ಆತಂಕ ವ್ಯಕ್ತಪಡಿಸಿದ್ದರು.

ರಣವೀರ್ ಪ್ರತಿಕ್ರಿಯೆ ಏನು?

FWICE ನಿರ್ದೇಶನದ ಬಳಿಕ ರಣವೀರ್ ಸಿಂಗ್ ಪರ ವಕ್ತಾರ ಹೇಳಿಕೆ ಬಿಡುಗಡೆ ಮಾಡಿದ್ದರು. “ರಣವೀರ್ ಸಿಂಗ್ ಚಿತ್ರರಂಗ ಹಾಗೂ ಡಾನ್ ಫ್ರಾಂಚೈಸಿಯ ಎಲ್ಲರಿಗೂ ಅಪಾರ ಗೌರವ ಹೊಂದಿದ್ದಾರೆ. ವೃತ್ತಿಪರ ವಿಚಾರಗಳನ್ನು ಗೌರವಪೂರ್ವಕವಾಗಿ ಹಾಗೂ ಪರಸ್ಪರ ಅರ್ಥೈಸಿಕೊಂಡು ನಿರ್ವಹಿಸುವುದೇ ಅವರ ನಿಲುವು” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಇದೇ ವೇಳೆ, ಹಲವು ಊಹಾಪೋಹಗಳು ಮತ್ತು ಸುದ್ದಿಗಳು ಹರಿದಾಡುತ್ತಿದ್ದರೂ, ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡುವುದನ್ನು ರಣವೀರ್ ಅಗತ್ಯವೆಂದು ಭಾವಿಸಿಲ್ಲ ಎಂದು ವಕ್ತಾರ ತಿಳಿಸಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಯಶಸ್ಸು

ವಿವಾದಗಳ ನಡುವೆಯೂ ರಣವೀರ್ ಸಿಂಗ್ ಅಭಿನಯದ Dhurandhar ಸಿನಿಮಾ ಫ್ರಾಂಚೈಸಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ನಿರ್ದೇಶಕ Aditya Dhar ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ,(ಏಜೆನ್ಸೀಸ್​).