ನಟ ರಣವೀರ್​ ಸಿಂಗ್​ ( Ranveer Singh ) ಗೆ ಬಿಷ್ಣೋಯ್ ಗ್ಯಾಂಗ್ ಬೆದರಿಕೆ 
ಬಾಲಿವುಡ್

ನಿನ್ನ 7 ತಲೆಮಾರು ನೆನಪಿನಲ್ಲಿಟ್ಟುಕೊಳ್ಳಬೇಕು, ಎಲ್ಲರನ್ನೂ ಕೊಲ್ತೀವಿ... ರಣವೀರ್​ಗೆ ಬಿಷ್ಣೋಯ್ ಗ್ಯಾಂಗ್ ಬೆದರಿಕೆ! Ranveer Singh

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ ಸೆಲೆಬ್ರಿಟಿಗಳಿಗೆ ನಟೋರಿಯಸ್​ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ದುಸ್ವಪ್ನವಾಗಿ ಕಾಡುತ್ತಿದೆ
  • ಖ್ಯಾತ ನಟ ರಣವೀರ್ ಸಿಂಗ್​ಗೂ ಜೀವ ಬೆದರಿಕೆ ಹಾಕಿದೆ ಈ ನಟೋರಿಯಸ್​ ಗ್ಯಾಂಗ್​
  • ವಾಟ್ಸ್​ಆ್ಯಪ್​ ಮೂಲಕ ವಾಯ್ಸ್ ಮೆಸೇಜ್‌ಗಳನ್ನು ಕಳುಹಿಸಿರುವ ಗ್ಯಾಂಗ್​
  • ನಿನಗೆ ಸಂಬಂಧಿಸಿದ ಯಾರನ್ನೂ ಬಿಡುವುದಿಲ್ಲ ಎಂದು ರಣವೀರ್​ಗೆ ಬೆದರಿಕೆ
Ranveer Singh : ಬಾಲಿವುಡ್​ ಸೆಲೆಬ್ರಿಟಿಗಳಿಗೆ ನಟೋರಿಯಸ್​ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ದುಸ್ವಪ್ನವಾಗಿ ಕಾಡುತ್ತಿದೆ. ಈ ಹಿಂದೆ ಅನೇಕ ಹೀರೋಗಳಿಗೆ ಬೆದರಿಕೆ ಹಾಕಿರುವ ಈ ಗ್ಯಾಂಗ್​, ಇದೀಗ ಖ್ಯಾತ ನಟ ರಣವೀರ್ ಸಿಂಗ್​ಗೂ ಜೀವ ಬೆದರಿಕೆ ಹಾಕಿದೆ. ವಾಟ್ಸ್​ಆ್ಯಪ್​ ಮೂಲಕ ವಾಯ್ಸ್ ಮೆಸೇಜ್‌ಗಳನ್ನು ಕಳುಹಿಸಿರುವ ಗ್ಯಾಂಗ್​ ನಿನಗೆ ಸಂಬಂಧಿಸಿದ ಯಾರನ್ನೂ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದೆ.
ಹ್ಯಾರಿ ಬಾಕ್ಸರ್ (ಹರಿ ಚಂದ್ ಜಾಟ್ ಎಂದೂ ಕರೆಯಲ್ಪಡುವ) ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಕಾರ್ಯಕರ್ತನಾಗಿದ್ದು, ರಣವೀರ್ ಸಿಂಗ್‌ಗೆ ಬೆದರಿಕೆಯ ಆಡಿಯೋ ಸಂದೇಶಗಳನ್ನು ಕಳುಹಿಸಿದವನು ಈತನೇ ಎಂದು ಮುಂಬೈ ಪೊಲೀಸ್ ತನಿಖೆಯಲ್ಲಿ ಶಂಕಿಸಲಾಗಿದೆ. 
ರಣವೀರ್ ಅವರ ಮ್ಯಾನೇಜರ್‌ಗೆ ವಾಟ್ಸ್​ಆ್ಯಪ್​ ಮೂಲಕ ಬಂದ ವಾಯ್ಸ್ ನೋಟ್‌ಗಳಲ್ಲಿ ಹ್ಯಾರಿ ಬಾಕ್ಸರ್ ಎಂದು ಗುರುತಿಸಿಕೊಂಡು, 10 ಕೋಟಿ ರೂಪಾಯಿ ಹಣ ಬೇಡಿಕೆ ಇಟ್ಟಿದ್ದಾನೆ. ಇಲ್ಲದಿದ್ದರೆ ರಣವೀರ್ ಅವರ ಸಿಬ್ಬಂದಿ, ಮ್ಯಾನೇಜರ್‌ಗಳು ಮತ್ತು ಕುಟುಂಬಗಳನ್ನು ಗುರಿಯಾಗಿಸಿ ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾನೆ. VPN ಬಳಸಿಕೊಂಡು ವಿದೇಶದಿಂದ ಈ ಸಂದೇಶ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಯ್ಸ್​ ಮೆಸೇಜ್​ನಲ್ಲಿ ಏನಿದೆ?

ರಣವೀರ್, ನಿನ್ನ ಏಳು ತಲೆಮಾರುಗಳು ನೆನಪಿಟ್ಟುಕೊಳ್ಳುವಂತೆ ನಾವು ನಿನಗೆ ಬುದ್ಧಿ ಕಲಿಸುತ್ತೇವೆ. ನಿನ್ನ ಬಳಿ ಕೆಲಸ ಮಾಡುವ ವ್ಯವಸ್ಥಾಪಕರು ಮತ್ತು ಸಿಬ್ಬಂದಿಯ ಎಲ್ಲಾ ವಿವರಗಳು ನಮ್ಮಲ್ಲಿವೆ. ಅವರು ಎಲ್ಲಿದ್ದಾರೆ? ಮತ್ತು ಏನು ಮಾಡುತ್ತಿದ್ದಾರೆ ಅನ್ನೋದು ನಮಗೆ ಚೆನ್ನಾಗಿ ತಿಳಿದಿದೆ. ನಾವು ನಿನಗೆ ನೇರವಾಗಿ ಏನನ್ನೂ ಮಾಡುವುದಿಲ್ಲ ಆದರೆ, ನಿನ್ನ ಬಳಿ ಕೆಲಸ ಮಾಡುವ ಎಲ್ಲರನ್ನೂ ಕೊಲ್ಲುತ್ತೇವೆ. ಆಗ ಮಾತ್ರ ನಿನಗೆ ಬುದ್ಧಿ ಬರುತ್ತದೆ ಎಂದು ಗ್ಯಾಂಗ್​ ಬೆದರಿಕೆ ಹಾಕಿದೆ.
ಈ ಬೆದರಿಕೆಗಳು ನಿನಗೆ ಮಾತ್ರವಲ್ಲ, ಇಡೀ ಬಾಲಿವುಡ್ ಚಿತ್ರರಂಗಕ್ಕೂ ಅನ್ವಯಿಸುತ್ತವೆ. ನೀನು ನಮ್ಮ ಮಾತನ್ನು ಕೇಳದಿದ್ದರೆ, ಮುಂದಿನ ದಿನಗಳಲ್ಲಿ ನೀನು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವಾಟ್ಸ್​ಆ್ಯಪ್​ನಲ್ಲಿ ಕಳುಹಿಸಿರುವ ವಾಯ್ಸ್​ ಮೆಸೇಜ್​ನಲ್ಲಿ ಬೆದರಿಕೆ ಹಾಕಲಾಗಿದೆ. ಇದೀಗ ಈ ಸುದ್ದಿ ಬಾಲಿವುಡ್ ಉದ್ಯಮದಲ್ಲಿ  ಭಾರಿ ಸಂಚಲನ ಮೂಡಿಸುತ್ತಿದೆ. ಪ್ರಸ್ತುತ, ಮುಂಬೈ ಪೊಲೀಸರು ಈ ಆಡಿಯೋವನ್ನು ಆಧರಿಸಿ, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಅಂದಹಾಗೆ, ಹ್ಯಾರಿ ಬಾಕ್ಸರ್ ರಾಜಸ್ಥಾನ, ಪಂಜಾಬ್ ಮತ್ತು ದೆಹಲಿಯಲ್ಲಿ ಹಲವು ಹಣ ಸುಲಿಗೆ, ದರೋಡೆ ಮತ್ತು ಹತ್ಯೆ ಪ್ರಯತ್ನದ ಪ್ರಕರಣಗಳಲ್ಲಿ ಆರೋಪಿ ಆಗಿದ್ದಾನೆ. ಅಂದಹಾಗೆ, ರೋಹಿತ್ ಶೆಟ್ಟಿ ಮನೆಯ ಮೇಲಿನ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಈ ಬೆದರಿಕೆ ಬಂದಿದ್ದು, ರಣವೀರ್ ಸಿಂಗ್​ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಏನಿದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್?

ಭಯೋತ್ಪಾದಕ ಸಂಘಟನೆ ಎಂದು ಕೆನಡಾ ಪಟ್ಟಿ ಮಾಡಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಜಾಗತಿಕವಾಗಿ ಕಾರ್ಯನಿರ್ವಹಿಸುತ್ತಿರುವ 700ಕ್ಕೂ ಹೆಚ್ಚು ಶೂಟರ್‌ಗಳೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂಬ ಮಾಹಿತಿ ಇದೆ. ಈ ಗ್ಯಾಂಗ್ ರ‍್ಯಾಪರ್ ಮತ್ತು ರಾಜಕಾರಣಿ ಸಿಧು ಮೂಸೆವಾಲಾ ಅವರ ಹತ್ಯೆ, ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕುವುದು ಮತ್ತು ಖಲಿಸ್ತಾನ್ ಪರ ಚಳುವಳಿಯೊಂದಿಗೆ ಸಂಪರ್ಕ ಹೊಂದಿರುವ ಆರೋಪ ಸೇರಿದಂತೆ ಹಲವಾರು ಉನ್ನತ ಪ್ರಕರಣಗಳಲ್ಲಿ ಭಾಗಿಯಾಗಿದೆ. ಈ ಗ್ಯಾಂಗ್​ನ ಲೀಡರ್​ ಲಾರೆನ್ಸ್​ ಬಿಷ್ಟೋಯ್​ ಜೈಲಿನಲ್ಲಿದ್ದುಕೊಂಡೇ ಅನೇಕ ಕೃತ್ಯಗಳನ್ನು ಎಸಗುತ್ತಿದ್ದಾನೆ ಎಂಬ ಮಾಹಿತಿ ಇದೆ. 
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ರಣವೀರ್ ಸಿಂಗ್ ತಮ್ಮ ಸ್ಪೈ ಥ್ರಿಲ್ಲರ್ ಧುರಂಧರ್ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿ, 1000 ಕೋಟಿ ರೂ. ಗಳಿಸಿದ್ದು, ಜಾಗತಿಕವಾಗಿ 1300 ರೂ.ಗಳನ್ನು ದಾಟಿದೆ. ಇದೇ ಖುಷಿಯಲ್ಲಿ ಮುಂದಿನ ಮಾರ್ಚ್ 19 ರಂದು ಈ ಸಿನಿಮಾದ ಮುಂದಿನ ಭಾಗ ತೆರೆಕಾಣಲಿದ್ದು, ಈ ಸಿನಿಮಾವು  ಹಿಂದಿ, ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡದಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಧುರಂಧರ್​ ಸಿನಿಮಾವನ್ನು ಆದಿತ್ಯ ಧರ್​ ನಿರ್ದೇಶಿಸಿದ್ದಾರೆ. ಆರ್ ಮಾಧವನ್, ಸಂಜಯ್ ದತ್ತ್, ಸಾರಾ ಅರ್ಜುನ್, ರಾಕೇಶ್ ಬೇಡಿ, ಅರ್ಜುನ್ ರಾಂಪಾಲ್ ಪ್ರಮುಖ ತಾರಾಗಣದಲ್ಲಿದ್ದಾರೆ, (ಏಜನ್ಸೀಸ್).