ರಾಮನ ಪಾತ್ರದಲ್ಲಿ ರಣಬೀರ್ ಕಪೂರ್  
ಬಾಲಿವುಡ್

ಹನುಮ ಜಯಂತಿಗೆ ಶ್ರೀರಾಮ ದರ್ಶನ : ಮರ್ಯಾದಾ ಪುರುಷೋತ್ತಮನ ಅವತಾರದಲ್ಲಿ ಮಿಂಚಿದ ರಣಬೀರ್ ಕಪೂರ್

ಪ್ರಮುಖ ಮುಖ್ಯಾಂಶಗಳು

  • ರಾಮನ ರೂಪದಲ್ಲಿ ಸ್ಫುರದ್ರೂಪಿಯಾಗಿ ಕಾಣಿಸಿಕೊಂಡ ರಣಬೀರ್
  • 2.38 ನಿಮಿಷದ ಟೀಸರ್ ನಲ್ಲಿ ರಾಮನ ಪಾತ್ರವಷ್ಟೇ ಹೈಲೈಟ್​
  • ಅಂತಿಮದಲ್ಲಿ ಹಿಂಬದಿಯಾಗಿ ಕಾಣಿಸಿಕೊಂಡ ರಾವಣ ಯಶ್​
ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶನದ, ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ ‘ರಾಮಾಯಣ’. ಈ ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಇದೀಗ ಮೊದಲ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಉಳಿದಂತೆ ಸೀಕ್ವೆಲ್ ನಿರ್ಮಾಣ ಹಂತದಲ್ಲಿದೆ. ಅಂದಾಜು 4500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಈ ಕಾರಣಕ್ಕಾಗಿ ಜಾಗತಿಕವಾಗಿ ಗಮನಸೆಳೆದಿದೆ. ಇದೀಗ ಚಿತ್ರತಂಡ ರಾಮನ ಪಾತ್ರಧಾರಿ ರಣಬೀರ್ ಕಪೂರ್ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಿದೆ. ಆ ಮೂಲಕ ಹನುಮ ಜಯಂತಿಗೆ ಶ್ರೀರಾಮನ ದರ್ಶನ ನೀಡಿದೆ. ಪೌರಾಣಿಕ ಪಾತ್ರದಲ್ಲಿ ರಣಬೀರ್ ಮಿಂಚಿದ್ದು, ಸ್ಫುರದ್ರೂಪಿಯಾಗಿ ಕಾಣಿಸಿಕೊಂಡಿದ್ದಾರೆ. 2.38 ನಿಮಿಷದ ಈ ಟೀಸರ್‌ನಲ್ಲಿ ದೈತ್ಯ ರಾಕ್ಷಸನ ಸಂಹಾರ ಮಾಡುವ, ಸೀತೆಯ ಸ್ವಯಂವರದಲ್ಲಿ ರಾಮ ಶಿವಧನಸ್ಸು ಎತ್ತಿರುವ ಸಾಹಸ, ತಂದೆಯ ಮಾತಿನಂತೆ ಕಾಡಿನ ವನವಾಸದ ಸಣ್ಣ ಸಣ್ಣ ತುಣುಕುಗಳನ್ನು ಕಾಣಬಹುದು. ಅಂತಿಮವಾಗಿ ರಾವಣ (ಯಶ್) ಝಲಕ್ ಕೂಡ ಇದೆ. ಆದರೆ, ಅವರ ಲುಕ್ ರಿವೀಲ್ ಮಾಡದೆ ಚಿತ್ರತಂಡ ಗೌಪ್ಯತೆ ಕಾಪಾಡಿಕೊಂಡಿದೆ. ಇಡೀ ಸಿನಿಮಾ ಐಮ್ಯಾಕ್ಸ್‌ನಲ್ಲಿ ಮೂಡಿಬರಲಿದೆ. ನಿರ್ದೇಶಕ ನಿತೇಶ್ ತಿವಾರಿ, ‘ದೈವಿಕ ಅನುಭವ, ಭಾವನೆಗಳಲ್ಲಿ ರಾಮಾಯಣದ ಹಿರಿಮೆ ಅಡಗಿದೆ. ಮನುಷ್ಯ ಸರಿದಾರಿಯಲ್ಲಿ ನಡೆಯುವಂತೆ ತಿಳಿಸುವುದೇ ಈ ಮಹಾಕಾವ್ಯದ ತಿರುಳು. ಚಿತ್ರದಲ್ಲಿ ರಾಮನ ಹಾದಿ ಮಾನವೀಯತೆಯಿಂದ ಕೂಡಿದ್ದು, ಆ ಪಾತ್ರ ಸೇರಿ ಇಡೀ ಚಿತ್ರಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ. ರಣಬೀರ್, ಸಾಯಿ ಪಲ್ಲವಿ, ಯಶ್ ಜತೆ ಈ ಹೊಸ ‘ರಾಮಾಯಣ’ದಲ್ಲಿ ರವಿ ದುಬೆ, ಸನ್ನಿ ಡಿಯೋಲ್, ಕಾಜಲ್ ಅರ್ಗವಾಲ್ ಸೇರಿ ಹಲವು ಉತ್ತರ ಹಾಗೂ ದಕ್ಷಿಣ ಭಾರತದ ಕಲಾವಿದರ ಸಂಗಮವಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಎ.ಆರ್.ರೆಹಮಾನ್, ಹ್ಯಾನ್ಸ್ ಜಿಮ್ಮರ್ ಸಂಗೀತ ಚಿತ್ರಕ್ಕಿದೆ. ಇದೇ ದೀಪಾವಳಿ ‘ರಾಮಾಯಣ ಭಾಗ 1’ ಹಾಗೂ 2027ರ ದೀಪಾವಳಿ ಹಬ್ಬಕ್ಕೆ ಸೀಕ್ವೆಲ್ ಬಿಡುಗಡೆಯಾಗಲಿವೆ.
ರಾಮನಿಂದ ಕಲಿತಿದ್ದೇನೆ
ರಾಮನ ಪಾತ್ರದಲ್ಲಿ ನಟಿಸಿರುವ ರಣಬೀರ್ ಕಪೂರ್ ಸಿನಿಮಾ ಹಾಗೂ ಪಾತ್ರದ ಬಗ್ಗೆ, ‘ನಾನು ಇಲ್ಲಿ ರಾಮನನ್ನು ಪ್ರತಿನಿಧಿಸಲು ಬಂದಿಲ್ಲ. ಬದಲಾಗಿ, ಅವರಿಂದ ಕಲಿಯಲು ಬಂದಿದ್ದೇನೆ. ರಾಮನ ಸರಳತೆ, ಪರಿಶುದ್ಧತೆ, ಪ್ರಾಮಾಣಿಕತೆ ಅಪರೂಪವಾದುದು. ಅದನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ

ಸುಮಾರು 4500 ಕೋಟಿ ಬಜೆಟ್‌ನಲ್ಲಿ ತಯಾರಿಯಾಗುತ್ತಿರುವ ‘ರಾಮಾಯಣ’ ಸರಣಿ ಮೇಲೆ ತುಂಬಾ ನಿರೀಕ್ಷೆಯಿದೆ. ಆದರೆ, ಇದೀಗ ರಿಲೀಸ್ ಮಾಡಿರುವ ಫಸ್ಟ್ ಲುಕ್ ಟೀಸರ್‌ಗೆ ದೊಡ್ಡಮಟ್ಟದಲ್ಲಿ ಪ್ರತಿಕ್ರಿಯೆಗಳೇನೂ ಬಂದಿಲ್ಲ. ಇಡೀ ಟೀಸರ್ ವಿಎಫ್​ಎಕ್ಸ್ ಹಾಗೂ ಎಐನಲ್ಲಿ ಕಳೆದುಹೋಗಿದೆ. ರಾಮನ ಪಾತ್ರವನ್ನಷ್ಟೇ ಸ್ಪಷ್ಟವಾಗಿ ತೋರಿಸಿದ್ದು, ಉಳಿದಂತೆ ತಾಂತ್ರಿಕ ಗುಣಮಟ್ಟದ ಬಲಪ್ರದರ್ಶನ ಮಾಡಲಾಗಿದೆ. ಆದರೆ, ‘ರಾಮಾಯಣ’ದಂತಹ ಮಹಾಕಾವ್ಯದ ದೃಶ್ಯಗಳನ್ನು ತೋರಿಸುವಲ್ಲಿ ಟೀಸರ್ ಇನ್ನುಷ್ಟು ಪರಿಣಾಮಕಾರಿಯಾಗಿ ಮೂಡಿಬರಬೇಕಿತ್ತು ಎಂಬ ಅಭಿಪ್ರಾಯವ್ಯಕ್ತವಾಗಿದೆ.