ಸೊಸೆ ಮದುವೆಯಲ್ಲಿ ಕುಣಿಯುತ್ತಿರುವ ರಾಜ್ಪಾಲ್ ಯಾದವ್
- ಆರ್ಥಿಕ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್ಪಾಲ್ ಯಾದವ್
- ಸೋಮವಾರ ಜಾಮೀನಿನ ಮೇಲೆ ಆಚೆ ಬಂದಿರುವ ನಟ
- ಸೊಸೆ ಮದುವೆಯಲ್ಲಿ ಕುಣಿಯುತ್ತಿರುವ ಹಾಸ್ಯನಟ
ಬಾಲಿವುಡ್: ಆರ್ಥಿಕ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಖ್ಯಾತ ಹಾಸ್ಯನಟ ರಾಜ್ಪಾಲ್ ಯಾದವ್ (Rajpal Yadav) ಗೆ ಜಾಮೀನು ದೊರೆತ ನಂತರ ತನ್ನ ತಂಗಿ ಮಗಳ ಮದುವೆಯಲ್ಲಿ ಕುಣಿಯುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಸೋಮವಾರ (ಫೆ.16) ದೆಹಲಿ ಹೈಕೋರ್ಟ್ನಿಂದ ಜಾಮೀನು ಪಡೆದ ರಾಜ್ಪಾಲ್ ಯಾದವ್, ಶಹಜಹಾನ್ಪುರದಲ್ಲಿ ನಡೆಯಲಿರುವ ತಂಗಿ ಮಗಳ ಮದುವೆಗೆ ಆಗಮಿಸಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋನಲ್ಲಿ ರಾಜ್ಪಾಲ್, ಸಲ್ಮಾನ್ ಖಾನ್ ನಟನೆಯ ಹೆಲೋ ಬ್ರದರ್ ಸಿನಿಮಾದ ತೇರಿ ಚುನರಿಯಾ ಹಾಡಿಗೆ ಹೆಜ್ಜೆ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಇಂದು ರಾಜ್ಪಾಲ್ ಅವರ ಸಹೋದರ ಸೊಸೆಯ ಮೆಹೆಂದಿ ಕಾರ್ಯಕ್ರಮವಾಗಿದ್ದು, ಈ ಸಂದರ್ಭದಲ್ಲಿ ರಾಜ್ಪಾಲ್ ಬೀಜ್ ಬಣ್ಣದ ಕುರ್ತಾ ಮತ್ತು ಲುಂಗಿಯನ್ನು ಧರಿಸಿ ಹಾಡಿಗೆ ತಕ್ಕಂತೆ ಸ್ಟೆಪ್ ಹಾಕಿದ್ದಾರೆ.
ಪ್ರಕರಣದ ಹಿನ್ನಲೆ
2010 ರಲ್ಲಿ ರಾಜ್ಪಾಲ್ ಯಾದವ್ ಅತಾ ಪತಾ ಲಾಪತಾ ಎಂಬ ಸಿನಿಮಾವನ್ನು ನಿರ್ಮಾಣ ಮತ್ತು ನಿರ್ದೇಶಿಸಲು, ಮುರಳಿ ಪ್ರಾಜೆಕ್ಟ್ ಎಂಬ ಸಂಸ್ಥೆಯಿಂದ 5 ಕೋಟಿ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದರು.
ಆದರೆ ಬಿಡುಗಡೆಯಾದ ಈ ಸಿನಿಮಾ ನೆಲಕಚ್ಚಿದ ಪರಿಣಾಮ, ಹಣವನ್ನು ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಸಾಕಷ್ಟು ಸಮಯವಕಾಶ ನೀಡಿದ ಬಳಿಕವು ರಾಜ್ಪಾಲ್ ಹಣವನ್ನು ಮರಳಿ ನೀಡದಿದ್ದಾಗ, ಮುರಳಿ ಪ್ರಾಜೆಕ್ಟ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು. ನ್ಯಾಯಾದಲ್ಲಿ ಸಹ ರಾಜ್ಪಾಲ್ ಹಣವನ್ನು ಖಂಡಿತವಾಗಿ ಹಿಂದಿರುಗಿಸುತ್ತೇನೆ ಎಂದು ಹೇಳಿದ ಮೇಲೂ, ಸಾಲವನ್ನು ಮರುಪಾವತಿ ಮಾಡುವಲ್ಲಿ ವಿಫಲರಾದರು.
ಕೊನೆಗೆ ಪ್ರಕರಣ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದಾಗ ರಾಜ್ಪಾಲ್, ನನ್ನ ಬಳಿ ಹಣವಿಲ್ಲ, ಇದ್ದರೆ ಖಂಡಿತವಾಗಿ ಇವರ ಹಣವನ್ನು ಹಿಂದಿರುಗಿಸುತ್ತೇನೆ ಎಂಬ ಹೇಳಿಕೆಯನ್ನು ನೀಡಿದಾಗ, ನ್ಯಾಯಾಲಯ ನೀವು ಹಣವನ್ನು ಮರು ಪಾವತಿ ಮಾಡುವವರೆಗೆ ಜೈಲಿನಲ್ಲಿ ಇರಿ ಎಂದು ಹೇಳಿ, ರಾಜ್ಪಾಲ್ನನ್ನು ತಿಹಾರ್ ಜೈಲಿಗೆ ಶರಣಾಗುವಂತೆ ಆದೇಶಿಸಿತು.
ಹಾಸ್ಯನಟನ ಬೆಂಬಲಕ್ಕೆ ನಿಂತ ಬಾಲಿವುಡ್
ರಾಜ್ಪಾಲ್ನನ್ನು ತಿಹಾರ್ ಜೈಲಿಗೆ ಕಳುಹಿಸಿದ ನಂತರ, ಹಲವಾರು ನಟರು ಯಾದವ್‌ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದರು. ಮತ್ತು ಈ ಕಠಿಣ ಸಮಯದಲ್ಲಿ ಅವರಿಗೆ ಸಹಾಯ ಮಾಡುವಂತೆ ಉದ್ಯಮದ ಸಹ ಸದಸ್ಯರಿಗೆ ಸಾರ್ವಜನಿಕವಾಗಿ ಮನವಿ ಮಾಡಿದರು. ಸೋನು ಸೂದ್, ಅಜಯ್ ದೇವಗನ್ ಮತ್ತು ಸಲ್ಮಾನ್ ಖಾನ್‌ನಿಂದ ಹಿಡಿದು ಗುರ್ಮೀತ್ ಚೌಧರಿಯವರೆಗೆ ಅನೇಕರು ಅವರಿಗೆ ಬೆಂಬಲ ನೀಡಿದರು. ಈ ಮಧ್ಯೆ, ಅನೇಕ ಗಾಯಕರು ಮತ್ತು ಚಲನಚಿತ್ರ ನಿರ್ಮಾಪಕರು ಅವರಿಗೆ ಮುಂಗಡ ಹಣ ನೀಡಿ ತಮ್ಮ ಮುಂಬರುವ ಸಿನಿಮಾಗಳಲ್ಲಿ ಅವಕಾಶವನ್ನು ಸಹ ನೀಡಿದ್ದಾರೆ,(ಏಜನ್ಸೀಸ್).