Harshil Kalia (ಚಿತ್ರ Instagram)
ಜೈಪುರ: ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಟಿ ಹರ್ಷಿಲ್ ಕಾಲಿಯಾ ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಸೋಮವಾರ (ಮಾ.24) ನಡೆದಿದೆ.
ಘಟನೆ ಏನು?
ಜೈಪುರದ ಶಿಪ್ರಾ ಪಾತ್ ರಸ್ತೆಯಲ್ಲಿ ರಾತ್ರಿ ಸುಮಾರು 11:30ಕ್ಕೆ ಈ ಘಟನೆ ನಡೆದಿದೆ. ಹರ್ಷಿಲ್ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಅವರ ವಾಹನವು ಡಿವೈಡರ್‌ಗೆ ಡಿಕ್ಕಿ ಹೊಡೆದು ಎಡಭಾಗಕ್ಕೆ ಪಲ್ಟಿಯಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಆಗಮಿಸಿ, ಕಾರಿನಿಂದ ನಟಿಯನ್ನು ಹೊರತೆಗೆದು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸರ ತನಿಖೆ
ಘಟನೆಗೆ ಸಂಬಂಧಿಸಿದಂತೆ ಜೈಪುರದ ಶಿಪ್ರಾ ಪಾತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಅತಿ ವೇಗದಲ್ಲಿತ್ತೋ ಅಥವಾ ಬೇರೆ ಯಾವುದಾದರೂ ವಾಹನವನ್ನು ಓವರ್ ಟೇಕ್ ಮಾಡುತ್ತಿತ್ತೋ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಯಾರು ಈ ಹರ್ಷಿಲ್ ಕಾಲಿಯಾ?
ಕಾಲಿಯಾ 'ಕ್ರೈಮ್ ನೆಕ್ಸ್ಟ್ ಡೋರ್' ವೆಬ್ ಸರಣಿಯಲ್ಲಿ ನಟಿಸಿದ್ದಾರೆ. 2021ರ 'ಮಿಸ್ ದಿವಾ ರಾಜಸ್ಥಾನ' ಮತ್ತು 'ಮಿಸ್ ಪಿಂಕ್ ಸಿಟಿ' ಸ್ಪರ್ಧೆಗಳಲ್ಲಿ ಅವರು ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಸುದ್ದಿ ವಾಹಿನಿಯ ನಿರೂಪಕಿಯಾಗಿ ಸೇವೆ ಸಲ್ಲಿಸಿದ್ದರು. ಆದಾಗ್ಯೂ, ನಟಿಯ ತಂದೆ ಕೂಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಖಾಸಗಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಾರೆ (ಏಜೆನ್ಸೀಸ್).