ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಧುರಂಧರ್ ಸಿನಿಮಾ
- ಓಟಿಟಿಯಲ್ಲಿ ಬಿಡುಗಡೆ ಆಗಿರುವ ರಣವೀರ್ ಸಿಂಗ್ ಅಭಿನಯದ ಧುರಂಧರ್
- ಸಿನಿಮಾದ ಕಾರ್ಯನಿರ್ವಾಹಕ ನಿರ್ಮಾಪಕ ರಾಹುಲ್ ಗಾಂಧಿ ಹೆಸರು
- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೇ ಈ ಸಿನಿಮಾದ ನಿರ್ಮಾಪಕರೆ?
ಬಾಲಿವುಡ್: ರಣವೀರ್ ಸಿಂಗ್ ಅಭಿನಯದ ಮತ್ತು ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾ ಬಿಡುಗಡೆಯಾಗಿ ಎರಡು ತಿಂಗಳು ಕಳೆದರೂ ಈ ಚಿತ್ರದ ಹಾವಳಿ ಕಡಿಮೆಯಾಗುತ್ತಿಲ್ಲ. ಕೇವಲ ಚಿತ್ರ ಮಂದಿರವಷ್ಟೇ ಅಲ್ಲದೇ ಈಗ ಓಟಿಟಿಯಲ್ಲಿ ಸಹ ಈ ಸಿನಿಮಾ ಅಬ್ಬರಿಸುತ್ತಿದೆ.
ಓಟಿಟಿಯಲ್ಲಿ ಬಿಡುಗಡೆಯಾದ ನಂತರ ಈ ಸಿನಿಮಾ ನಿರ್ಮಾಣಕ್ಕೆ ಸಹಾಯ ಮಾಡಿದವರ ಹೆಸರಿನಲ್ಲಿ 'ರಾಹುಲ್ ಗಾಂಧಿ' (Rahul Gandhi) ಎಂಬ ಹೆಸರನ್ನು ಗಮನಿಸಿರುವ ವೀಕ್ಷಕರು ಧುರಂಧರ್ ಸಿನಿಮಾದ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೆಲಸ ಮಾಡಿದ್ದಾರೆ ಎಂದು ಭಾವಿಸಿದ್ದಾರೆ ಮತ್ತು ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ.
ಎಕ್ಸ್ (ಟ್ವಿಟರ್) ಪೋಸ್ಟ್ವೊಂದನ್ನು ಹಂಚಿಕೊಂಡಿರುವ ವ್ಯಕ್ತಿ, ರಾಹುಲ್ ಗಾಂಧಿ ಈ ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕರು ಎಂದು ತಿಳಿಯಲು ಮತ್ತೊಮ್ಮೆ ನೆಟ್‌ಫ್ಲಿಕ್ಸ್‌ನಲ್ಲಿ ಧುರಂಧರ್ ವೀಕ್ಷಿಸಿದೆ. ರಾಹುಲ್ ಗಾಂಧಿ ಅತಿದೊಡ್ಡ ರಾಷ್ಟ್ರೀಯವಾದಿ ನಾಯಕ ಎಂದು ನನಗೆ ಯಾವಾಗಲೂ ತಿಳಿದಿತ್ತು, ಅವರು ಮೌನವಾಗಿ ಕೆಲಸ ಮಾಡುವ ಜಾಯಮಾನಕ್ಕೆ ಸೇರಿದವರು ಎಂದು ಬರೆದುಕೊಂಡಿದ್ದಾರೆ.
ನೈಜ ಸಂಗತಿ ಏನು?
ಈ ವಿಷಯದ ಕುರಿತಂತೆ ಸತ್ಯ ಶೋಧನೆ ನಡೆಸಿದಾಗ ತಿಳಿದ ಮಾಹಿತಿ ಏನೆಂದರೆ, ಧುರಂಧರ್ ಸಿನಿಮಾದ ಕಾರ್ಯನಿರ್ವಾಹಕ ನಿರ್ಮಾಪಕನ ಹೆಸರು ರಾಹುಲ್ ಗಾಂಧಿಯೇ? ಆದರೆ ಈ ರಾಹುಲ್ ಗಾಂಧಿಗೂ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ.
ಧುರಂಧರ್ ಸಿನಿಮಾದ ರಾಹುಲ್ ಗಾಂಧಿ ಬಾಲಿವುಡ್ನಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಧುರಂಧರ್ಗೂ ಮುನ್ನ ಅಕ್ಷಯ್ ಕುಮಾರ್ ನಟನೆಯ ರುಸ್ತುಂ, ಮನೋಜ್ ಬಾಜಪೇಯಿ ಮುಖ್ಯ ಭೂಮಿಕೆಯಲ್ಲಿರುವ ವೆಬ್ ಸರಣಿ ದಿ ಪ್ಯಾಮಿಲಿ ಮ್ಯಾನ್ ಮತ್ತು ದುಲ್ಖರ್ ಸಲ್ಮಾನ್ ನಟನೆಯ ಲಕ್ಕಿ ಭಾಸ್ಕರ್ ಸಿನಿಮಾದಲ್ಲಿ ಸಹ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
ನಿಜಕ್ಕೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೇ ಧುರಂಧರ್ ಸಿನಿಮಾದ ನಿರ್ಮಾಪಕರೇ? ಎಂದ ಒಬ್ಬ ವ್ಯಕ್ತಿ ಗ್ರೋಕ್ ಎಐ ಬಳಿ ಪ್ರಶ್ನೆಯನ್ನು ಸಹ ಕೇಳಿದ್ದಾನೆ. ಆಗ ಗ್ರೋಕ್ ಸಹ ಭಾರತೀಯ ರಾಜಕೀಯದಲ್ಲಿ ಸಕ್ರೀಯವಾಗಿರುವ ರಾಹುಲ್ ಗಾಂಧಿಗೂ, ಧುರಂಧರ್ ಸಿನಿಮಾದ ರಾಹುಲ್ ಗಾಂಧಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.
ಮಾರ್ಚ್ 19 ರಂದು ಎರಡನೇ ಭಾಗ ಬಿಡುಗಡೆ
ಧುರಂಧರ್ ಸಿನಿಮಾದ ಮೊದಲ ಭಾಗದ ಯಶಸ್ಸಿನ ನಂತರ ಎರಡನೇ ಭಾಗವು ಮಾರ್ಚ್ ತಿಂಗಳ 19 ನೇ ತಾರೀಖಿನಂದು ತೆರೆ ಕಾಣಲಿದೆ. ಈ ಸಿನಿಮಾವು 2025 ರಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಅತ್ಯಂತ ಹೆಚ್ಚನ ಹಣ (ಹೆಚ್ಚು ಕಡಿಮೆ 1000 ಕೋಟಿ) ವನ್ನು ಗಳಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪ್ರಾತ್ರವಾಗಿತ್ತು.
ಈ ಸಿನಿಮಾವು ನೈಜ ಘಟನೆಗಳ ಆಧಾರದಲ್ಲಿ ನಿರ್ಮಿಸಲಾಗಿದ್ದು, ಪಾಕಿಸ್ತಾನದಲ್ಲಿರುವ ಭಾರತೀಯ ಗೂಢಾಚಾರನ ಸುತ್ತ ಕಥೆಯನ್ನು ಹೆಣೆಯಲಾಗಿದೆ. ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್ತ್, ಅರ್ಜುನ್ ರಾಂಪಾಲ್, ಆರ್. ಮಾಧವನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ,(ಏಜನ್ಸೀಸ್).