ಬಾಲಿವುಡ್ ನಟಿ ರಾಧಿಕಾ ಆಪ್ಟೆ
- ಚಿತ್ರರಂಗದಲ್ಲಿ ತಮ್ಮದೇಯಾದ ವಿಶಿಷ್ಟ ಛಾಪು ಮೂಡಿಸಿರುವ ಬಾಲಿವುಡ್ ನಟಿ ರಾಧಿಕಾ ಆಪ್ಟೆ
- ಸಿನಿಮಾ ಉದ್ಯಮದಲ್ಲಿ 20 ವರ್ಷ ಪೂರೈಸಿದ ಸಂದರ್ಭದಲ್ಲಿ ಮುಕ್ತವಾಗಿ ಮಾತನಾಡಿದ ರಾಧಿಕಾ
- ಇಷ್ಟವಿಲ್ಲದಿದ್ದರೂ ಹಣಕ್ಕಾಗಿ ದಕ್ಷಿಣ ಭಾರತದ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾಗಿ ಹೇಳಿಕೆ
ಮುಂಬೈ: ಚಿತ್ರರಂಗದಲ್ಲಿ ತಮ್ಮದೇಯಾದ ವಿಶಿಷ್ಟ ಛಾಪು ಮೂಡಿಸಿರುವ ಬಾಲಿವುಡ್ ನಟಿ ರಾಧಿಕಾ ಆಪ್ಟೆ ( Radhika Apte ), ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ತೊಂದರೆಗಳ ಬಗ್ಗೆ ಓಪನ್ ಆಗಿ ಹೇಳಿಕೊಳ್ಳುವ ಮೂಲಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಸಿನಿಮಾ ಉದ್ಯಮದಲ್ಲಿ 20 ವರ್ಷ ಪೂರೈಸಿದ ಸಂದರ್ಭದಲ್ಲಿ ಮಾತನಾಡಿದ ರಾಧಿಕಾ, ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಆರ್ಥಿಕ ತೊಂದರೆಯಿಂದಾಗಿ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಬೇಕಾಯಿತು. ಇಷ್ಟವಿಲ್ಲದಿದ್ದರೂ ಹಣದ ಕಾರಣಕ್ಕೆ ಕೆಲವು ದಕ್ಷಿಣ ಭಾರತದ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾಗಿ ಹೇಳಿದ್ದಾರೆ.
ಇದೇ ವೇಳೆ ರಾಧಿಕಾ, ದಕ್ಷಿಣ ಭಾರತ ಸಿನಿಮಾ ರಂಗದ ಶೂಟಿಂಗ್ ಸೆಟ್‌ಗಳಲ್ಲಿ ಎದುರಿಸಿದ ಕಹಿ ಅನುಭವಗಳು ತುಂಬಾ ಭಯಾನಕವಾಗಿದ್ದವು ಎಂದಿದ್ದಾರೆ. ರಾಧಿಕಾರ ಈ ಮಾತುಗಳು ಸೌತ್ ಸಿನಿ ಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದ್ದು, ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ.
ಅಷ್ಟಕ್ಕೂ ರಾಧಿಕಾ ಹೇಳಿದ್ದೇನೆಂದರೆ, ದಕ್ಷಿಣ ಭಾರತದಲ್ಲಿ ಸಿನಿಮಾ ಶೂಟಿಂಗ್ ಮಾಡುವಾಗ ಅದರಲ್ಲೂ ವಿಶೇಷವಾಗಿ ದೂರದ ಸ್ಥಳಗಳಲ್ಲಿ ಅಥವಾ ಗ್ರಾಮೀಣ ಭಾಗಗಳಲ್ಲಿ ಚಿತ್ರೀಕರಣ ಮಾಡುವಾಗ, ಸೆಟ್‌ನಲ್ಲಿ ನಾನೊಬ್ಬಳೇ ಹುಡುಗಿ ಇರುತ್ತಿದ್ದೆ. ನನ್ನ ವೈಯಕ್ತಿಕ ಸಿಬ್ಬಂದಿಯನ್ನು ಸಹ ಒಳಗೆ ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಇದಿಷ್ಟೇ ಅಲ್ಲದೆ, ಶೂಟಿಂಗ್ ಸೆಟ್‌ನಲ್ಲಿ ಜನರು ನನ್ನ ದೇಹದ ಬಗ್ಗೆ ಅಶ್ಲೀಲ ಕಾಮೆಂಟ್ ಹಾಗೂ ಹಾಸ್ಯಗಳನ್ನು ಮಾಡುತ್ತಿದ್ದರು. ಶೂಟಿಂಗ್ ವೇಳೆ ಎದೆಯ ಪ್ಯಾಡಿಂಗ್ ಬಳಸುವಂತೆ ಒತ್ತಡ ಹೇರುತ್ತಿದ್ದರು. ಒಟ್ಟಾರೆ ಶೂಟಿಂಗ್ ಸಮಯದಲ್ಲಿ ತುಂಬಾ ಅನಾನುಕೂಲತೆ ಎದುರಿಸುತ್ತಿದ್ದೆ ಎಂದು ರಾಧಿಕಾರ ಅವರು ಹೇಳಿದ್ದಾರೆ.
ನಾನು ಸಾಮಾನ್ಯವಾಗಿ ತುಂಬಾ ಧೈರ್ಯಶಾಲಿ ಮಹಿಳೆ. ಆದರೆ, ಆ ದಿನಗಳ ಬಗ್ಗೆ ಯೋಚಿಸಿದಾಗ, ನನ್ನ ಹೃದಯ ಇಂದಿಗೂ ಭಯದಿಂದ ವೇಗವಾಗಿ ಬಡಿಯುತ್ತದೆ. ದಕ್ಷಿಣದಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಕೆಲವು ಕಡೆ ಈ ರೀತಿಯ ಅನುಭವ ಆಗಿದೆ ಎಂದು ರಾಧಿಕಾ ಅವರು ಹೇಳಿದ್ದಾರೆ. ಸದ್ಯ ರಾಧಿಕಾ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ, (ಏಜೆನ್ಸೀಸ್).