ಮುಂಬೈ: ಭಾರತೀಯ ಚಿತ್ರರಂಗದ ಗಾನ ಕೋಗಿಲೆ (Asha Bhosle) ಆಶಾ ಭೋಸ್ಲೆ (92) ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಪೋಸ್ಟ್ನಲ್ಲೇನಿದೆ?
ಈ ಕುರಿತು ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ, ದೇಶ ಕಂಡ ಅತ್ಯಂತ ಪ್ರತಿಮಾರೂಪದ ಮತ್ತು ಬಹುಮುಖ ಪ್ರತಿಭೆಯ ಧ್ವನಿಗಳಲ್ಲಿ ಒಬ್ಬರಾದ ಆಶಾ ಭೋಸ್ಲೆಯವರ ನಿಧನದಿಂದ ತೀವ್ರ ದುಃಖವಾಗಿದೆ. ದಶಕಗಳ ಕಾಲದ ಅವರ ಅಸಾಧಾರಣ ಸಂಗೀತ ಪ್ರಯಾಣವು ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿತು ಮತ್ತು ಪ್ರಪಂಚದಾದ್ಯಂತ ಲೆಕ್ಕದಷ್ಟು ಹೃದಯಗಳನ್ನು ಮುಟ್ಟಿದೆ.
ಅವರ ಭಾವಪೂರ್ಣ ಮಧುರ ಸಂಯೋಜನೆಗಳಾಗಿರಬಹುದು ಅಥವಾ ಅವರ ವಿಶಿಷ್ಟ ಶೈಲಿಯ ಹಾಡುಗಳಾಗಿರಬಹುದು ಅವರ ಧ್ವನಿಯು ಕಾಲಾತೀತ ತೇಜಸ್ಸನ್ನು ಹೊಂದಿತ್ತು. ನಾನು ಅವರೊಂದಿಗೆ ನಡೆಸಿದ ಸಂವಹನವನ್ನು ಯಾವಾಗಲೂ ಸ್ಮರಿಸುತ್ತೇನೆ.
ಈ ಮೂಲಕ ಅವರ ಕುಟುಂಬ, ಅಭಿಮಾನಿಗಳು ಮತ್ತು ಸಂಗೀತ ಪ್ರಿಯರಿಗೆ ಸಂತಾಪಗಳನ್ನು ಸೂಚಿಸುತ್ತೇನೆ. ಅವರು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ ಜೊತೆಗೆ ಅವರ ಹಾಡುಗಳು ಜನರ ಜೀವನದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತವೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಸಂಗೀತ ಕ್ಷೇತ್ರದ ಅಪ್ರತಿಮ ಪ್ರತಿಭೆ
1933 ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ಆಶಾ ಭೋಸ್ಲೆ ಅವರು, ತಮ್ಮ ಒಂಬತ್ತನೇ ವಯಸ್ಸಿನಲ್ಲೇ ಸಂಗೀತ ಯಾತ್ರೆ ಆರಂಭಿಸಿದ್ದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ಹಿಂದಿ ಸೇರಿದಂತೆ ಕನ್ನಡ, ಮರಾಠಿ, ಬೆಂಗಾಲಿ ಮುಂತಾದ 20ಕ್ಕೂ ಹೆಚ್ಚು ಭಾಷೆಗಳಲ್ಲಿ 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಮೆಲೋಡಿ ಹಾಡುಗಳಿಂದ ಹಿಡಿದು ವೇಗವಾದ ಪಾಪ್ ಗೀತೆಗಳವರೆಗೆ ಎಲ್ಲವನ್ನೂ ಲೀಲಾಜಾಲವಾಗಿ ಹಾಡಬಲ್ಲ ಕಲೆ ಅವರಿಗೆ ಸಿದ್ದಿಸಿತ್ತು.
ಪ್ರಶಸ್ತಿ ಮತ್ತು ಗೌರವಗಳು
ಸಂಗೀತ ಲೋಕಕ್ಕೆ ಅವರು ನೀಡಿದ ಅಪಾರ ಕೊಡುಗೆಗಳನ್ನು ಪರಿಗಣಿಸಿ ಭಾರತ ಸರ್ಕಾರವು ಅವರಿಗೆ ಪದ್ಮವಿಭೂಷಣ ಮತ್ತು ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ.
ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ
ವರದಿಗಳ ಪ್ರಕಾರ, ಗಾಯಕಿ ಆಶಾ ಭೋಂಸ್ಲೆ ಹೃದಯದ ಸೋಂಕಿನಿಂದ ಬಳಲುತ್ತಿರುವ ಹಿನ್ನಲೆ ನಿನ್ನೆ (ಏ.11) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯ ಡಾ. ಪ್ರತೀತ್ ಸಮದಾನಿ ಅವರು ತಿಳಿಸಿದ್ದರು (ಏಜೆನ್ಸೀಸ್).