Preity Zinta  
ಬಾಲಿವುಡ್

34 ಹೆಣ್ಣುಮಕ್ಕಳಿಗೆ 'ತಾಯಿ'ಯಾದ ಪ್ರೀತಿ ಜಿಂಟಾ! ನಟಿಯ ಈ ಕಾರ್ಯಕ್ಕೆ ಇಡೀ ದೇಶವೇ ಸಲಾಂ.. | Preity Zinta

ಮುಂಬೈ: ಬಾಲಿವುಡ್‌ನ ಚಾರ್ಮಿಂಗ್ ನಟಿ, ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ಒಡತಿ ಪ್ರೀತಿ ಜಿಂಟಾ(PreityZinta ) ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತೆರೆಯ ಮೇಲೆ ತಮ್ಮ ನಟನೆಯಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಪ್ರೀತಿ, ನಿಜ ಜೀವನದಲ್ಲಿ ಮಾಡಿರುವ ಒಂದು ಮಹತ್ಕಾರ್ಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಅದುವೇ 'ಮದರ್ ಮಿರಾಕಲ್' (Mother Miracle) ಅನಾಥಾಶ್ರಮದ 34 ಹೆಣ್ಣುಮಕ್ಕಳನ್ನು ದತ್ತು ಪಡೆದಿರುವುದು!
ಹೌದು, 2009ರಲ್ಲಿ ತಮ್ಮ 34ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರೀತಿ ಜಿಂಟಾ ಒಂದು ಅಚ್ಚರಿಯ ನಿರ್ಧಾರ ಕೈಗೊಂಡಿದ್ದರು. ರಿಷಿಕೇಶದ 'ಮದರ್ ಮಿರಾಕಲ್' ಎಂಬ ಅನಾಥಾಶ್ರಮದಲ್ಲಿದ್ದ 34 ಹೆಣ್ಣುಮಕ್ಕಳನ್ನು ದತ್ತು ಪಡೆಯುವ ಮೂಲಕ ಅವರ ಜೀವನಕ್ಕೆ ಹೊಸ ಬೆಳಕಾದರು. ಅಂದಿನಿಂದ ಇಂದಿನವರೆಗೆ ಆ ಎಲ್ಲಾ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಪ್ರೀತಿ ಅವರೇ ನಿರ್ವಹಿಸುತ್ತಿದ್ದಾರೆ.

ಕೇವಲ ಹಣವಲ್ಲ, ಪ್ರೀತಿಯನ್ನೂ ನೀಡುವ ತಾಯಿ

ಅನೇಕ ಸೆಲೆಬ್ರಿಟಿಗಳು ದಾನ ಮಾಡುತ್ತಾರೆ, ಆದರೆ ಪ್ರೀತಿ ಜಿಂಟಾ ಅವರ ಶೈಲಿಯೇ ಬೇರೆ. ಅವರು ಕೇವಲ ಹಣ ನೀಡಿ ಸುಮ್ಮನಾಗಲಿಲ್ಲ.ಆ ಮಕ್ಕಳ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಆರೋಗ್ಯದ ಸಂಪೂರ್ಣ ವೆಚ್ಚವನ್ನು ಪ್ರೀತಿ ಭರಿಸುತ್ತಿದ್ದಾರೆ.ಅಲ್ಲದೆ, ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ರಿಷಿಕೇಶಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ. ಮಕ್ಕಳು ಬೆಳೆದು ದೊಡ್ಡವರಾಗಿ ಸ್ವಾವಲಂಬಿಗಳಾಗುವವರೆಗೂ ಅವರ ಬೆನ್ನೆಲುಬಾಗಿ ನಿಲ್ಲುವುದಾಗಿ ಅವರು ಭರವಸೆ ನೀಡಿದ್ದಾರೆ.

ಮಾನವೀಯತೆಗೆ ಸಾಕ್ಷಿಯಾದ ನಟಿ

ಪ್ರೀತಿ ಜಿಂಟಾ ಈ ವಿಚಾರವನ್ನು ಎಂದಿಗೂ ಪ್ರಚಾರಕ್ಕಾಗಿ ಬಳಸಿಕೊಂಡಿಲ್ಲ. "ನನಗೆ ದೇವರು ಎಲ್ಲವನ್ನೂ ನೀಡಿದ್ದಾನೆ, ಸಮಾಜಕ್ಕೆ ಏನಾದರೂ ಮರಳಿ ನೀಡಬೇಕೆಂಬ ಹಂಬಲ ನನ್ನದು. ಈ ಮಕ್ಕಳು ನನ್ನ ಸ್ವಂತ ಮಕ್ಕಳಿದ್ದಂತೆ," ಎಂದು ಅವರು ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ. ಪ್ರಸ್ತುತ ಅವರು ಅಮೆರಿಕದಲ್ಲಿ ನೆಲೆಸಿದ್ದರೂ, ಭಾರತದ ಈ ಹೆಣ್ಣುಮಕ್ಕಳ ಸಂಪರ್ಕವನ್ನು ಮಾತ್ರ ಕಡಿದುಕೊಂಡಿಲ್ಲ.
ಬಾಲಿವುಡ್‌ನ ಯಶಸ್ವಿ ನಟಿಯಾಗಿ, ಉದ್ಯಮಿಯಾಗಿ ಮಿಂಚುತ್ತಿರುವ ಪ್ರೀತಿ ಜಿಂಟಾ ಅವರ ಈ 'ರಿಯಲ್ ಲೈಫ್' ಹೀರೋಯಿಸಂ ಎಲ್ಲರಿಗೂ ಮಾದರಿಯಾಗಿದೆ. ಇಂದು ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ,(ಏಜೆನ್ಸೀಸ್​).