ಬೆಂಗಳೂರು: ಜನಪ್ರಿಯ ವೆಬ್‌ಸೀರಿಸ್ Panchayat ಮೂಲಕ ಗುರುತಿಸಿಕೊಂಡಿರುವ ನಟ ವಿನೋದ್ ಸೂರ್ಯವಂಶಿ (Vinod Suryavanshi) ತಮ್ಮ ಜೀವನದ ಕಹಿ ಅನುಭವಗಳನ್ನು ಬಹಿರಂಗಪಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಹೌದು, ಕರ್ನಾಟಕದ ತಮ್ಮ ಮೂಲ ಗ್ರಾಮದಲ್ಲಿ ಇಂದಿಗೂ ಜಾತಿ ಭೇದಭಾವ ಮುಂದುವರಿದಿರುವುದಾಗಿ ಹೇಳಿದ್ದಾರೆ. ಆದರೆ, ಅವರದು ಕರ್ನಾಟಕದ ಯಾವ ಊರು ಎಂದು ಅವರು ಬಹಿರಂಗಪಡಿಸಿಲ್ಲ.
ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ ಅವರು, “ನಮ್ಮ ಊರಿನಲ್ಲಿ ಇನ್ನೂ ಜಾತಿ ವ್ಯವಸ್ಥೆ ಜೀವಂತವಾಗಿದೆ. ಮೇಲ್ಜಾತಿ ಮತ್ತು ಕೆಳಜಾತಿ ಜನರಿಗೆ ಪ್ರತ್ಯೇಕ ಪ್ರದೇಶಗಳಿವೆ. ನಮ್ಮ ಸಮುದಾಯದ ಜನರು ಗ್ರಾಮದಿಂದ ಬೇರ್ಪಟ್ಟಂತೆ ವಾಸಿಸುತ್ತಾರೆ” ಎಂದು ಹೇಳಿದ್ದಾರೆ.
ಅವರ ಕುಟುಂಬಕ್ಕೆ ಇಂದಿಗೂ ಗ್ರಾಮದಲ್ಲಿರುವ ಕೆಲವು ದೇವಸ್ಥಾನಗಳಲ್ಲಿ ಪ್ರವೇಶಕ್ಕೆ ಅವಕಾಶ ಇಲ್ಲ ಎಂಬುದು. “ಇನ್ನೂ ಒಂದು ದೇವಸ್ಥಾನ ಇದೆ, ಅಲ್ಲಿ ನಾವು ಹೋಗಲು ಅವಕಾಶವಿಲ್ಲ” ಎಂದು ಅವರು ಹೇಳಿದ್ದಾರೆ.
ಬಾಲ್ಯದ ಕಹಿ ಅನುಭವಗಳು
Vinod Suryavanshi ತಮ್ಮ ಬಾಲ್ಯದ ದಿನಗಳನ್ನು ನೆನೆದು, ಅನೇಕ ನೋವಿನ ಘಟನೆಗಳನ್ನು ಹಂಚಿಕೊಂಡಿದ್ದಾರೆ. 12ನೇ ವಯಸ್ಸಿನಲ್ಲಿ ತಂದೆಯೊಂದಿಗೆ ಹೋಟೆಲ್‌ಗೆ ಹೋದಾಗ, ಊಟ ಮಾಡಿದ ನಂತರ ತಮ್ಮ ತಟ್ಟೆಗಳನ್ನು ತಾವೇ ತೊಳೆಯಬೇಕಾಗಿತ್ತು ಎಂದು ಅವರು ಹೇಳಿದ್ದಾರೆ. ಇದು ಸಮಾಜದಲ್ಲಿನ ಅಸಮಾನತೆಯ ಜೀವಂತ ಉದಾಹರಣೆ ಎಂದು ಅವರು ವಿವರಿಸಿದ್ದಾರೆ.
ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಕೂಡ ಸಂಕಷ್ಟಕರವಾಗಿತ್ತು. ತಾಯಿ ಮನೆ ಕೆಲಸ ಮಾಡುತ್ತಿದ್ದರೆ, ತಂದೆ ಮಿಸ್ತ್ರಿಯಾಗಿದ್ದರು. ಕೆಲಸ ಸಿಗದ ದಿನಗಳಲ್ಲಿ ಮನೆ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗುತ್ತಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಹೋರಾಟದಿಂದ ಸಾಧನೆವರೆಗೆ
ಬಡತನ ಮತ್ತು ಸಾಮಾಜಿಕ ಅಡೆತಡೆಗಳ ನಡುವೆಯೇ Vinod Suryavanshi ತಮ್ಮ ಕನಸನ್ನು ಬೆನ್ನತ್ತಿದರು. ಸಿಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದ ಅವರು, ನಂತರ ಸಣ್ಣ ಪಾತ್ರಗಳಿಂದ ತಮ್ಮ ಸಿನಿ ಪ್ರಯಾಣ ಆರಂಭಿಸಿದರು. ಅವರು ತಮ್ಮ ಮೈಬಣ್ಣದ ಕಾರಣಕ್ಕೂ ಹಲವು ಬಾರಿ ನಿರಾಕರಣೆ ಎದುರಿಸಿದ್ದಾಗಿ ಹೇಳಿದ್ದಾರೆ. “ಹೆಚ್ಚು ಬಾರಿ ನನ್ನ ಲುಕ್‌ಗಾಗಿ ನನಗೆ ಅವಕಾಶ ಕೊಡಲಿಲ್ಲ” ಎಂಬುದು ಅವರ ನೋವು. ಆದರೆ, ಎಲ್ಲ ಅಡೆತಡೆಗಳನ್ನೂ ಮೀರಿ ಅವರು ಇಂದು ಜನಪ್ರಿಯ ವೆಬ್‌ಸೀರಿಸ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ,(ಏಜೆನ್ಸೀಸ್).