- 'ಧುರಂಧರ್' ಚಿತ್ರವನ್ನು ಬ್ಯಾನ್ ಮಾಡಿದ ಪಾಕ್ ಹಾಗೂ ಗಲ್ಫ್ ರಾಷ್ಟ್ರಗಳು
- ಕಠಿಣ ನಿಷೇಧ ಹೇರಿದ್ದರೂ ಕದ್ದುಮುಚ್ಚಿ ಪೈರಸಿಯಲ್ಲಿ ವೀಕ್ಷಣೆ
- ಪೈರಸಿಯಲ್ಲಿ ಧುರಂದರ್ ವೀಕ್ಷಿಸಿ, ಹಿಂದಿನ ದಾಖಲೆಗಳು ಮುರಿದ ಪಾಕಿಗಳು
ನವದೆಹಲಿ: ದೇಶಿಯ ಹಾಗೂ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಬಾಲಿವುಡ್ನ ಆ್ಯಕ್ಷನ್-ಥ್ರಿಲ್ಲರ್ ಕಥಾಹಂದರದ 'ಧುರಂಧರ್' ಚಿತ್ರಕ್ಕೆ ಸದ್ಯ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ಮತ್ತು ಮೆಚ್ಚುಗೆಗಳು ಹರಿದುಬರುತ್ತಿವೆ. ರಣವೀರ್ ಸಿಂಗ್ ನಟಿಸಿರುವ ಈ ಸಿನಿಮಾ ಬಹುಬೇಗನೇ ಯಶಸ್ಸು ಕಂಡಿದ್ದು, ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುವತ್ತ ಸಾಗಿದೆ.
ಬಾಕ್ಸ್ ಆಫೀಸ್ ಕಮಾಲ್
ತೆರೆಕಂಡ ಒಂದು ವಾರದೊಳಗೆ 180 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿರುವ ಈ ಚಿತ್ರ, ಕೇವಲ 17 ದಿನಕ್ಕೆ 585 ಕೋಟಿ ರೂ. ಗಳಿಸಿದೆ. ಇದು ದೇಶಿಯ ಕಲೆಕ್ಷನ್ ಆಗಿದ್ದರೆ, ಚಿತ್ರವು ವಿದೇಶಿ ನೆಲದಲ್ಲಿ 114 ಕೋಟಿ ರೂ. ಗಳಿಕೆ ಕಂಡಿದೆ. ಅಲ್ಲಿಗೆ, ಸಿನಿಮಾದ ಒಟ್ಟಾರೆ ಅಂದರೆ ಜಾಗತಿಕ ಗಳಿಕೆ ಮೊತ್ತ 666.75 ಕೋಟಿ ರೂ. ಆಗಿದೆ. ಈ ಮೊದಲು ಪಾಕಿಸ್ತಾನದಿಂದ 'ಧುರಂದರ್'ಗೆ ಭಾರೀ ವಿರೋಧ ಕೇಳಿಬಂದಿತು. ತಮ್ಮ ವಿರುದ್ಧ ಹಲವು ದೃಶ್ಯಗಳು ಚಿತ್ರದಲ್ಲಿ ಸೇರಿಸಿದ ಹಿನ್ನೆಲೆ ಪಾಕ್ ಸೇರಿ ಗಲ್ಫ್ ರಾಷ್ಟ್ರಗಳು ರಣವೀರ್ ಚಿತ್ರವನ್ನು ಬ್ಯಾನ್ ಮಾಡಿತು. ಆದರೀಗ, ಅದೇ ದೊಡ್ಡ ಪೈರಸಿಗೆ ಕಾರಣವಾಗಿದೆ.
'ಧುರಂದರ್' ಚಿತ್ರ ಒಂದೇ ಕಳೆದ 20 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಪೈರಸಿ ಆದ ಭಾರತೀಯ ಸಿನಿಮಾ ಎಂದು ವರದಿಯಾಗಿದೆ. ಸಿನಿಮಾದ ಮೇಲೆ ಪಾಕಿಸ್ತಾನ ಸರ್ಕಾರ ಸಂಪೂರ್ಣ ನಿಷೇಧ ಹೇರಿದ್ದರೂ, ಅಲ್ಲಿನ ಪ್ರೇಕ್ಷಕರು ಚಿತ್ರವನ್ನು ಕದ್ದುಮುಚ್ಚಿ ನೋಡುವ ಹುಚ್ಚಿಗೆ ಮುಗಿಬಿದ್ದಿದ್ದಾರೆ ಎನ್ನಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ರಿಲೀಸ್ ಆದ ಕೇವಲ ಎರಡು ವಾರಗಳಲ್ಲಿ ಪಾಕ್ ನೆಲದಲ್ಲಿ 1.8 ಮಿಲಿಯನ್ (ಅಂದರೆ 18 ಲಕ್ಷ) ಡೌನ್‌ಲೋಡ್‌ಗಳು ದಾಖಲಾಗಿವೆ.
ಟೊರೆಂಟ್, ಟೆಲಿಗ್ರಾಮ್....
ಕಳೆದ ಎರಡು ದಶಕಗಳಲ್ಲಿ ಯಾವುದೇ ಬಾಲಿವುಡ್ ಚಿತ್ರ ಈ ಮಟ್ಟಿಗೆ ಪೈರಸಿಯಲ್ಲಿ ಡೌನ್ಲೋಡ್ ಆಗಿರಲಿಲ್ಲವಂತೆ. ಶಾರುಖ್ ಖಾನ್ ಅವರ 'ರಯೀಸ್' ಈ ಹಿಂದೆ ಪಾಕ್ನಲ್ಲಿ ಭಾರಿ ಪೈರೇಟೆಡ್ ಆಗಿತ್ತು. ಅದಾದ ಬಳಿಕ ಅಕ್ಷಯ್ ಕುಮಾರ್-ರಜನಿಕಾಂತ್ ಕಾಂಬೊದಲ್ಲಿ ಮೂಡಿಬಂದ ಸಿನಿಮಾ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆದುಕೊಂಡಿತ್ತು. ಅದಾದ ಬಳಿಕ, ಈಗ ಧುರಂದರ್ ಆ ಸಾಲಿನಲ್ಲಿ ಮುಂಚೂಣಿಲ್ಲಿದೆ. ಬ್ಯಾನ್ ಮಾಡಿದ್ದರೂ ಸಹ ಭಾರತೀಯ ಸಿನಿಮಾ ನೋಡುವ ತವಕ ಹೊರಹಾಕಿರುವ ಪಾಕಿಗಳು, ಟೊರೆಂಟ್ ಮತ್ತು ಟೆಲಿಗ್ರಾಮ್‌ನಂತಹ ಜಾಲತಾಣಗಳಲ್ಲಿ ಕದ್ದುಮುಚ್ಚಿ ಸಿನಿಮಾ ವೀಕ್ಷಿಸಿದ್ದಾರೆ,(ಏಜೆನ್ಸೀಸ್).