ತನ್ನ ಹಾಡು ಹವಾ-ಹವಾವನ್ನು ಬಳಸಿಕೊಂಡಿದ್ದಕ್ಕೆ ನನಗೆ ಹಣ ನೀಡಿದ್ದಾರೆ ಎಂದ ಪಾಕ್ ಗಾಯಕ ಹಸನ್ ಜಹಾಂಗೀರ್
- ಮಾರ್ಚ್ ರಂದು ಬಿಡುಗಡೆಯಾದ ಧುರಂಧರ್ 2 ಸಿನಿಮಾ
- ತನ್ನ ಹಾಡು ಹವಾ-ಹವಾವನ್ನು ಬಳಸಿಕೊಂಡಿದ್ದಕ್ಕೆ ನನಗೆ ಹಣ ನೀಡಿದ್ದಾರೆ ಎಂದ ಪಾಕ್ ಗಾಯಕ ಹಸನ್ ಜಹಾಂಗೀರ್
- ಈ ಹಾಡನ್ನು ನಾನು 1986 ರಲ್ಲಿ ಹಾಡಿದ್ದೆ ಎಂದ ಗಾಯಕ
- ಸಿನಿಮಾದಲ್ಲಿ ಸಂಜಯ್ ದತ್ ಎಂಟ್ರಿಗೆ ಬಳಕೆಯಾಗಿದ್ದ ಹಾಡು
ಪಾಕಿಸ್ತಾನ: ಮಾರ್ಚ್ 19 ಭಾರತೀಯ ಸಿನಿ ಪ್ರೇಕ್ಷಕರು ತುದಿಗಾಲಿನಿಂದ ಕಾಯುತ್ತಿದ್ದ ದಿನ. ಕಾರಣ ಧುರಂಧರ್ 2 (Dhurandhar 2) ಸಿನಿಮಾ ಇಂದು(ಮಾರ್ಚ್ 19) ಸಿನಿಮಾ ಮಂದಿರಗಳಲ್ಲಿ ತೆರೆಕಾಣಲಿದೆ. ಇದರ ನಡುವೆ ಪಾಕಿಸ್ತಾನದ ಗಾಯಕ ನೀಡಿರುವ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ನನಗೆ ಸುಮಾರು 46 ಲಕ್ಷ ಹಣ ನೀಡಿದ್ದಾರೆ!
ಪಾಕಿಸ್ತಾನದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹಾಜರಾಗಿದ್ದ ಗಾಯಕ, ಹಸನ್ ಜಹಾಂಗೀರ್ ನಾನು ಹಾಡಿದ ಹಾಡ (ಹವಾ-ಹವಾ) ನ್ನು ಅವರ ಸಿನಿಮಾದಲ್ಲಿ ಬಳಸಿಕೊಳ್ಳಲು ಧುರಂಧರ್ ತಂಡ ಸುಮಾರು ಐವತ್ತು ಸಾವಿರ ಡಾಲರ್ಸ್ (ಸುಮಾರು 46 ಲಕ್ಷ ರೂಪಾಯಿ) ಗಳನ್ನು ನೀಡಿ, ಹಾಡಿನ ಹಕ್ಕುಸ್ವಾಮ್ಯವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ನಾನು ಈ ಹವಾ- ಹವಾ ಹಾಡನ್ನು ಸುಮಾರು ನಲವತ್ತು ವರ್ಷಗಳ ಹಿಂದೆ, ಅಂದರೆ 1986 ರಲ್ಲಿ ಹಾಡಿ 1897 ರಲ್ಲಿ ಬಿಡುಗಡೆ ಮಾಡಿದ್ದೆ. ಮೊದಲೆಲ್ಲಾ ಈ ಕಾಪಿರೈಟ್ಸ್ ಎಲ್ಲಾ ಇರಲಿಲ್ಲ. ಆದರೆ ಈಗ ಈ ಹಾಡನ್ನು ಬಳಸುವ ಮೊದಲು ನನ್ನ ಅನುಮತಿ ಕೇಳುತ್ತಾರೆ ಹಾಗೆಯೇ ಹಣವನ್ನು ನೀಡುತ್ತಾರೆ ಎಂದು ಪಾಕ್ ಗಾಯಕ ಹಸನ್ ಜಹಾಂಗೀರ್ ಹೇಳಿದ್ದಾರೆ.
ಸಂಜಯ್ ದತ್ ಎಂಟ್ರಿಗೆ ಹವಾ-ಹವಾ ಬಳಕೆ
ಹಸನ್ ಜಹಾಂಗೀರ್ ಅವರು ಹಾಡಿರುವ ಈ ಹವಾ-ಹವಾ ಹಾಡನ್ನು ಧುರಂಧರ್ ಸಿನಿಮಾದ ಮೊದಲ ಭಾಗದಲ್ಲಿ, ಎಸ್ಪಿ ಚೌಧರಿ ಅಸ್ಲಂ ಪಾತ್ರದಲ್ಲಿ ನಟಿಸಿರುವ ಸಂಜಯ್ ದತ್ ಅವರು ಕಾರಿನಲ್ಲಿ ಎಂಟ್ರಿ ಕೊಡುವಾಗ ಬಳಸಲಾಗಿದೆ. ಈ ಹಾಡನ್ನು ಆನಂದಿಸುತ್ತಾ ಸಂಜಯ್ ದತ್ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಗುಂಡಿಕ್ಕಿ ಕೊಲ್ಲುವುದನ್ನು ಸಿನಿಮಾದಲ್ಲಿ ನೋಡಬಹುದಾಗಿದೆ.
ಹವಾ-ಹವಾ ಹಾಡಿನ ಇತಿಹಾಸ
ಹವಾ ಹವಾ ಏ ಹವಾ ಖುಷಬೂ ಲೂಟಾದೆ ಈ ಹಾಡು ಮೂಲತಃ ಪಾಕಿಸ್ತಾನಿ ಗಾಯಕ ಹಸನ್ ಜಹಾಂಗೀರ್ ಅವರ ಕಂಠಸಿರಿಯಲ್ಲಿ ಮೂಡಿಬಂದ ಅದ್ಭುತ ಗೀತೆಯಾಗಿದೆ. 1980ರ ದಶಕದ ಉತ್ತರಾರ್ಧದಲ್ಲಿ ಬಿಡುಗಡೆಯಾದ ಈ ಹಾಡು ಇಡೀ ಏಷ್ಯಾ ಖಂಡದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಆದರೆ ಈ ಹಾಡಿನ ಮೂಲ 1970 ರ ಸುಮಾರಿಗೆ ಇರಾನಿನಲ್ಲಿ ಬಿಡುಗಡೆಯಾದ 'ಹವಾರ್ ಹವಾರ್' ಎಂಬ ಪರ್ಶಿಯನ್ ಜಾನಪದ ಗೀತೆಯಿಂದ ಪ್ರೇರಿತವಾದ ಹಾಡು ಎನ್ನಲಾಗುತ್ತದೆ.
ಮುಂದೆ 2017ರಲ್ಲಿ ಬಿಡುಗಡೆಯಾದ ಅರ್ಜುನ್ ಕಪೂರ್ ನಟನೆಯ ಮುಬಾರಕನ್ (Mubarakan) ಚಿತ್ರಕ್ಕಾಗಿ ಈ ಹಾಡನ್ನು ಮರುಸೃಷ್ಟಿ (Remake) ಮಾಡಲಾಯಿತು. ಮಿಕಾ ಸಿಂಗ್ ಮತ್ತು ಪ್ರಕೃತಿ ಕಕ್ಕರ್ ಹಾಡಿರುವ ಈ ಹೊಸ ಆವೃತ್ತಿಯು ಇಂದಿನ ಯುವಜನತೆಗೆ ತಕ್ಕಂತೆ ಮಾರ್ಪಾಡು ಮಾಡಿ ಹಾಡಿದ್ದಾರೆ,(ಏಜನ್ಸೀಸ್).