ಬಾಲಿವುಡ್​ ನಟಿ ಆಲಿಯಾ ಭಟ್​  
ಬಾಲಿವುಡ್

ಮತ್ತೊಮ್ಮೆ ಎಲ್ಲರೆದುರು ಪಾಕ್​ ಮಾನ ಹರಾಜು! ಆಲಿಯಾ ಭಟ್​ ಹೆಸರಿಗೆ ಮಸಿ ಬಳಿಯೋ ಕೆಲಸಕ್ಕೆ ನೆಟ್ಟಿಗರ ಛೀಮಾರಿ

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಮತ್ತೊಮ್ಮೆ ಸುದ್ದಿಯಲ್ಲಿ
  • ಪಾಕಿಸ್ತಾನ ಬ್ರ್ಯಾಂಡ್​ಗೆ ನಟಿಯಿಂದ ಆ್ಯಡ್​?
  • ವೈರಲ್​ ಫೋಟೋಗಳು ಕಂಡು ನೆಟ್ಟಿಗರು ಗರಂ
ಮುಂಬೈ: ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ, ಈ ಬಾರಿ ಯಾವುದೇ ಹೊಸ ಸಿನಿಮಾದ ಘೋಷಣೆ ಅಥವಾ ಪತಿ ರಣಬೀರ್ ಸಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಅಲ್ಲ. ಬದಲಿಗೆ ವೈರಿ ರಾಷ್ಟ್ರ ಪಾಕಿಸ್ತಾನದ ಬ್ರ್ಯಾಂಡ್​ವೊಂದಕ್ಕೆ ಮಾಡಿದ ಪ್ರಚಾರ ಕುರಿತಾಗಿ! ಈ ವಿಷಯ ಹೊರಬೀಳುತ್ತಿದ್ದಂತೆ ಅನೇಕರು ಆಳ-ಆಗಲ ತಿಳಿಯದೆ, ಏಕಾಏಕಿ ನಟಿಯ ವಿರುದ್ಧ ಛೀಮಾರಿ ಹಾಕಲು ಮುಂದಾದರು. ಆದರೆ, ಪಾಕ್​ ನರಿಬುದ್ಧಿಯನ್ನು ಪತ್ತೆಹಚ್ಚಿದ ಕೂಡಲೇ ಬೆರಗಾಗಿದ್ದಾರೆ.
ಆರಂಭದಲ್ಲಿ ಪಾಕಿಸ್ತಾನಿ ವಸ್ತ್ರದ ಬ್ರ್ಯಾಂಡ್​ ಪ್ರಚಾರದೊಂದಿಗೆ ಆಲಿಯಾ ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯಿತು. ಪಾಕಿಸ್ತಾನದ ಡ್ರೆಸ್ ಬ್ರ್ಯಾಂಡ್ ಅನ್ನು ಆಲಿಯಾ ಪ್ರಚಾರ ಮಾಡುತ್ತಿರುವ ಕೆಲವು ಫೋಟೋಗಳು ಹರಿದಾಡಿತು. ಇದನ್ನು ಸರಿಯಾಗಿ ಹಾಗೂ ಸೂಕ್ಷ್ಮವಾಗಿ ಗಮನಿಸಿದ ಒಂದಷ್ಟು ಅಭಿಮಾನಿಗಳು, ಬಟ್ಟೆಗಳ ಮೇಲೆ ಪಾಕಿಸ್ತಾನದ ಲೆಬೆಲ್​ಗಳಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಇಂಥಾ ನಾಚಿಕೆಗೇಡಿನ ಕೆಲಸಕ್ಕೆ ಮುಂದಾದ ಪಾಕ್​ ನರಿಬುದ್ಧಿ ಕಂಡು ಒಂದು ನಿಮಿಷ ದಂಗಾಗಿದ್ದಾರೆ.
ಅಷ್ಟಕ್ಕೂ ಆಲಿಯಾ ಪಾಕ್​ ಬ್ರ್ಯಾಂಡೆಡ್​ ಉಡುಗೆಯನ್ನು ಧರಿಸಿದ್ದು ನಿಜವೇ? ಅವರಿಂದ ಪ್ರಚಾರ ಆಗಿರುವುದು ಸತ್ಯವೇ? ಎಂಬುದು ಇದೀಗ ಸಂಪೂರ್ಣವಾಗಿ ಬಯಲಾಗಿದೆ. ಮೇಲ್ನೋಟಕ್ಕೆ ಆಲಿಯಾ ಪಾಕಿಸ್ತಾನಿ ಬ್ರ್ಯಾಂಡ್​ ವಸ್ತ್ರವನ್ನು ಧರಿಸಿದ್ದಾರೆ. ಆದರೆ, ಅದು ಬೇರೊಂದು ಸಂಸ್ಥೆಗೆ ಹೊರತು ಪಾಕ್​ದಲ್ಲ. 'ವಾಜಯೇಶಾ ಅಫೀಶಿಯಲ್' ಎಂಬ ಪಾಕಿಸ್ತಾನಿ ಬ್ರ್ಯಾಂಡ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಆಲಿಯಾ ಭಟ್ ಅವರ ಫೋಟೋಗಳನ್ನು ಅನಧಿಕೃತವಾಗಿ ಬಳಸಿಕೊಂಡಿರುವುದು ಸ್ಪಷ್ಟ.
ಇದರಲ್ಲಿ ಆಲಿಯಾ ಭಟ್​, ವಿವಿಧ ಬಣ್ಣಗಳ ತರಹೇವಾರಿ ಉಡುಗೆಗಳಲ್ಲಿ ಮಿಂಚುತ್ತಿರುವುದು ಕಂಡುಬಂದಿದೆ. ಆದಾಗ್ಯೂ, ಈ ಫೋಟೋಗಳನ್ನು ಜೂಮ್​ ಮಾಡಿ, ಸೂಕ್ಷ್ಮವಾಗಿ ನೋಡಿದಾಗ ಸತ್ಯ ಬಯಲಾಗಿದೆ. ಇಲ್ಲಿ, ನಟಿ ಖುದ್ದಾಗಿ ಫೋಟೋ ಶೂಟ್ ಮಾಡಿಸಿಕೊಂಡಿಲ್ಲ. ಬದಲಿಗೆ ಕೃತಕ ಬುದ್ಧಿಮತ್ತೆ (AI) ಮತ್ತು ಫೋಟೋಶಾಪ್ ಸಹಾಯದಿಂದ ತಮಗೆ ಬೇಕಾದಂತೆ ಎಡಿಟಿಂಗ್ ಮಾಡಿ ಹಾಕಲಾದ ಫೇಕ್​ ಫೋಟೋಗಳು ಇದಾಗಿವೆ. ಈ ಮೂಲಕ ಪಾಕೀಗಳು, ಮತ್ತೊಮ್ಮೆ ತಾವು ಲಜ್ಜೆಗೆಟ್ಟವರು ಎಂದು ಸಾಬೀತುಪಡಿಸಿದ್ದಾರೆ.
2024ರಲ್ಲಿ ಲೋರಿಯಲ್ ಪ್ಯಾರಿಸ್ ರ‍್ಯಾಂಪ್ ವಾಕ್‌ನಲ್ಲಿ ಆಲಿಯಾ ಧರಿಸಿದ್ದ ಉಡುಗೆಯ ಫೋಟೋಗಳನ್ನು ನಕಲು ಮಾಡಿ, ತಮ್ಮ ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ ಆಗಿದ್ದಾರೆ ಎನ್ನುವಂತೆ ಬಿಂಬಿಸಿರುವ ಕಂಪನಿಯ ಚೀಪ್​ ಟ್ರಿಕ್​ಗಳಿಗೆ ಸದ್ಯ ನೆಟ್ಟಿಗರು ಮತ್ತು ನಟಿಯ ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟಾರ್ ನಾಯಕಿಯ ಕ್ರೇಜ್ ಬಳಸಿ, ಅವರ ಹೆಸರಿಗೆ ಮಸಿ ಬಳಿಯುವಂತ ಕೆಲಸಕ್ಕಿಳಿದ ಬ್ರ್ಯಾಂಡ್ ಇಮೇಜ್ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಈ ಬಗ್ಗೆ ಆಲಿಯಾ ಭಟ್ ಅವರ ತಂಡ ಏನು ನಿರ್ಧಾರ ತೆಗೆದುಕೊಳ್ಳಲಿದೆ? ಕಾನೂನು ಕ್ರಮ ಜರುಗಿಸಲಿದೆಯೇ? ಎಂಬುದರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭಿಸಿಲ್ಲ,(ಏಜೆನ್ಸೀಸ್).