ಧುರಂಧರ್​ 2 
ಬಾಲಿವುಡ್

'ಧುರಂಧರ್'​ ಕಲೆಕ್ಷನ್​ನಲ್ಲಿ ನಮಗೂ ಪಾಲಿದೆ! ನಿರ್ದೇಶಕ ಆದಿತ್ಯ ಧರ್​ಗೆ ಪಾಕಿಸ್ತಾನಿಗಳಿಂದ ವಿಚಿತ್ರ ಬೇಡಿಕೆ | Dhurandhar 2

ಪ್ರಮುಖ ಮುಖ್ಯಾಂಶಗಳು

  • 'ಧುರಂಧರ್ 2' ಚಿತ್ರದ ಲಾಭದಲ್ಲಿ ನಮಗೂ ಪಾಲು ಕೊಡಿ
  • ಪಾಕಿಸ್ತಾನದ ಲ್ಯಾರಿ ಜನರಿಂದ ನಿರ್ದೇಶಕ ಆದಿತ್ಯ ಧರ್​ಗೆ ವಿಚಿತ್ರ ಬೇಡಿಕೆ
ಮುಂಬೈ: ಮಾ.19ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡ ರಣವೀರ್ ಸಿಂಗ್ ನಟನೆಯ ಹಾಗೂ ಆದಿತ್ಯ ಧರ್ ನಿರ್ದೇಶನದ 'ಧುರಂಧರ್ 2' (Dhurandhar 2) ಸಿನಿಮಾ ಸದ್ಯ ಬಾಕ್ಸ್ ಆಫೀಸ್​ನಲ್ಲಿ ದಾಖಲೆಯ ಗಳಿಕೆ ಕಂಡಿದ್ದು, ಬಾಲಿವುಡ್​ನಿಂದ ಹಿಡಿದು ಸೌತ್​ ಸ್ಟಾರ್​ಗಳ ಮೆಚ್ಚುಗೆ, ಪ್ರಶಂಸೆಗೆ ಪಾತ್ರವಾಗಿದೆ. ಈಗಾಗಲೇ ಹಲವು ದಾಖಲೆಗಳನ್ನು ಉಡೀಸ್ ಮಾಡಿ, ಮುನ್ನುಗ್ಗುತ್ತಿರುವ ಚಿತ್ರವು ವಿಶ್ವಾದ್ಯಂತ ಕೇವಲ ಒಂದು ವಾರದಲ್ಲೇ 1000 ಕೋಟಿ ರೂ. ಕ್ಲಬ್​ ಸೇರಿದೆ.
ಪ್ರಸ್ತುತ, ಜಾಗತಿಕ ಹಾಗೂ ದೇಶಿಯ ಬಾಕ್ಸ್ ಆಫೀಸ್​ನಲ್ಲಿ ದಾಖಲೆಯ ಅಬ್ಬರ ಮುಂದುವರಿಸಿರುವ 'ಧುರಂಧರ್​ 2', ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ. ಈ ಸಿನಿಮಾದ ಗಳಿಕೆ ನಿರ್ಮಾಪಕರಿಗೆ ನಿರೀಕ್ಷೆಗೂ ಮೀರಿದ ಆದಾಯವನ್ನೇ ತಂದುಕೊಟ್ಟಿದ್ದು, ಚಿತ್ರದ ನಿರ್ದೇಶಕರಿಗೆ ಇನ್ನೂ ಹೆಚ್ಚು ಇಂತಹ ಚಿತ್ರಗಳನ್ನು ಮಾಡುವಂತೆ ಹುರಿದುಂಬಿಸಿದೆ. ಅಸಲಿಗೆ, ಧುರಂಧರ್​ ಎರಡೂ ಭಾಗಗಳಲ್ಲಿ ಪಾಕಿಸ್ತಾನಿ ಉಗ್ರರ ಪಾಪದ ಕೃತ್ಯಗಳನ್ನು ಬಿಚ್ಚಿಡಲಾಗಿದ್ದು, ಅಲ್ಲಿನ ಕೆಲವು ಸ್ಥಳಗಳನ್ನು ತೋರಿಸಲಾಗಿದೆ. ಸದ್ಯ ಇದೇ ಈಗ ಪಾಕೀಗಳ ವಿಚಿತ್ರ ಬೇಡಿಕೆಗೆ ಕಾರಣವಾಗಿದೆ.
'ಇಂಡಿಯಾ ಟುಡೇ' ವರದಿ ಪ್ರಕಾರ, ಧುರಂಧರ್​ ಚಿತ್ರವು ಪಾಕಿಸ್ತಾನದ ಲ್ಯಾರಿ ಪ್ರದೇಶಕ್ಕೆ ಸಂಬಂಧಿಸಿದೆ. ಈ ಪ್ರದೇಶದಲ್ಲಿನ ಗ್ಯಾಂಗ್ ವಾರ್‌ಗಳನ್ನು ಚಿತ್ರದಲ್ಲಿ ಬಿತ್ತರಿಸಲಾಗಿದೆ. ಆದಾಗ್ಯೂ, ಈಗ ಧರ್ ನಿರ್ದೇಶನದ ಚಿತ್ರವು ಭಾರಿ ಯಶಸ್ಸನ್ನು ಕಂಡಿರುವುದರಿಂದ, ಲ್ಯಾರಿ ಜನರು ಚಿತ್ರದ ಕಲೆಕ್ಷನ್‌ನಲ್ಲಿ ತಮಗೂ ಪಾಲು ನೀಡಬೇಕೆಂದು ಆಗ್ರಹಿಸಿದ್ದಾರೆ. ಕೆಲವರು ಚಿತ್ರದ ಕಲೆಕ್ಷನ್‌ನ ಶೇ.80ರಷ್ಟು ಲ್ಯಾರಿ ರಸ್ತೆ ಕಾಮಗಾರಿ ಸೇರಿದಂತೆ ಮೂಲ ಸೌಕರ್ಯದ ಅಭಿವೃದ್ಧಿಗೆ ಮೀಸಲಿಡಬೇಕೆಂದು ಕೇಳಿದ್ದಾರೆ.
ಈ ಸಿನಿಮಾದಲ್ಲಿ ತಮ್ಮ ಜಾಗದ ಹೆಸರನ್ನು ಬಳಸಿದ್ದಕ್ಕಾಗಿ ತಮಗೆ ಆರ್ಥಿಕವಾಗಿ ಪರಿಹಾರ ಕೊಡಬೇಕೆಂದು ನಾವು ಬಯಸುತ್ತೇವೆ. ಭಾರತ ಹಣ ನೀಡಿದರೆ ಮಾತ್ರ ಈ ಪ್ರದೇಶದ ಮೂಲಸೌಕರ್ಯ ಸುಧಾರಿಸುತ್ತದೆ ಎಂದು ಕೆಲವರು ಹೇಳಿರುವುದು ಅಚ್ಚರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).