ನಿರ್ಮಾಪಕ ಪರ ನಿಂತ ಸಲ್ಲು ಮಾಜಿ ಪ್ರೇಯಸಿ ಸೋಮಿ ಅಲಿ
- ಕಾಲಾ ಹಿರನ್ ಸಿನಿಮಾ ವಿವಾದ
- ಸಲ್ಮಾನ್ ಖಾನ್ ನೋಟಿಸ್ ಹರಿದು ಹಾಕಿದ ನಿರ್ಮಾಪಕ ಅಮಿತ್ ಜಾನಿ
- ನಿರ್ಮಾಪಕ ಪರ ನಿಂತ ಸಲ್ಲು ಮಾಜಿ ಪ್ರೇಯಸಿ ಸೋಮಿ ಅಲಿ
ಮುಂಬೈ: ನಟ ಸಲ್ಮಾನ್ ಎಂದರೆ ವಿವಾದ, ವಿವಾದ ಎಂದರೆ ಸಲ್ಮಾನ್ ಖಾನ್ ಎಂದರೂ ತಪ್ಪಾಗದು. ಸದಾ ಒಂದಿಲ್ಲೊಂದು ಸಮಸ್ಯೆಗಳೊಂದಿಗೆ ಗುರುತಿಸಿಕೊಂಡಿರುವ ಬಾಲಿವುಡ್ ನಟ ಈಗ ಇನ್ನೊಮ್ಮೆ ಸುದ್ದಿಯಲ್ಲಿದ್ದಾರೆ.
1998 ರಲ್ಲಿ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿ ನಿರ್ಮಾಪಕ ಅಮಿತ್ ಜಾನಿ ಕಾಲಾ ಹಿರನ್ ಎಂಬ ಸಿನಿಮಾ ನಿರ್ಮಿಸಲು ಮುಂದಾಗಿದ್ದು, ಇದರಿಂದ ಕುಪಿತನಾದ ನಟ ಸಲ್ಮಾನ್ ಖಾನ್ ನಿರ್ಮಾಪಕನಿಗೆ ನೋಟಿಸ್ ನೀಡಿದ್ದರು. ಆದರೆ ಆ ನೋಟಿಸ್ನ್ನು ಲೈವ್ ವಿಡಿಯೋನಲ್ಲಿ ನಿರ್ಮಾಪಕ ಅಮಿತ್ ಜಾನಿ ಹರಿದು ಹಾಕಿ ನಿಮ್ಮ ಈ ಪೊಳ್ಳು ಬೆದರಿಕೆಗೆಲ್ಲಾ ಜಗ್ಗಲ್ಲ, ಈ ಸಿನಿಮಾ ನಟ ಸಲ್ಮಾನ್ ಅವರನ್ನು ಆಧರಿಸಿ ನಿರ್ಮಿಸುತ್ತಿಲ್ಲ ಎಂದು ಹೇಳಿದ್ದರು.
ನಿರ್ಮಾಪಕನ ಬೆನ್ನಿಗೆ ನಿಂತ ಸಲ್ಲು ಮಾಜಿ ಗರ್ಲ್‌ಫ್ರೆಂಡ್
ನಟ ಸಲ್ಮಾನ್ ಖಾನ್ ಕಳುಹಿಸಿದ್ದ ನೋಟಿಸ್ನ್ನು ನಿರ್ಮಾಪಕ ಹರಿದು ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ. ಈಗ ಈ ವಿಡಿಯೋಗೆ ಸಲ್ಮಾನ್ ಖಾನ್ನ ಮಾಜಿ ಗೆಳತಿ ಸೋಮಿ ಅಲಿ (Somy Ali on Salman Khan) ನೀಡಿರುವ ಪ್ರತಿಕ್ರಿಯೆ ಎಲ್ಲರ ನಿದ್ದೆ ಗೆಡಿಸಿದೆ.
ಅಮಿತ್ ಜಾನಿಯ ವಿಡಿಯೋಗೆ ಸೋಮಿ ಅಲಿ, ಯಾವುದೇ ವಿಷಯದ ಬಗ್ಗೆ ಸಿನಿಮಾ ಮಾಡುವ ಸಂಪೂರ್ಣ ಹಕ್ಕು ನಿಮಗಿದೆ(ಅಮಿತ್ ಜಾನಿ). ತಪ್ಪು ಮಾಡಿದವರು ಮತ್ತು ತಪ್ಪಿತಸ್ಥರು ಮಾತ್ರ ಈ ರೀತಿ ಅಡಗಿಕೊಳ್ಳುತ್ತಾರೆ ಅಥವಾ ಇತರರಿಗೆ ಬೆದರಿಕೆ ಹಾಕುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.
ನನಗೆ ಭೂಗತ ಜಗತ್ತಿನ ಬೆದರಿಕೆ ಬರುತ್ತಿದೆ
ನಿರ್ಮಾಪಕ ಅಮಿತ್ ಜಾನಿ ಬಿಡುಗಡೆ ಮಾಡಿರುವ ವಿಡಿಯೋನಲ್ಲಿ ಕಳೆದ 36 ಗಂಟೆಗಳಿಂದ ಮುಂಬೈನಲ್ಲಿರುವ ಸಲ್ಮಾನ್ ಖಾನ್ ಅಭಿಮಾನಿಗಳಿಂದ ನನಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಅಷ್ಟೇ ಅಲ್ಲ, ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂನ ಡಿ-ಕಂಪನಿ ಹೆಸರಲ್ಲೂ ಮೆಸೇಜ್ ಬಂದಿದ್ದು, ಡಿ-ಕಂಪನಿ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದಾರೆ.
ಸಲ್ಮಾನ್ ಭಾಯ್, ನಾನು ನಿಮ್ಮ ಲೀಗಲ್ ನೋಟಿಸ್‌ಗೆ ಉತ್ತರಿಸಬೇಕೋ ಅಥವಾ ಈ ಡಿ-ಕಂಪನಿ ಬೆದರಿಕೆಗೆ ಉತ್ತರಿಸಬೇಕೋ? ನಿಮ್ಮ ನೋಟಿಸ್ ಅನ್ನು ನಾನು ಹರಿದು ಕಸದ ಬುಟ್ಟಿಗೆ ಹಾಕಿದ್ದೇನೆ. ನಿಮ್ಮನ್ನು ಬೆಂಬಲಿಸುವ ಡಿ-ಕಂಪನಿಯನ್ನು ನಾವು ಎದುರಿಸಲು ರೆಡಿಯಾಗಿದ್ದೇವೆ ಎಂದು ಗುಡುಗಿದ್ದಾರೆ, (ಏಜನ್ಸೀಸ್).