ಬಾಲಿವುಡ್ ಸ್ಟಾರ್ ಕಿಡ್ಗಳಿಗೆ ನೆಪೋಟಿಸಂ ಎಂಬುದು ಬಿಡದ ಹಣೆಪಟ್ಟಿ. ಹುಟ್ಟುತ್ತಲೇ ಅವರಿಗೆ ಚಿತ್ರರಂಗದ ಬಾಗಿಲು ತೆರೆದಿರುತ್ತದೆ. ಫೇವರಿಸಂ ಇರುವ ಕಾರಣ ಚಿತ್ರರಂಗದಲ್ಲಿ ಬೇಗ ಸ್ಟಾರ್ಗಳಾಗಿಬಿಡುತ್ತಾರೆ ಎಂಬ ಮಾತಿದೆ. ಈ ಹಣೆ ಪಟ್ಟಿಯಿಂದ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಕೂಡ ಹೊರತಾಗಿಲ್ಲ. ಇದೀಗ ಅಂತಿಮವಾಗಿ ನೆಪೋಟಿಸಂ ಹಣೆಪಟ್ಟಿಯ ಬಗ್ಗೆ ಖಾರವಾಗಿಯೇ ಸಾರಾ ಪ್ರತಿಕ್ರಿಯಿಸಿದ್ದು, ‘ಎಂಟು ವರ್ಷಗಳ ಸಿನಿ ಜರ್ನಿಯಲ್ಲಿ ಸ್ವಂತವಾಗಿ ಬೆಳೆದು ಬಂದಿದ್ದೇನೆ. ಫಾದರೂ ಬರಲಿಲ್ಲ, ಗಾಡ್ಫಾದರೂ ಇಲ್ಲ’ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ. ‘ನಾನು ತಾಯಿಯೊಂದಿಗೆ ವಾಸಿಸುತ್ತಿದ್ದೇನೆ. ನನ್ನ ಕೆಲಸ ಹಾಗೂ ಅವಕಾಶಗಳ ವಿಚಾರವಾಗಿ ಎಂದಿಗೂ ನನ್ನ ತಂದೆ ತಲೆ ಕೆಡಿಸಿಕೊಳ್ಳಲಿಲ್ಲ. ಮಗಳಿಗೆ ಅವಕಾಶ ಕೊಡಿ ಅಂತ ನಿರ್ಮಾಣ ಸಂಸ್ಥೆಗಳನ್ನು ಅಲೆಯಲಿಲ್ಲ. ಇನ್ನು ‘ಕೇದಾರನಾಥ್’ ಚಿತ್ರದ ವೇಳೆ ಸಂಭವಿಸಿದ್ದ ಸಮಸ್ಯೆಯನ್ನು ಯಾರ ನೆರವಿಲ್ಲದೇ ನಾನೊಬ್ಬಳೇ ಬಗೆಹರಿಸಿಕೊಂಡೆ. ಆ ಸಮಯದಲ್ಲಿ ನನ್ನ ಪರವಾಗಿ ಯಾರೂ ನಿಲ್ಲಲಿಲ್ಲ. ಇಂಡಸ್ಟ್ರಿಯಲ್ಲಿ ನನಗೆ ಯಾವ ಗಾಡ್ ಫಾದರ್ ಇಲ್ಲ’ ಎಂದಿದ್ದಾರೆ. ಸಾರಾ ಅಲಿ ಖಾನ್ ಅಭಿನಯದ ‘ಉಡ್ತಾ ತೀರ್’ ಕಳೆದ ಶುಕ್ರವಾರ (ಅ. 23) ರಿಲೀಸ್ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. -ಏಜೆನ್ಸೀಸ್
ಸಾರಾ ಅಲಿ ಖಾನ್ ಹಿಂದಿಯ ‘ಕೇದರನಾಥ್’ (2018) ಮೂಲಕ ಬಾಲಿವುಡ್ ಪ್ರವೇಶಿಸಿದರು. ಈ ಚಿತ್ರದ ಬಳಿಕ ನಟಿಯು ಪ್ರತಿ ವರ್ಷ ಕೇದಾರನಾಥ್ಗೆ ತೆರಳುತ್ತಾರೆ. ಅಂತೆಯೇ ಇತ್ತೀಚೆಗೆ ಸಾರಾ ಅಲ್ಲಿಗೆ ತೆರಳಿ ದೇವರ ದರ್ಶನ ಪಡೆದು, ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರ ಬೆನ್ನಲ್ಲೇ ನಟಿಯ ವಿರುದ್ಧ ಉತ್ತರ ಪ್ರದೇಶ ಮೂಲದ ಧರ್ಮಗುರು ಮೌಲಾನಾ ಮುಫ್ತಿ ಶಹಾಬುದೀನ್ ರಜ್ವಿ ಬರೇಲಿ, ‘ಅನ್ಯ ಧರ್ಮದ ಧಾರ್ಮಿಕ ಸ್ಥಳಕ್ಕೆ ತೆರಳುವ ಮೂಲಕ ಸಾರಾ ಇಸ್ಲಾಂನ ಶರಿಯಾ ಕಾನೂನನ್ನು ಧಿಕ್ಕರಿಸಿದ್ದಾರೆ. ಪಾಪ ಮಾಡಿದ್ದಾರೆ. ಹೀಗಾಗಿ ಅವರು ಅದಕ್ಕೆ ಪ್ರಾಯಶ್ಚಿತ ಪಡಬೇಕು’ ಎಂದು ತ್ವಾ ಹೊರಡಿಸಿದ್ದಾರೆ. ಇನ್ನು ವಿವಿಧ ಧರ್ಮಗಳ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾರಾ ವಿರುದ್ಧ ಈ ಹಿಂದೆಯೂ ಕೆಲ ಬಾರಿ ಫತ್ವಾ ಹೊರಡಿಸಲಾಗಿತ್ತು.