ಸಂಗೀತ ಸಂಯೋಜಕ ಎ.ಆರ್. ರೆಹಮಾನ್ 
ಬಾಲಿವುಡ್

ನೋವುಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ! ಭಾರೀ ವಿವಾದ ಬೆನ್ನಲ್ಲೇ ಎ.ಆರ್. ರೆಹಮಾನ್ ಸ್ಪಷ್ಟನೆ | A R Rahman

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ನಲ್ಲಿ ಕೋಮುವಾದ ಹೆಚ್ಚುತ್ತಿದೆ ಎಂದಿದ್ದ ಎ.ಆರ್​. ರೆಹಮಾನ್​
  • ಯಾವ ಭಾರತೀಯನಿಗೂ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ
  • ಭಾರತದಲ್ಲಿ ನನ್ನ ಜನ್ಮವಾಗಿದ್ದೇ ನನ್ನ ಪುಣ್ಯ ಎಂದ ಹೆರಮಾನ್​
ಬಾಲಿವುಡ್​: ಬಾಲಿವುಡ್​ನಲ್ಲಿ ಕೋಮುವಾದ ಹೆಚ್ಚಾಗುತ್ತಿರುವ ಕಾರಣ ತಮಗೆ ಹೆಚ್ಚು ಕೆಲಸಗಳು ದೊರೆಯುತ್ತಿಲ್ಲ ಎಂಬ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ (A R Rahman) ಅವರ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆ ಇನ್​ಸ್ಟಾಗ್ರಾಂ ಫೋಸ್ಟ್​ ಮೂಲಕ ಸ್ಪಷ್ಟಣೆಯನ್ನು ನೀಡಿದ್ದಾರೆ.
ಬಿಡುಗಡೆ ಮಾಡಿದ ವಿಡಿಯೋನಲ್ಲಿ ನಾನು ಸಂದರ್ಶನಲ್ಲಿ ಹೇಳಿದ ಮಾತಗಳು ಯಾರ ಭಾವನೆಗಳಿಗೂ ನೋವುಂಟುಮಾಡುವ ಉದ್ದೇಶ ಹೊಂದಿರಲಿಲ್ಲ, ತಮ್ಮ ಕೆಲಸದ ಮೂಲಕ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ನನ್ನ ಜೀವಮಾನದ ಬದ್ಧತೆಯಾಗಿದೆ ಎಂದು ಎ.ಆರ್. ರೆಹಮಾನ್ ಹೇಳಿದ್ದಾರೆ.
ಚಲನಚಿತ್ರೋದ್ಯಮದಲ್ಲಿ ಬದಲಾದ ಆದ್ಯತೆ ಮತ್ತು ವಿಭಜನೆಯ ಕುರಿತು ಅವರು ನೀಡಿದ್ದ ಹೇಳಿಕೆಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗಳು ಭುಗಿಲೆದ್ದ ಕೆಲವು ದಿನಗಳ ನಂತರ ಸ್ಪಷ್ಟೀಕರಣದ ವಿಡಿಯೋ ಬಿಡುಗಡೆಯಾಗಿದೆ.

ಭಾರತವೇ ನನ್ನ ಸ್ಫೂರ್ತಿ, ಗುರು ಮತ್ತು ಮನೆ

ರೆಹಮಾನ್​ ವಿಡಿಯೋನಲ್ಲಿ ಭಾರತದ ಜತೆಗಿನ ತಮ್ಮ ಬಾಂಧವ್ಯ ಮತ್ತು ಸಂಬಂಧ ಕುರಿತು ಮಾತನಾಡುತ್ತಾ, ಭಾರತ ನನ್ನ ಸ್ಫೂರ್ತಿ, ನನ್ನ ಗುರು ಮತ್ತು ನನ್ನ ಮನೆಯಾಗಿದೆ ಎಂದಿದ್ದಾರೆ. ನನ್ನ ಮಾತಿನ ಉದ್ದೇಶಗಳನ್ನು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ದೇಶವನ್ನು ಉನ್ನತೀಕರಿಸುವುದು, ಗೌರವಿಸುವುದು ಮತ್ತು ಸೇವೆ ಸಲ್ಲಿಸುವುದಾಗಿದೆ. ನಾನು ಎಂದಿಗೂ ದೇಶದ ಭಾಂದವರಿಗೆ ನೋವನ್ನು ಉಂಟುಮಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿ ಹುಟ್ಟಿದ್ದೇ ನನ್ನ ಪುಣ್ಯ

ನಾನು ಭಾರತೀಯನಾಗಿರುವುದಕ್ಕೆ ಧನ್ಯನೆಂದು ಭಾವಿಸುತ್ತೇನೆ. ಇದು ಯಾವಾಗಲೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಮತಿಸುವ ಮತ್ತು ಬಹುಸಂಸ್ಕೃತಿಯ ಧ್ವನಿಗಳನ್ನು ಆಚರಿಸುವ ದೇಶವಾಗಿದೆ ಎಂದರು. ನಾನು ಈ ರಾಷ್ಟ್ರಕ್ಕೆ ಕೃತಜ್ಞನಾಗಿರುತ್ತೇನೆ ಮತ್ತು ಸಂಗೀತ ಮೂಲಕ ದೇಶವನ್ನು ಗೌರವಿಸಲು ಬದ್ಧನಾಗಿರುತ್ತೇನೆ ಎಂದು ಹೇಳಿ, ಅವರ ಸಂಗೀತ ಸಂಯೋಜನೆಗಳಲ್ಲಿ ಒಂದಾದ ಮಾ ತುಜೆ ಸಲಾಮ್ ಹಾಡನ್ನು ಹಾಡಿದ್ದಾರೆ.

ವಿವಾದಕ್ಕೆ ಕಾರಣವೇನು?

ಬಿಬಿಸಿ ಏಷ್ಯನ್‌ನ ಯೂಟ್ಯೂಬ್ ಚಾನೆಲ್​ನಲ್ಲಿ ಹರುನ್ ರಷೀದ್ ಅವರಿಗೆ ರೆಹಮಾನ್​ ಸಂದರ್ಶನ ನೀಡಿದ್ದಾರೆ. ರಾಮಾಯಣ ಸಿನಿಮಾಗೆ ಸಂಗೀತ ನೀಡುವಲ್ಲಿ ನಿಮ್ಮ ಧಾರ್ಮಿಕ ನಂಬಿಕೆಗಳು ಪಾತ್ರ ವಹಿಸಿವೆಯೇ ಎಂದು ರೆಹಮಾನ್ ಅವರನ್ನು ಈ ವೇಳೆ ಪ್ರಶ್ನಿಸಲಾಯಿತು.
ಇದಕ್ಕೆ ಉತ್ತರ ನೀಡಿದ ರೆಹಮಾನ್​, ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದ್ದೇನೆ. ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಪ್ರತಿ ವರ್ಷ ಹೇಳಿಕೊಡಲಾಗುತ್ತಿತ್ತು. ಆದ್ದರಿಂದ, ನನಗೆ ಕತೆಗಳು ಚೆನ್ನಾಗಿ ತಿಳಿದಿವೆ. ಈ ಕತೆಗಳು ಮಾನವ ದಯೆ, ಉನ್ನತ ಆದರ್ಶಗಳು ಮತ್ತು ಎಲ್ಲದರ ಬಗ್ಗೆ ತಿಳಿಸುತ್ತದೆ. ಜನರು ಏನೇ ವಾದಿಸಬಹುದು ಆದರೆ, ನಾನು ಎಲ್ಲ ಒಳ್ಳೆಯ ವಿಷಯಗಳನ್ನು ಗೌರವಿಸುತ್ತೇನೆ ಮತ್ತೆ ಒಳ್ಳೆಯ ವಿಷಯಗಳನ್ನು ಕಲಿತರೂ ತಪ್ಪಿಲ್ಲ ಎಂದರು.
ನಾನು ತೊಂಭತ್ತರ ದಶಕದಲ್ಲಿ ಕೆಲಸ ಆರಂಭಿಸಿದಾಗ ಯಾವುದೇ ಧಾರ್ಮಿಕ ಪೂರ್ವಾಗ್ರಹಗಳಿರಲಿಲ್ಲ. ಆದರೆ ಕಳೆದ 8 ವರ್ಷಗಳಲ್ಲಿ ಹಿಂದಿ ಚಿತ್ರಗಳಲ್ಲಿ ನನಗೆ ತುಂಬಾ ಕಡಿಮೆ ಕೆಲಸ ಬಂದಿದೆ. ಇದಕ್ಕೆ ಕಾರಣ ನನ್ನ ಪ್ರಯತ್ನದ ಕೊರತೆಯಲ್ಲ ಮತ್ತು ನಾನು ಕೆಲಸಕ್ಕಾಗಿ ಯಾರ ಬಳಿಯೂ ಹೋಗುವುದಿಲ್ಲ. ನನಗೆ ಕಡಿಮೆ ಕೆಲಸ ಸಿಗಲು ಅಧಿಕಾರದ ಹಸ್ತಾಂತರ ಕಾರಣ ಇರಬಹುದು ಅಥವಾ ಕೋಮು ಅಂಶಗಳು ಕೂಡ ಪ್ರಭಾವ ಬೀರಿರಬಹುದು ಎನ್ನುವ ಮೂಲಕ ತಾನು ಮುಸ್ಲಿಂ ಆಗಿರುವುದರಿಂದ ತನಗೆ ಅವಕಾಶಗಳು ಕಡಿಮೆ ಎಂಬ ಅರ್ಥದಲ್ಲಿ ರೆಹಮಾನ್​ ಹೇಳಿದ್ದಾರೆ,(ಏಜನ್ಸೀಸ್).