ಜಾವೇದ್​ ಅಖ್ತರ್​, ಎ.ಆರ್​. ರೆಹಮಾನ್​, ಮೆಹಬೂಬಾ ಮುಫ್ತಿ 
ಬಾಲಿವುಡ್

ಅಖ್ತರ್ ಪ್ರತಿಕ್ರಿಯೆಗೆ ಮುಫ್ತಿ ತರಾಟೆ; ರೆಹಮಾನ್ ಪರ ನಿಂತಿದ್ದೇಕೆ ಜಮ್ಮು-ಕಾಶ್ಮೀರದ ಮಾಜಿ ಸಿಎಂ? ಇಲ್ಲಿದೆ ಸಂಪೂರ್ಣ ವಿವರ | A R Rahman

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ನಲ್ಲಿ ಕೋಮವಾದ ಹೆಚ್ಚುತ್ತಿದೆ ಎಂಬ ಹೇಳಿಕೆ ಕೊಟ್ಟ ಎ.ಆರ್​. ರೆಹಮಾನ್​
  • ನೀವು ಉನ್ನತ ಸ್ಥಾನದಲ್ಲಿರುವ ಕಾರಣ ನಿಮ್ಮನ್ನು ಸಂಪರ್ಕಿಸಲು ಜನ ಸಂಕೋಚ ಮತ್ತು ಅಂಜಿಕೆ ಹೊಂದಿರಬಹುದು : ಜಾವೇದ್​ ಅಖ್ತರ್​
  • ಜಾವೇದ್​ ಅಖ್ತರ್​ನ ಹೆಂಡತಿಗೆ ಮುಸ್ಲಿಂ ಎಂಬ ಕಾರಣಕ್ಕೆ ಮನೆ ನೀಡದೆ ಇದ್ದದ್ದು ಮರೆತುಹೋಯಿತೆ? ಮೆಹಬೂಬಾ ಮುಫ್ತಿ
ಜಮ್ಮು-ಕಾಶ್ಮೀರ: ಬಾಲಿವುಡ್​ನಲ್ಲಿ ಬೆಳೆಯುತ್ತಿರುವ ಕೋಮುವಾದದ ಬಗ್ಗೆ ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ (A.R. Rahman)ನೀಡಿರುವ ಹೇಳಿಕೆಗಳು ದೇಶದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದ್ದು, ರಾಜಕಾರಣಿಗಳು ಮತ್ತು ಚಿತ್ರರಂಗದವರು ಇದಕ್ಕೆ ಪರ-ವಿರೋಧ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರೆಹಮಾನ್​ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ರೆಹಮಾನ್ ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದ ಗೀತರಚನೆಕಾರ ಜಾವೇದ್ ಅಖ್ತರ್‌ ಅವರಿಗೆ ತಿರುಗೇಟು ನೀಡಿದ್ದಾರೆ.
ಬಾಲಿವುಡ್‌ನಲ್ಲಿ ಹೆಚ್ಚುತ್ತಿರುವ ಕೋಮುವಾದದ ಬಗ್ಗೆ ಎ.ಆರ್. ರೆಹಮಾನ್ ಅವರ ಕಳವಳಗಳನ್ನು ಜಾವೇದ್ ಅಖ್ತರ್ ತಳ್ಳಿಹಾಕಿದ್ದಾರೆ. ಆದರೆ ಜಾವೇದ್​ ಅಖ್ತರ್​ ಅವರ ಪತ್ನಿ ಶಬಾನಾ ಅಜ್ಮಿ ಅವರಿಗೆ ಮುಂಬೈನಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ ವಸತಿಗಾಗಿ ಮನೆಯನ್ನು ನಿರಾಕರಿಸದ್ದ ಬಗ್ಗೆ ಅವರೆ ಬಹಿರಂಗವಾಗಿ ಮಾತನಾಡಿದ್ದಾರೆ.
ಬಾಲಿವುಡ್ ಯಾವಾಗಲೂ ದೇಶದ ಸಾಮಾಜಿಕ ವಾಸ್ತವಗಳನ್ನು ಪ್ರತಿಬಿಂಬಿಸುವ ಮಾಧ್ಯಮವಾಗಿದೆ. ಇಂತಹ ಅನುಭವಗಳನ್ನು ಮುಚ್ಚಿಡುವುದರಿಂದ ಭಾರತದ ನೈಜನೆ ಮತ್ತು ಸತ್ಯಾಸತ್ಯತೆ ಏನು ಬದಲಾಗುವುದಿಲ್ಲ ಎಂದು ಮುಫ್ತಿ, ಎ.ಆರ್​.ರೆಹಮಾನ್​ ಅವರ ಹೇಳಿಕೆಗಳನ್ನು ಬೆಂಬಲಿಸುತ್ತಾ, ಜಾವೇದ್​ ಅಖ್ತರ್​ ಅವರ ಹೇಳಿಕೆಗೆ ವಿರೋಧ ವ್ಯಕ್ತ ಪಡಿಸಿದ್ದಾರೆ.

ಜಾವೇದ್​ ಅಖ್ತರ್​ ಏನು ಹೇಳಿದ್ದರು?

ವೈರಲ್​ ಆಗುತ್ತಿರುವ ರಹಮಾನ್​​ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್, ರೆಹಮಾನ್ ಇಂತಹ ಹೇಳಿಕೆ ನೀಡಿದ ಬಗ್ಗೆ ನನಗೆ ಈಗಲೂ ಅನುಮಾನವಿದೆ. ಸಂಗೀತ ಕ್ಷೇತ್ರದಲ್ಲಿ ಅವರು ತುಂಬಾ ಉನ್ನತ ಸ್ಥಾನದಲ್ಲಿರುವ ಕಾರಣ ಜನ ಅವರನ್ನು ಸಂಪರ್ಕಿಸಲು ಹಿಂಜರಿಯುತ್ತಾರೆ ಎಂದರು.
ರೆಹಮಾನ್ ಒಬ್ಬ ಉತ್ತಮ ಸಂಗೀತ ಸಂಯೋಜಕ ಬಹಳಷ್ಟು ಜನರು ಅವರನ್ನು ಗೌರವಿಸುತ್ತಾರೆ. ಆದರೆ ಅವರು ತುಂಬಾ ದೊಡ್ಡವರಾಗಿರುವುದರಿಂದ ಅವರನ್ನು ತಲುಪಲು ಜನರು ಹೆದರುತ್ತಾರೆ. ಅವರೊಂದಿಗೆ ಮಾತನಾಡಲು ಮತ್ತು ಅವರನ್ನು ನಿಭಾಯಿಸಲು ಅವರು ಹೆದರುತ್ತಾರೆ ಎಂದರು.

ತಮ್ಮ ಹೇಳಿಕೆಗಳಿಗೆ ಸ್ಪಷ್ಟಣೆ ನೀಡಿದ ಎ.ಆರ್​.ರೆಹಮಾನ್​

ತಮ್ಮ ಹೇಳಿಕೆಗಳ ಕುರಿತು ಗದ್ದಲ ಹೆಚ್ಚುತ್ತಿರುವಂತೆಯೇ, ಭಾನುವಾರ ರೆಹಮಾನ್ ಮೌನ ಮುರಿದು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ವೀಡಿಯೊ ಸಂದೇಶದಲ್ಲಿ ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಪುನರುಚ್ಚರಿಸಿದ್ದಾರೆ. ತಮ್ಮ ಹೇಳಿಕೆಗಳಿಂದ ನೋವುಂಟು ಮಾಡುವುದು ಎಂದಿಗೂ ತಮ್ಮ ಉದ್ದೇಶವಲ್ಲ ಮತ್ತು ಸಂಗೀತದ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಅವರು ಯಾವಾಗಲೂ ಶ್ರಮಿಸಿದ್ದಾರೆ ಎಂದು ಅವರು ಹೇಳಿದರು.
ಭಾರತ ನನ್ನ ಸ್ಫೂರ್ತಿ, ನನ್ನ ಗುರು ಮತ್ತು ನನ್ನ ಮನೆ. ಕೆಲವೊಮ್ಮೆ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಸೇವೆ ಮಾಡುವುದು. ನಾನು ಎಂದಿಗೂ ನೋವುಂಟು ಮಾಡಲು ಬಯಸುವುದಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ,(ಏಜನ್ಸೀಸ್).