ಮಾರ್ಚ್ 19 ರಂದು ಬಿಡುಗಡೆಗೆ ಸಿದ್ಧವಾದ ಧುರಂಧರ್ 2 ಸಿನಿಮಾ
- ಮಾರ್ಚ್ 19 ರಂದು ಬಿಡುಗಡೆಗೆ ಸಿದ್ಧವಾದ ಧುರಂಧರ್ 2 ಸಿನಿಮಾ
- ಸಿನಿಮಾದ ಹಾಡೊಂದರಲ್ಲಿ ಸಿಖ್ ಪಾತ್ರದಲ್ಲಿ ಸಿಗರೇಟ್ ಸೇದುತ್ತಿರುವ ರಣವೀರ್ ಸಿಂಗ್
- ಇದು ನಮ್ಮ ಧರ್ಮಕ್ಕೆ ಮಾಡಿರುವ ಅಪಚಾರ ಎಂದ ಶಿರೋಮಣಿ ಅಕಾಲಿದಳ
- ಕ್ಷಮೆ ಕೇಳಿ ಮತ್ತು ಈ ದೃಶ್ಯವನ್ನು ಸಿನಿಮಾದಿಂದ ಕೈಬಿಡಿ ಎಂದ ಸಿಖ್ ನಾಯಕ
ಬಾಲಿವುಡ್: ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ, ಆಧಿತ್ಯ ಧರ್ ನಿರ್ದೇಶನದ ಧುರಂಧರ್ 2 (Dhurandhar 2), ಮಾರ್ಚ್ 19 ರಂದು ಪ್ರಪಂಚದಾದ್ಯಂತ ತೆರೆಕಾಣಲು ತುದಿಗಾಲಲ್ಲಿ ನಿಂತಿದೆ. ಆದರೆ ಈ ಸಿನಿಮಾಗೆ ಹೊಸದೊಂದು ಕಾನೂನಿನ ತೊಡಕು ಉಂಟಾಗಿದ್ದು, ಇದು ಸಿನಿಮಾದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡ ಬೇಕಾಗಿದೆ.
ಏನಿದು ಸಮಸ್ಯೆ?
ಧುರಂಧರ್ 2 ತೆರೆಕಾಣುವ ಪೂರ್ವದಲ್ಲಿ ಸಿನಿಮಾದ ಟ್ರೇಲರ್ನ್ನು ಬಿಡುಗಡೆ ಮಾಡಲಾಗಿದ್ದು, ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಹಮ್ಜಾ ಅಲಿ ಮಜಾರಿ ಪಾತ್ರದ ಜೊತೆಗೆ ಜಸ್ಕಿರತ್ ಸಿಂಗ್ ರಂಗಿ ಎಂಬ ಸಿಖ್ ಪಾತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.
ಟ್ರೇಲರ್ ಮತ್ತು ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಜಸ್ಕಿರತ್ ಸಿಂಗ್ ರಂಗಿ ಎಂಬ ಪಾತ್ರದಲ್ಲಿ ರಣವೀರ್ ಸಿಂಗ್ ಸಿಗರೇಟನ್ನ ಸೇದುತ್ತಿರುವುದು ಸಿಖ್ಖರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಶಿರೋಮಣಿ ಅಕಾಲಿದಳ ಕಾನೂನಿನ ಮೊರೆ ಹೋಗಿದೆ. ಸಿಖ್ ಧರ್ಮದಲ್ಲಿ ತಂಬಾಕಿನ ಸೇವನೆ ನಿಷಿದ್ಧವಾಗಿದ್ದು, ಸಿನಿಮಾದಲ್ಲಿ ಸಿಖ್ ಪಾತ್ರದಲ್ಲಿರುವ ವ್ಯಕ್ತಿ ಸಿಗರೇಟ್ ಸೇದುತ್ತಿರುವ ದೃಶ್ಯ ತಮಗೆ ಅತೀಮ ಬೇಸರ ತರಿಸಿದೆ ಎಂದು ಅಕಾಲಿದಳ ತಿಳಿಸಿದೆ.
ದೃಶ್ಯವನ್ನು ತೆಗೆಯಿರಿ; ಕ್ಷಮೆಯನ್ನು ಕೇಳಿ
ದೆಹಲಿಯ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಪರಮ್ಜಿತ್ ಸಿಂಗ್ ಸರ್ನಾ, ಧುರಂಧರ್ 2 ಚಿತ್ರದ ಪ್ರಳಯ್ ಹಾಡಿನ ಪೋಸ್ಟರ್‌ನಲ್ಲಿ ಪೇಟ ಧರಿಸಿದ ಸಿಖ್ ಪಾತ್ರವು ಸಿಗರೇಟ್ ಹಿಡಿದಿರುವುದನ್ನು ಚಿತ್ರಿಸಲಾಗಿದೆ. ಈ ಚಿತ್ರಣವು ಸಿಖ್ ಧಾರ್ಮಿಕ ತತ್ವಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಪರಮಜಿತ್ ಸಿಂಗ್ ಸರ್ನಾ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಪಗಡಿ ಧರಿಸಿ ಸಿಗರೇಟ್ ಹಿಡಿದುಕೊಂಡಿರುವ ದೃಶ್ಯ, ಸಿಖ್ ಗುರುತಿನ ಸ್ಪಷ್ಟ ತಪ್ಪು ನಿರೂಪಣೆಯಾಗಿದೆ ಮತ್ತು ಇದು ವಿಶ್ವಾದ್ಯಂತ ಸಿಖ್ಖರ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಆದ್ದರಿಂದ ಈ ದೃಶ್ಯವನ್ನು ಸಿನಿಮಾದಿಂದ ತೆಗೆದು ಹಾಕಬೇಕು ಮತ್ತು ಸಿನಿಮಾ ತಂಡ ಸಿಖ್ ಸಮುದಾಯಕ್ಕೆ ಮಾಡಿರುವ ಅವಮಾನಕ್ಕೆ ಕ್ಷಮೆ ಕೇಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಧುರಂಧರ್ ಬಗ್ಗೆ
ಧುರಂಧರ್ ಇದೊಂದು ಸ್ಪೈ-ಥ್ರಿಲ್ಲರ್ ಸಿನಿಮಾವಾಗಿದ್ದು, ಪಾಕಿಸ್ತಾನದಲ್ಲಿ ಭಾರತೀಯ ಗೂಢಚರ ಹೇಗೆ ಕೆಲಸ ಮಾಡುತ್ತಾನೆ ಎನ್ನುವುದೇ ಈ ಸಿನಿಮಾದ ಕಥಾ ವಸ್ತುವಾಗಿದೆ. ಈ ಸಿನಿಮಾದ ಮೊದಲ ಭಾಗವು 2025 ರ ಡಿಸೆಂಬರ್ನಲ್ಲಿ ತೆರೆಕಂಡು ಸುಮಾರು 1,000 ಕೋಟಿ ಕಲೆಕ್ಷನ್ ಮಾಡಿತ್ತು. ಈಗ ಈ ಸಿನಿಮಾದ ಎರಡನೆ ಭಾಗ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಅಕ್ಷನ್ ಖನ್ನಾ,ಆರ್.ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್ತ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಉರಿ ಖ್ಯಾತಿಯ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ,(ಏಜನ್ಸೀಸ್).