ಬಾಲಿವುಡ್ ಚಿತ್ರರಂಗದ ಎರಡು ಸಿನಿಮಾಗಳು ಹಿಟ್
- ಬಾಲಿವುಡ್ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಸಂಚಲನಾತ್ಮಕ ಹೇಳಿಕೆ
- 2 ಸಿನಿಮಾಗಳ ಸೂಪರ್ಹಿಟ್ ಸಕ್ಸಸ್ ಬೆನ್ನಲ್ಲೇ ಕರಣ್ ಜೋಹರ್ ಸಂತಸ
- ಪ್ರಕಾಶ್ ರಾಜ್ ಹೇಳಿಕೆಗೆ ಕರಣ್ ಪರೋಕ್ಷ ತಿರುಗೇಟು?
ಮುಂಬೈ: ಕಳೆದ ಒಂದೆರೆಡು ವರ್ಷಗಳಿಂದ ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದ್ದು ಬಿಟ್ಟರೆ, ಉಳಿದ ಬಹುತೇಕ ಚಿತ್ರಗಳು ಫ್ಲಾಪ್ ಆಗಿವೆ. ಇದರಿಂದ ಹಿಂದಿ ಚಿತ್ರೋದ್ಯಮ ಭಾರೀ ನಷ್ಟ ಅನುಭವಿಸಿದೆ. ಸ್ಟಾರ್ ನಟರ ಸಿನಿಮಾಗಳ ಮೇಲೆ ಹೆಚ್ಚೆಚ್ಚು ನಿರೀಕ್ಷೆ, ಭರವಸೆ, ಲೆಕ್ಕಾಚಾರಗಳನ್ನು ಇಟ್ಟುಕೊಂಡರೂ ಅವೆಲ್ಲವೂ ತಲೆಕೆಳಗಾಗುತ್ತಿರುವುದು ದುರಂತ. ಈ ಮಧ್ಯೆ, 'ಧುರಂಧರ್' ಮತ್ತು 'ಬಾರ್ಡರ್ 2' ಚಿತ್ರಗಳು ಯಶಸ್ಸು ಗಳಿಸಿರುವುದ್ದು ಸದ್ಯ ಬಾಲಿವುಡ್ಗೆ ನಿಟ್ಟುಸಿರು ಬಿಡುವಂತಾಗಿದೆ.
ಈ ಹಿಂದೆ ಲವ್ಸ್ಟೋರಿ ಸಿನಿಮಾಗಳನ್ನೇ ಹೆಚ್ಚಾಗಿ ಮಾಡುತ್ತಿದ್ದ ಬಾಲಿವುಡ್ ಈಗ ಕೇವಲ ಆ್ಯಕ್ಷನ್ ಆಧರಿತ ಚಿತ್ರಗಳತ್ತ ಮುಖಮಾಡಿದೆ. ಇಷ್ಟಾದರೂ ಸಹ ಲಾಭ ಗಳಿಸಲು ತೀರ ಪರದಾಡುತ್ತಿರುವ ಹಿಂದಿ ಚಿತ್ರೋದ್ಯಮಕ್ಕೆ ರಣವೀರ್ ಸಿಂಗ್ ಮತ್ತು ವರುಣ್ ಧವನ್ ನಟನೆಯ ಸಿನಿಮಾಗಳು ನಿರೀಕ್ಷೆಗೂ ಮೀರಿದ ಆದಾಯವನ್ನೇ ತಂದುಕೊಟ್ಟಿದೆ. ಒಂದೆಡೆ ಇದು ಚಿತ್ರತಂಡಕ್ಕೆ ತೃಪ್ತಿ ತಂದರೆ, ನಟ ಪ್ರಕಾಶ್ ರಾಜ್ ನೀಡಿರುವ ಹೇಳಿಕೆ ಕೆರಳಿಸಿದೆ.
ಹಿಂದಿ ಸಿನಿಮಾಗಳು ನೋಡಲು ಅದ್ಭುತ ಮತ್ತು ವರ್ಣಮಯವಾಗಿವೆ. ಆದರೆ, ಒಳಗೆ ಎಲ್ಲವೂ ಟೊಳ್ಳಾಗಿದೆ. ನೀವು ಹಿಂದಿ ಚಿತ್ರಗಳನ್ನು ನೋಡಿದಾಗ, ನಿಮಗೆ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿರುವ ಪ್ಲಾಸ್ಟಿಕ್ ಪ್ರತಿಮೆಗಳಂತೆ ಭಾಸವಾಗುತ್ತದೆ. ಅವು ಸುಂದರವಾಗಿ ಕಾಣುತ್ತಿದ್ದರೂ, ಅವುಗಳಲ್ಲಿ ಯಾವುದೇ ಜೀವವಿಲ್ಲ. ಬಾಲಿವುಡ್ ಚಿತ್ರಗಳು ಐಷಾರಾಮಿ ನೋಟ, ಪ್ರಚಾರಗಳು, ಹಣದಂತಹ ವಿಷಯಗಳ ಸುತ್ತ ಮಾತ್ರ ಸುತ್ತುತ್ತದೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ಈ ಹೇಳಿಕೆ ಬಾಲಿವುಡ್ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದು, ಹಲವರು ಸಾಮಾಜಿಕ ಜಾಲತಾಣಗಳಲ್ಲಿ ನಟನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪ್ರಕಾಶ್ ರಾಜ್ ಅವರ ಹೇಳಿಕೆಯ ಬೆನ್ನಲ್ಲೇ ಬಾಲಿವುಡ್ ನಿರ್ದೇಶಕ, ನಿರ್ಮಾಪಕರಾದ ಕರಣ್ ಜೋಹ್ಹರ್ ಹಾಕಿರುವ ಇನ್ಸ್ಟಾಗ್ರಾಮ್ ಸ್ಟೋರಿ ಸದ್ದು ಮಾಡಿದೆ. ಇದೊಂದು ರೀತಿ ಹಿರಿಯ ನಟನ ಹೇಳಿಕೆಗೆ ತಿರುಗೇಡು ನೀಡಿದಂತಿದೆ ಎಂಬುದರಲ್ಲಿ ಅನುಮಾನವಿಲ್ಲ.
ಸ್ಟೋರಿಯಲ್ಲಿ, "ಇತ್ತೀಚೆಗೆ ತೆರೆಕಂಡ ಎರಡು ಹಿಂದಿ ಸಿನಿಮಾಗಳ ಭರ್ಜರಿ ಯಶಸ್ಸು ಒಂದು ವಿಷಯವನ್ನು ಸಾಬೀತುಪಡಿಸಿದೆ. ಬಾಲಿವುಡ್ ಈಸ್ ಬ್ಯಾಕ್ ಎನ್ನುತ್ತಾ ಎರಡು ಚಿತ್ರಗಳ ಟೈಟಲ್ಗಳನ್ನು ಬಳಸಿಕೊಂಡು ತಮ್ಮ ಅನಿಸಿಕೆಯನ್ನು ಬರೆದುಕೊಂಡಿದ್ದಾರೆ. ಮತ್ತೊಂದೆಡೆ, ಬಾಲಿವುಡ್ಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿರುವ ಧುರಂಧರ್ ಚಿತ್ರದ ಸೀಕ್ವೆಲ್ ಇದೇ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ,(ಏಜೆನ್ಸೀಸ್).