Janhvi Kapoor  
ಬಾಲಿವುಡ್

Janhvi Kapoor; ನಾನು ಅಂತಹ ಬಟ್ಟೆ ತೊಟ್ಟಿಲ್ಲ, ಆ ಫೋಟೋಗಳು ನನ್ನದಲ್ಲ: ಜಾನ್ವಿ ಕಪೂರ್ ಗರಂ!

ಮುಂಬೈ: ಬಾಲಿವುಡ್‌ನ ಸ್ಟಾರ್ ನಟಿ ಜಾನ್ವಿ ಕಪೂರ್ (Janhvi Kapoor) ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಬಿಂಬಿಸುವ (Sexualization) ಪ್ರವೃತ್ತಿಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಹೌದು, ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ನೈತಿಕತೆ ಕುಸಿಯುತ್ತಿದೆ ಮತ್ತು ಮಹಿಳೆಯರ ದೇಹವನ್ನು ಕೇವಲ ವಸ್ತುವಿನಂತೆ ನೋಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

AI ಫೋಟೋಗಳು ನನ್ನದಲ್ಲ!

ಸಂದರ್ಶನದ ವೇಳೆ ಜಾನ್ವಿ ಅತ್ಯಂತ ಶಾಕಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. "ಸೋಶಿಯಲ್ ಮೀಡಿಯಾದಲ್ಲಿ ನನ್ನ ಹೆಸರಿನಲ್ಲಿ ಹರಿದಾಡುತ್ತಿರುವ ಅನೇಕ ಫೋಟೋಗಳು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದವುಗಳಾಗಿವೆ. ನಾನು ಎಂದಿಗೂ ಅಂತಹ ಬಟ್ಟೆಗಳನ್ನು ಧರಿಸಿಲ್ಲ, ಅಂತಹ ಫೋಟೋಶೂಟ್ ಕೂಡ ಮಾಡಿಲ್ಲ. ಆದರೆ ಅಧಿಕೃತ ಸುದ್ದಿ ಸಂಸ್ಥೆಗಳೂ ಸಹ ಅಂತಹ ಎಐ ಫೋಟೋಗಳನ್ನು ಪೋಸ್ಟ್ ಮಾಡುತ್ತಿವೆ. ಇದು ನನ್ನ ಗಮನಕ್ಕೆ ಬಂದಿದೆ ಮತ್ತು ಈ ಬಗ್ಗೆ ನನಗೆ ಕಿಂಚಿತ್ತೂ ನೆಮ್ಮದಿಯಿಲ್ಲ" ಎಂದು ಅವರು ಕಿಡಿಕಾರಿದ್ದಾರೆ.

ಪಾಪರಾಜಿಗಳ ವರ್ತನೆಗೆ ಬೇಸರ

ಕೇವಲ ಎಐ ಮಾತ್ರವಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಪಾಪರಾಜಿಗಳು (Paparazzi) ಮಹಿಳಾ ನಟಿಯರ ಫೋಟೋಗಳನ್ನು ಕ್ಲಿಕ್ಕಿಸುವ ವಿಧಾನದ ಬಗ್ಗೆಯೂ ಜಾನ್ವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ನಾನು ವೈಯಕ್ತಿಕವಾಗಿ ಪಾಪರಾಜಿಗಳನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡಿದ್ದೇನೆ. ಮಹಿಳೆಯರಿಗೆ ಅಸಹ್ಯವಾಗುವಂತೆ ಅವರ ದೇಹದ ಕೆಲವು ಭಾಗಗಳನ್ನು ಗುರಿಯಾಗಿಸಿ ಫೋಟೋ ತೆಗೆಯುವುದು ಸರಿಯಲ್ಲ. ಇದು ಅವರ ಒಪ್ಪಿಗೆಯಿಲ್ಲದೆ (Non-consensual) ಮಾಡುತ್ತಿರುವ ಕೆಲಸ. ಇದು ಮಹಿಳೆಯರ ದೇಹವನ್ನು ವಾಣಿಜ್ಯೀಕರಣಗೊಳಿಸುವ ಪ್ರಯತ್ನ" ಎಂದು ಅವರು ಹೇಳಿದ್ದಾರೆ.

"ಒಪ್ಪಿಗೆ ಇಲ್ಲದೆ ಲೈಂಗಿಕೀಕರಣ ಸರಿಯಲ್ಲ"

ಯಾವುದೇ ವ್ಯಕ್ತಿಯನ್ನು ಅವರ ಅನುಮತಿಯಿಲ್ಲದೆ ಲೈಂಗಿಕವಾಗಿ ಬಿಂಬಿಸುವುದು ಅಥವಾ ಅವರ ದೇಹದ ಬಗ್ಗೆ ಕೀಳುಮಟ್ಟದ ಕಾಮೆಂಟ್ ಮಾಡುವುದನ್ನು ನಾನು ಒಪ್ಪುವುದಿಲ್ಲ. ಇದು ನನ್ನನ್ನು ಬಹಳವಾಗಿ ಕಾಡುತ್ತಿದೆ. ಇಂದಿನ ಸಮಾಜದಲ್ಲಿ, ವಿಶೇಷವಾಗಿ ಸೋಶಿಯಲ್ ಮೀಡಿಯಾ ಬಂದ ಮೇಲೆ ಜನರ ಆಲೋಚನಾ ಕ್ರಮವೇ ಬದಲಾಗಿದೆ ಎಂದು ಜಾನ್ವಿ ಕಪೂರ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್​).