ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೈ ಹಿಡಿದು ಎಳೆದ ಬಾಡಿಗಾರ್ಡ್!
ಮುಂಬೈ: ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್(Jacqueline Fernandez) ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಆದರೆ ಈ ಬಾರಿ ತಮ್ಮ ಗ್ಲಾಮರ್ ಬದಲು ಅವರ ಬಾಡಿಗಾರ್ಡ್ ಮಾಡಿದ ಎಡವಟ್ಟಿನಿಂದ ಸುದ್ದಿಯಲ್ಲಿದ್ದಾರೆ.
ಶನಿವಾರ (ಜೂ.20) ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರ ವಿಡಿಯೋ ಈಗ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ನಟಿಯ ಅಂಗರಕ್ಷಕನ ವಿರುದ್ಧ ಕೆಂಡಕಾರುತ್ತಿದ್ದಾರೆ.
ಅಭಿಮಾನಿಗಳ ಸೆಲ್ಫಿ ಕ್ರೇಜ್: ಮಧ್ಯೆ ನುಗ್ಗಿದ ಬಾಡಿಗಾರ್ಡ್!
ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ, ಜಾಕ್ವೆಲಿನ್ ಫರ್ನಾಂಡಿಸ್ ಕಾರ್ಯಕ್ರಮ ಮುಗಿಸಿ ಹೊರಡುವಾಗ ತಮ್ಮನ್ನು ನೋಡಲು ಮುಗಿಬಿದ್ದಿದ್ದ ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ ಮಾಡಲು ಇಷ್ಟಪಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.
ನಟಿ ನಗುತ್ತಲೇ ಫ್ಯಾನ್ಸ್ ಕಡೆಗೆ ಹೋಗುತ್ತಾರೆ. ಆದರೆ ಅಷ್ಟರಲ್ಲೇ ಅಲ್ಲಿಗೆ ಬಂದ ಅವರ ಬಾಡಿಗಾರ್ಡ್, ನಟಿಯ ರಕ್ಷಣೆಯ ನೆಪದಲ್ಲಿ ತೀರಾ ಅತಿರೇಕವಾಗಿ ನಡೆದುಕೊಂಡಿದ್ದಾನೆ. ಜಾಕ್ವೆಲಿನ್ ಅವರ ಕೈಯನ್ನು ಬಲವಂತವಾಗಿ ಹಿಡಿದು, ಅಲ್ಲಿಂದ ಎಳೆದುಕೊಂಡು ಹೋಗಲು ಯತ್ನಿಸಿದ್ದಾನೆ.
ಬಾಡಿಗಾರ್ಡ್ ಈ ರೀತಿ ಕೈ ಹಿಡಿದು ಎಳೆದರೂ ಬೇಸರ ಮಾಡಿಕೊಳ್ಳದ ಜಾಕ್ವೆಲಿನ್, ತಣ್ಣಗಾಗಿಯೇ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಬಾಡಿಗಾರ್ಡ್ ಅವಳನ್ನು ವೇದಿಕೆಯಿಂದ ದೂರ ಕರೆದೊಯ್ಯಲು ಪ್ರಯತ್ನಿಸುತ್ತಿದ್ದರೂ, ನಟಿ ಮಾತ್ರ ಅಭಿಮಾನಿಗಳಿಗೆ ನಿರಾಸೆ ಮಾಡದೆ ನಿಂತು ಚಿತ್ರಗಳಿಗೆ ಪೋಸ್ ನೀಡಿದ್ದಾರೆ. ನಟಿಯ ಈ ನಯವಾದ ನಡವಳಿಕೆ ಜನರಿಗೆ ಇಷ್ಟವಾಗಿದ್ದರೆ, ಬಾಡಿಗಾರ್ಡ್ ವರ್ತನೆ ಮಾತ್ರ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ನೆಟ್ಟಿಗರ ಆಕ್ರೋಶ: ಅವನಿಗೆ ಆ ರೈಟ್ಸ್ ಕೊಟ್ಟವರ್ಯಾರು?
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆ ಕಮೆಂಟ್ ಬಾಕ್ಸ್‌ನಲ್ಲಿ ನೆಟ್ಟಿಗರು ಬಾಡಿಗಾರ್ಡ್ ವಿರುದ್ಧ ಮುಗಿಬಿದ್ದಿದ್ದಾರೆ. ಒಬ್ಬ ಬಳಕೆದಾರ ಕಮೆಂಟ್ ಮಾಡಿ, ಬಾಡಿಗಾರ್ಡ್‌ಗೆ ನಟಿಯ ಮೇಲೆ ಕನಿಷ್ಠ ಗೌರವವೂ ಇಲ್ಲ. ಇಂಥವರನ್ನು ಯಾರೂ ಇಷ್ಟಪಡುವುದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಇನ್ನೊಬ್ಬ ಇನ್‌ಸ್ಟಾಗ್ರಾಮ್ ಯೂಸರ್, ರಕ್ಷಣೆ ಮಾಡುವುದು ಸರಿ, ಆದರೆ ಜಾಕ್ವೆಲಿನ್ ಅವರನ್ನು ಆ ರೀತಿ ಮುಟ್ಟುವ ಹಕ್ಕನ್ನು ಇವನಿಗೆ ಕೊಟ್ಟವರು ಯಾರು? ನಟಿಯನ್ನು ಮುಟ್ಟದೆಯೇ ದೂರ ನಿಂತು ರಕ್ಷಿಸಬಹುದಿತ್ತಲ್ವಾ? ಎಂದು ಪ್ರಶ್ನಿಸಿದ್ದಾರೆ.
ಆದರೆ ಕೆಲವರು ಬಾಡಿಗಾರ್ಡ್ ಪರವಾಗಿಯೂ ಕಮೆಂಟ್ ಮಾಡಿದ್ದು, ಸೆಲೆಬ್ರಿಟಿಗಳು ಬೇರೆಯವರು ತಮ್ಮನ್ನು ಮುಟ್ಟಬಾರದು ಎಂದು ಮೊದಲೇ ಬಾಡಿಗಾರ್ಡ್‌ಗಳಿಗೆ ಸೂಚನೆ ನೀಡಿರುತ್ತಾರೆ. ಹಾಗಾಗಿ ಆತ ಜನರನ್ನು ದೂರ ಇಡಲು ಈ ರೀತಿ ಮಾಡಿದ್ದಾನೆ ಎಂದೂ ಅಭಿಪ್ರಾಯಪಟ್ಟಿದ್ದಾರೆ, (ಏಜನ್ಸೀಸ್).