ಭಾರತದ ಮೊದಲ ಹಾಗೂ ಏಕೈಕ ಸುಮೊ ಪಟು ಎಂಬ ಹೆಗ್ಗಳಿಕೆ ಮುಂಬೈ ಮೂಲದ ಹೇತಲ್ ದವೆಗೆ ಸಲ್ಲುತ್ತದೆ. ಇದೀಗ ಅವರ ಜೀವನಾಧಾರಿತ ಸಿನಿಮಾ ರಿಲೀಸ್ಗೆ ರೆಡಿಯಾಗಿದ್ದು, ಇತ್ತೀಚೆಗಷ್ಟೆ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಜಯಂತ್ ರೋಹಟ್ಗಿ ನಿರ್ದೇಶನದ ಈ ಬಯೋಪಿಕ್ನಲ್ಲಿ ಹೇತಲ್ ಪಾತ್ರದಲ್ಲಿ ಶ್ರಿಯಮ್ ಭಗ್ನಾನಿ ನಟಿಸಿದ್ದಾರೆ. ಜತೆಗೆ ಚೈತನ್ಯ ಶರ್ಮಾ, ಅನುಭಾ ತೇಹ್ಪುರಿ, ನಿತೇಶ್ ಪಾಂಡೆ, ರಾವ್ ಧೀರ್, ನೀಲಾಂಜನ್ ದತ್ತಾ ಪ್ರಮುಖ ತಾರಾಗಣದಲ್ಲಿದ್ದಾರೆ. ಹೇತಲ್ ಪಾತ್ರಕ್ಕಾಗಿ ನಾಯಕಿ ಶ್ರಿಯಮ್ ಹಲವು ತಿಂಗಳುಗಳ ಕಾಲ ಸುಮೊ ತರಬೇತಿ ಪಡೆದಿದ್ದಲ್ಲದೇ, 14 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. 2023ರಲ್ಲೇ ರಿಲೀಸ್ಗೆ ರೆಡಿಯಿದ್ದರೂ 2024ರ ಅಂತ್ಯದವರೆಗೆ ಟೋಕ್ಯೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಪಾಮ್ ಸ್ಪ್ರಿಂಗ್ಸ್ ಚಿತ್ರೋತ್ಸವ ಮತ್ತು ನ್ಯೂ ಯಾರ್ಕ್ ಇಂಡಿಯಾ ಫಿಲಂ ೆಸ್ಟಿವಲ್ ಸೇರಿ ವಿಶ್ವಾದ್ಯಂತ ಹಲವು ಚಲನಚಿತ್ರೋತ್ಸವಗಳಲ್ಲಿ ಸಿನಿಮಾನ ಪ್ರದರ್ಶನಕ್ಕೆ ಕಳುಹಿಸಲಾಗಿತ್ತು. ಇದೀಗ ಚಿತ್ರತಂಡ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲು ಮುಂದಾಗಿದ್ದು, ಇದೇ 23ರಂದು ಸಿನಿಮಾ ಬಿಡುಗಡೆಯಾಗಲಿದೆ.
ಮುಂಬೈ ಮೂಲದ ಹೇತಲ್ ದವೆ ಭಾರತದ ಮೊದಲ ಹಾಗೂ ಏಕೈಕ ಸುಮೊ ಕುಸ್ತಿಪಟು. ಆರನೇ ವಯಸ್ಸಿನಿಂದಲೇ ಜೂಡೋ ತರಬೇತಿ ಪಡೆಯುತ್ತಿದ್ದ ಅವರು, ಅಪ್ಪ ಮತ್ತು ಸಹೋದರನ ಬೆಂಬಲದಿಂದ ಕ್ರಮೇಣ ಸುಮೊದತ್ತ ಮುಖ ಮಾಡಿದರು. ಭಾರತದಲ್ಲಿ ಮಹಿಳಾ ಕುಸ್ತಿಪಟುಗಳಿಲ್ಲದ ಕಾರಣ ಪುರುಷ ಸುಮೊ ಪಟುಗಳ ಜತೆ ಸೆಣೆಸುತ್ತಿದ್ದ ಹೇತಲ್, 2009ರ ವಿಶ್ವ ಸುಮೊ ಸ್ಪರ್ಧೆಯಲ್ಲಿ ಭಾಗವಹಿಸಿದರು. ಆ ಮೂಲಕ ವಿಶ್ವಮಟ್ಟದಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಸುಮೊ ಪಟು ಎಂಬ ದಾಖಲೆಗೆ ಪಾತ್ರರಾದರು.