- ಮಾ.19ಕ್ಕೆ ಇಲ್ಲ ಯಶ್ ಅಭಿನಯದ 'ಟಾಕ್ಸಿಕ್' ರಿಲೀಸ್
- ಹಿಂದಿಯ 'ಧುರಂಧರ್ 2' ಜೊತೆ ಪೈಪೋಟಿಗಿಳಿಯದ ಟಾಕ್ಸಿಕ್
- ಇದೇ ಒಳ್ಳೆಯ ಸಮಯವೆಂದು ನಿರ್ಧರಿಸಿದ 'ಉಸ್ತಾದ್ ಭಗತ್ ಸಿಂಗ್' ಚಿತ್ರತಂಡ
ಬೆಂಗಳೂರು: ಇದೇ ಮಾ.19ಕ್ಕೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ತೆರೆಗೆ ಬರಲು ಫಿಕ್ಸ್ ಆಗಿತ್ತು. ದೇಶಾದ್ಯಂತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಏಕಕಾಲಕ್ಕೆ ರಿಲೀಸ್ ಆಗಲು ಸಜ್ಜಾಗಿತ್ತು. ಆದರೆ, ಇರಾನ್ ಮತ್ತು ಇಸ್ರೇಲಿ-ಅಮೆರಿಕ ನಡುವಿನ ಯುದ್ಧದ ಬಿಕ್ಕಟ್ಟಿನಿಂದ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದರಿಂದ ತಮ್ಮ ಸಿನಿಮಾಗೆ ವಿದೇಶಿ ನೆಲಗಳಲ್ಲಿ ಹಿನ್ನೆಡೆ ಉಂಟಾಗಬಹುದು ಎಂದು ಮುಂದಾಲೋಚಿಸಿದ ಚಿತ್ರತಂಡ, ಸದ್ಯ ದಿಢೀರ್ ಎಂಬಂತೆ ದಿನಾಂಕದಲ್ಲಿ ಬದಲಾವಣೆ ತಂದಿದೆ.
ಮಾ.19ರಿಂದ ಈಗ ಜೂನ್ 04ಕ್ಕೆ 'ಟಾಕ್ಸಿಕ್' ರಿಲೀಸ್ ಡೇಟ್ ಮುಂದೂಡಲಾಗಿದೆ. ರಣವೀರ್ ಸಿಂಗ್ ಅಭಿನಯದ ಬ್ಲಾಕ್ಬಸ್ಟರ್ ಹಿಟ್ 'ಧುರಂಧರ್ 2' ಕೂಡ ಮಾ.19ರಂದೇ ತೆರೆಕಾಣಲು ಸಜ್ಜಾಗಿದೆ. ಭಾರತೀಯ ಚಿತ್ರೋದ್ಯಮದಲ್ಲಿ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಅಗ್ರಸ್ಥಾನದಲ್ಲಿದ್ದ ಚಿತ್ರಗಳೆಂದರೆ ಅವು 'ಟಾಕ್ಸಿಕ್' ಮತ್ತು 'ಧುರಂಧರ್ 2'. ಇವರೆಡು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟಿಗೆ ಪೈಪೋಟಿ ಕೊಡಲಿವೆ ಹಾಗೂ ನಿರೀಕ್ಷೆಗೂ ಮೀರಿದ ಲಾಭವನ್ನು ತಂದುಕೊಡಲಿದೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದ್ರೆ, ಈಗ ದಿಢೀರ್ ರಿಲೀಸ್ ಡೇಟ್ ಬದಲಿಸಿರುವ ಚಿತ್ರತಂಡ ಬಾಕ್ಸ್ ಆಫೀಸ್ ಕ್ಲ್ಯಾಶ್ನಿಂದ ಹಿಂದೆ ಸರಿದಿರುವುದು ಬೇರೆ ಚಿತ್ರಗಳಿಗೆ ದಾರಿ ಮಾಡಿಕೊಟ್ಟಿದೆ.
ಮಾ.19ರಿಂದ 'ಟಾಕ್ಸಿಕ್' ಎಕ್ಸಿಟ್ ಆಗ್ತಿದ್ದಂತೆ, ಇದೇ ನಮಗೆ ಸರಿಯಾದ ಸಮಯ ಎಂದು ನಿರ್ಧರಿಸಿದ ಪವಾನ್ ಕಲ್ಯಾಣ್ ಅಭಿನಯದ 'ಉಸ್ತಾದ್ ಭಗತ್ ಸಿಂಗ್' ಚಿತ್ರದ ನಿರ್ಮಾಪಕರು, ಈ ಹಿಂದೆ ನಿಗದಿಪಡಿಸಿದ್ದ ದಿನಾಂಕವನ್ನು ದಿಢೀರ್ ರದ್ದುಗೊಳಿಸಿ, 'ಧುರಂಧರ್ 2' ಜೊತೆಗೆ ತೆರೆಗೆ ಬರಲು ಸಿದ್ಧವಾಗಿದೆ. ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು, ಒಂದು ವಾರ ಮುಂಚಿತವಾಗಿಯೇ ನಾವು ಚಿತ್ರಮಂದಿರಗಳಿಗೆ ಬರುತ್ತಿದ್ದೇವೆ ಎಂದು ತಿಳಿಸಿದೆ.
ಲೆಕ್ಕಾಚಾರಗಳೇ ಇದಕ್ಕೆ ಕಾರಣ...
ಟಾಕ್ಸಿಕ್ ಹೊರಬಿದ್ದ ಬೆನ್ನಲ್ಲೇ ತಮ್ಮ ರಿಲೀಸ್ ದಿನಾಂಕವನ್ನು ಬದಲಿಸಿಕೊಂಡಿರುವ ಉಸ್ತಾದ್ ಭಗತ್ ಸಿಂಗ್ ಚಿತ್ರತಂಡ, ಯುಗಾದಿ ಮತ್ತು ರಂಜಾನ್ ಹಬ್ಬಗಳ ಜೊತೆ ವಾರಾಂತ್ಯಗಳು ಸಿಗುವುದರಿಂದ ಚಿತ್ರಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಸಿನಿಮಾ ನೋಡುತ್ತಾರೆ ಎಂಬುದೇ ಲೆಕ್ಕಾಚಾರ. ಮತ್ತೊಂದೆಡೆ, ಬಾಕ್ಸ್ ಆಫೀಸ್ನಲ್ಲಿ ಉತ್ತಮ ಓಪನಿಂಗ್ ಸಿಗಬಹುದು ಎಂಬ ನಿರೀಕ್ಷೆ,(ಏಜೆನ್ಸೀಸ್).
ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಪವನ್ ಕಲ್ಯಾಣ್, ಶ್ರೀಲೀಲಾ ಮತ್ತು ರಾಶಿ ಖನ್ನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ದೇವಿ ಶ್ರೀ ಪ್ರಸಾದ್ ಮತ್ತು ಎಸ್.ಥಮನ್ ಅವರ ಸಂಗೀತ ಚಿತ್ರಕ್ಕಿದೆ. ಒಟ್ಟಾರೆ, ಟಾಕ್ಸಿಕ್ ಬದಲಿಗೆ ಧುರಂಧರ್ ಜೊತೆಗೆ ಪೈಪೋಟಿ ಕೊಡಲು ಬರುತ್ತಿರುವ ಉಸ್ತಾದ್ ಭಗತ್ ಸಿಂಗ್, ಬಾಕ್ಸ್ ಆಫೀಸ್ನಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).