- ಟಿ20 ವಿಶ್ವಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ 96 ರನ್‌ಗಳ ಅಂತರದಿಂದ ಭರ್ಜರಿ ಜಯವನ್ನು ಸಾಧಿಸಿದೆ
- ಈ ವೇಳೆ ಬಾಲಿವುಡ್ ತಾರೆಯರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಗೆಲುವನ್ನು ಸಂಭ್ರಮಿಸಿದರು
- ಭಾರತ ತಂಡ ಟ್ರೋಫಿಯನ್ನು ಕೈಯಲ್ಲಿ ಹಿಡಿದುಕೊಂಡಿರುವ ಚಿತ್ರವನ್ನು ಹಂಚಿಕೊಂಡ ಅಮಿತಾಬ್ ಬಚ್ಚನ್
Amitabh Bachchan: ಟಿ20 ವಿಶ್ವಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಭರ್ಜರಿ ಜಯವನ್ನು ಸಾಧಿಸಿತು. ಈ ವೇಳೆ ದೇಶ್ಯಾದ್ಯಂತ ಜನರು ವಿಜಯೋತ್ಸವನ್ನು ಆಚರಿಸುತ್ತಿದ್ದರೆ, ಇತ್ತ ಬಾಲಿವುಡ್ ತಾರೆಯರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮಿಸಿದರು. ಆದರೆ, ಎಲ್ಲದಿಕ್ಕಿಂತ ಹೆಚ್ಚಾಗಿ ಸದ್ದು ಮಾಡಿದ್ದು, ನಟ ಅಮಿತಾಬ್ ಬಚ್ಚನ್ ಅವರ ಎಕ್ಸ್ ಪೋಸ್ಟ್..
ಪೋಸ್ಟ್ನಲ್ಲೇನಿದೆ?
ಭಾರತ ತಂಡ ಟ್ರೋಫಿಯನ್ನು ಕೈಯಲ್ಲಿ ಹಿಡಿದುಕೊಂಡಿರುವ ಚಿತ್ರವನ್ನು ಹಂಚಿಕೊಳ್ಳುವುದರ ಜೊತೆಗೆ ಈ ಬಾರಿ ನಾನು ಪಂದ್ಯ ನೋಡಲಿಲ್ಲ ಹಾಗಾಗಿ ನಾವು ಗೆದ್ದೆವು ಎಂದು ಬರೆದು ಪೋಸ್ಟ್ನ್ನು ಹಂಚಿಕೊಂಡಿದ್ದರು.
ಆದಾಗ್ಯೂ, ಈ ಸಾಲುಗಳಲ್ಲಿ ಅಮಿತಾಬ್ ಬಚ್ಚನ್ ತಮಾಷೆಯಾಗಿ ತಮ್ಮ ಹಳೆಯ ನಂಬಿಕೆಯೊಂದನ್ನು ಉಲ್ಲೇಖಿಸಿದ್ದಾರೆ. ಸಾಮಾನ್ಯವಾಗಿ ನಾನು ಭಾರತದ ಪಂದ್ಯ ಇರುವಾಗ ನೋಡುವುದಿಲ್ಲ. ಏಕೆಂದರೆ ನಾನು ಪಂದ್ಯವನ್ನು ನೋಡಿದರೆ ಅವರು ಸೋಲುತ್ತಾರೆ. ಹಾಗಾಗಿ ನೋಡುವುದಿಲ್ಲ ಎಂಬುದು ಅವರ ಸಾಲಿನ ಅರ್ಥವಾಗಿತ್ತು.
ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ ಅನೇಕ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಒಬ್ಬ ಬಳಕೆದಾರರು ಸರ್, ಮುಂದಿನ ಎಲ್ಲಾ ಪಂದ್ಯಗಳಿಗೂ ನೀವು ಇದನ್ನೇ ಫಾಲೋ ಮಾಡಿ ಎಂದು ಬರೆದಿದ್ದಾರೆ.
ಏತನ್ಮಧ್ಯೆ, ಕರೀನಾ ಕಪೂರ್, ಅನುಷ್ಕಾ ಶರ್ಮಾ, ಶಾರುಖ್ ಖಾನ್, ಅಕ್ಷಯ್ ಕುಮಾರ್, ಅನಿಲ್ ಕಪೂರ್ ಮತ್ತು ಮಹೇಶ್ ಬಾಬು ಸೇರಿದಂತೆ ಇತರರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನಾ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.
ಚಾಂಪಿಯನ್ ಆದ ಭಾರತ
ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳ ಬೃಹತ್ ಅಂತರದಿಂದ ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವಕಪ್ (T20 WorldCup Final ) ಮುಡಿಗೇರಿಸಿಕೊಂಡಿತು. ಈ ಗೆಲುವಿನೊಂದಿಗೆ ಭಾರತವು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ (3 ಬಾರಿ) ವಿಶ್ವಕಪ್ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ (89) ಮತ್ತು ಅಭಿಷೇಕ್ ಶರ್ಮಾ (52) ಸ್ಫೋಟಕ ಆರಂಭ ನೀಡಿದರು. ಪವರ್‌ಪ್ಲೇನಲ್ಲಿ ಕೇವಲ 6 ಓವರ್‌ಗಳಲ್ಲಿ 92 ರನ್ ಚಚ್ಚಿದ ಈ ಜೋಡಿ ಕಿವೀಸ್ ಬೌಲರ್‌ಗಳನ್ನು ಚೆಂಡಾಡಿದರು.
ಒನ್ಡೌನ್ ಆಗಿ ಬಂದ ಇಶಾನ್ ಕಿಶನ್ (54) ಕೂಡ ಅರ್ಧಶತಕ ಸಿಡಿಸಿ ರನ್ ವೇಗವನ್ನು ಕಾಯ್ದುಕೊಂಡರು. ಅಂತಿಮ ಹಂತದಲ್ಲಿ ಶಿವಂ ದುಬೆ ಕೇವಲ 8 ಎಸೆತಗಳಲ್ಲಿ 26 ರನ್ ಚಚ್ಚುವ ಮೂಲಕ ಭಾರತದ ಮೊತ್ತವನ್ನು 255/5 ಕ್ಕೆ ತಲುಪಿಸಿದರು. ಇದು ಟಿ20 ವಿಶ್ವಕಪ್ ಫೈನಲ್ ಇತಿಹಾಸದ ಗರಿಷ್ಠ ಮೊತ್ತವಾಗಿದೆ.
ಗೆಲುವಿನ ಅಕ್ಷರ ಬರೆದ ಬುಮ್ರಾ
ಬೃಹತ್ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಅಪಾಯಕಾರಿ ಫಿನ್ ಅಲೆನ್ರನ್ನು ಅಕ್ಷರ್ ಪಟೇಲ್ ಪೆವಿಲಿಯನ್‌ಗೆ ಕಳುಹಿಸಿದರೆ, ಇದಾದ ಬಳಿಕ ಬಂದ ರಚಿನ್ ರವೀಂದ್ರ ವಿಕೆಟ್ನ್ನು ಜಸ್ಪ್ರೀತ್ ಬುಮ್ರಾ ಪಡೆದರು. ಟಿಮ್ ಸೀಫರ್ಟ್ (52) ಪ್ರತಿರೋಧ ತೋರಿದರೂ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಜಾಲಕ್ಕೆ ಕಿವೀಸ್ ತತ್ತರಿಸಿತು.
ಪಂದ್ಯದ ಅಂತಿಮ ಹಂತದಲ್ಲಿ ಮತ್ತೆ ಅಬ್ಬರಿಸಿದ ಬುಮ್ರಾ, ಜೇಮ್ಸ್ ನೀಶಮ್ ಮತ್ತು ಮಿಚೆಲ್ ಸ್ಯಾಂಟ್ನರ್ ವಿಕೆಟ್ ಪಡೆದು ಭಾರತದ ಗೆಲುವನ್ನು ಖಚಿತಪಡಿಸಿದರು. ಬುಮ್ರಾ ನಿಖರ ಯಾರ್ಕರ್‌ಗಳು ಮತ್ತು ಸ್ಲೋಯರ್ ಬಾಲ್‌ಗಳಿಗೆ ಕಿವೀಸ್ ಬ್ಯಾಟರ್‌ಗಳ ಬಳಿ ಉತ್ತರವಿರಲಿಲ್ಲ. ಅಂತಿಮವಾಗಿ ಭಾರತವು ದೊಡ್ಡ ಅಂತರದ ಜಯ ಸಾಧಿಸಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿತು (ಏಜೆನ್ಸೀಸ್).