ತಮಗಾದ ಕಹಿ ಅನುಭವ ಹಾಗೂ ಕಿರುಕುಳದ ಬಗ್ಗೆ ಹಂಚಿಕೊಂಡ ನಟಿ ಪ್ರಿಯಾ ಬಾಪಟ್
- ಹಾಡಿನ ಶೂಟಿಂಗ್ ವೇಳೆ ಸಹನಟ ಪದೇ ಪದೇ ಮುತ್ತು ಕೊಡ್ತಿದ್ದ!
- ತಮಗಾದ ಕಹಿ ಅನುಭವ ಹಾಗೂ ಕಿರುಕುಳದ ಬಗ್ಗೆ ಹಂಚಿಕೊಂಡ ನಟಿ ಪ್ರಿಯಾ ಬಾಪಟ್
- ಸಹನಟನ ಅತಿರೇಕದ ವರ್ತನೆಯಿಂದ ಬೇಸತ್ತು ಹೋಟೆಲ್ ರೂಮ್‌ನಲ್ಲಿ ಕಣ್ಣೀರಿಟ್ಟಿದ್ದ ನಟಿ
ಮುಂಬೈ: ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಅಭಿನಯದ ಮೂಲಕ ಖ್ಯಾತಿ ಗಳಿಸಿರುವ ನಟಿ ಎಂದರೆ ಅದು ಪ್ರಿಯಾ ಬಾಪಟ್.
ಇತ್ತೀಚೆಗೆ ಪ್ರಿಯಾ ಬಾಪಟ್ (Actress Priya Bapat) ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಎದುರಿಸಿದ ಕಹಿ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಸಹನಟನೊಬ್ಬ ಮಿತಿಮೀರಿ ವರ್ತಿಸಿದಾಗ ತಮಗಾದ ಮುಜುಗರ ಮತ್ತು ಅಸಹಾಯಕತೆಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ನಾನು ಮೊದಲೇ ವಿರೋಧ ವ್ಯಕ್ತ ಪಡಿಸಿದ್ದೆ
ಸಂದರ್ಶನವೊಂದರಲ್ಲಿ ಮಾಡನಾಡಿರುವ ಪ್ರಿಯಾ ಬಾಪಟ್, ಅದು ನನ್ನ ವೃತ್ತಿಜೀವನದ ಆರಂಭದ ದಿನಗಳು. ಸಿನಿಮಾದಲ್ಲಿ ಒಂದು ಕಿಸ್ಸಿಂಗ್ (ಚುಂಬನದ) ದೃಶ್ಯವಿತ್ತು. ಕಥೆಗೆ ಆ ಸೀನ್ ಅಷ್ಟಾಗಿ ಹೊಂದಿಕೆಯಾಗುತ್ತಿಲ್ಲ ಎಂದು ನನಗೆ ಸ್ಕ್ರಿಪ್ಟ್ ಓದುವಾಗಲೇ ಅನಿಸಿತ್ತು.
ಹೀಗಾಗಿ ನಾನು ನಿರಂತರವಾಗಿ ನಿರ್ದೇಶಕರಲ್ಲಿ ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದೆ. ಇಲ್ಲಿ ಈ ದೃಶ್ಯದ ಅವಶ್ಯಕತೆ ಏನಿದೆ? ಇದನ್ನು ಎಂದು ಕೇಳುತ್ತಿದ್ದೆ. ಆದರೆ, ಕೊನೆಗೆ ನಟಿಯಾಗಿ ನನಗೊಂದು ಚಾಲೆಂಜ್ ಎಂದುಕೊಂಡು ಆ ದೃಶ್ಯ ಮಾಡಲು ಒಪ್ಪಿಕೊಂಡೆ ಎಂದು ಹೇಳಿದ್ದಾರೆ.
ಹಾಡಿನ ಶೂಟಿಂಗ್ ವೇಳೆ ಮಿತಿಮೀರಿದ ಸಹನಟ!
ಆದರೆ ಹಾಡಿನ ಶೂಟಿಂಗ್ ಸಮಯದಲ್ಲಿ, ಆ ದೃಶ್ಯದ ಚಿತ್ರೀಕರಣದ ವೇಳೆ ಪುರುಷ ಸಹನಟ ತನಗೆ ಮೊದಲೇ ಹೇಳಿದ್ದಕ್ಕಿಂತ ಹೆಚ್ಚಾಗಿ ವರ್ತಿಸಲು ಶುರುಮಾಡಿದ. ಹಾಡಿನ ಶೂಟಿಂಗ್‌ನಲ್ಲಿ ಆತ ತನ್ನಿಷ್ಟದಂತೆ ಇಂಪ್ರೂವ್ ಮಾಡುತ್ತಲೇ ಇದ್ದ. ನನಗೆ ಪದೇ ಪದೇ ಮುತ್ತು ಕೊಡುತ್ತಿದ್ದ. ಆ ಸಮಯದಲ್ಲಿ ನನಗೆ ಏನು ಮಾಡಬೇಕೆಂದೇ ತೋಚಲಿಲ್ಲ. ನನಗೆ ಧ್ವನಿ ಎತ್ತಲು ಧೈರ್ಯ ಬರಲಿಲ್ಲ, ಅದನ್ನು ಹೇಗೆ ಎದುರಿಸಬೇಕೆಂದು ನನಗೆ ಗೊತ್ತಿರಲಿಲ್ಲ ಎಂದು ಪ್ರಿಯಾ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಕೆಲಸ ಮುಗಿದ ಮೇಲೂ ಕಿರಿಕಿರಿ!
ಆ ನಟನ ಕಾಟ ಕೇವಲ ಸೆಟ್‌ಗೆ ಮಾತ್ರ ಸೀಮಿತವಾಗಿರಲಿಲ್ಲ. ಶೂಟಿಂಗ್ ಮುಗಿದ ನಂತರವೂ ಪ್ರಿಯಾಗೆ ಮೆಸೇಜ್ ಮಾಡುವುದು, ಒಟ್ಟಿಗೆ ಈಜು ಕಲಿಯಲು ಬಾ ಎಂದು ಕರೆಯುವುದು, ಲಂಚ್ ಹಾಗೂ ಬ್ರೇಕ್‌ಫಾಸ್ಟ್‌ಗೆ ಆಹ್ವಾನಿಸುವ ಮೂಲಕ ಅನಗತ್ಯವಾಗಿ ಹತ್ತಿರವಾಗಲು ಪ್ರಯತ್ನಿಸುತ್ತಿದ್ದನಂತೆ. ಆದರೆ ಪ್ರಿಯಾ ಆತನ ಎಲ್ಲಾ ಆಫರ್‌ಗಳನ್ನು ಕಡಾಖಂಡಿತವಾಗಿ ತಿರಸ್ಕರಿಸಿದ್ದರು.
ಮುಂಬೈನಿಂದ ಭೋಪಾಲ್‌ಗೆ ಓಡೋಡಿ ಬಂದ ಪತಿ
ಈ ಸಿನಿಮಾದ ಶೂಟಿಂಗ್ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಯುತ್ತಿತ್ತು. ಸೆಟ್‌ನಲ್ಲಿ ನಡೆಯುತ್ತಿದ್ದ ಈ ಎಲ್ಲಾ ಕಿರುಕುಳದಿಂದ ಬೇಸತ್ತಿದ್ದ ಪ್ರಿಯಾ, ಪ್ರತಿ ರಾತ್ರಿ ಹೋಟೆಲ್ ರೂಮ್‌ನಿಂದ ಪತಿ ಉಮೇಶ್ ಕಾಮತ್‌ಗೆ ಕರೆ ಮಾಡಿ ಅಳುತ್ತಿದ್ದರಂತೆ. ಪತ್ನಿಯ ಕಷ್ಟವನ್ನು ಕೇಳಿದ ಉಮೇಶ್ ಮುಂಬೈನಿಂದ ನೇರವಾಗಿ ಭೋಪಾಲ್‌ಗೆ ವಿಮಾನ ಹತ್ತಿ ಬಂದಿದ್ದಾರೆ. ಅಲ್ಲದೆ ಸೆಟ್‌ನಲ್ಲೇ ಪ್ರಿಯಾ ಜೊತೆ ಮೂರು ದಿನಗಳ ಕಾಲ ಇದ್ದು ಅವಳಿಗೆ ಧೈರ್ಯ ತುಂಬಿದ್ದರಂತೆ.
ನನ್ನ ಇಡೀ ಕೆರಿಯರ್‌ನಲ್ಲಿ ನಾನಿಂತಹ ಕೆಟ್ಟ ಅನುಭವ ಎದುರಿಸಿದ್ದು ಆ ಒಂದು ಬಾರಿ ಮಾತ್ರ ಎಂದು ಪ್ರಿಯಾ ಬಾಪಟ್ ಹೇಳಿದ್ದಾರೆ. ಸಿನಿಮಾ ರಂಗದಲ್ಲಿ ಹೊಸಬರಾಗಿ ಬರುವ ನಟಿಯರು ಇಂತಹ ಸಂದರ್ಭಗಳನ್ನು ಹೇಗೆ ಎದುರಿಸಬೇಕೆಂಬ ಗೊಂದಲದಲ್ಲಿರುತ್ತಾರೆ ಎಂಬುದಕ್ಕೆ ಪ್ರಿಯಾ ಹಂಚಿಕೊಂಡ ಈ ಸ್ಟೋರಿ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ವೇದಿಕೆಯಾಗಿದೆ, (ಏಜನ್ಸೀಸ್).