ನಟ ಅನ್ನು ಕಪೂರ್, ನಟಿ ತಮನ್ನಾ ಭಾಟಿಯಾ
- ಟಾಲಿವುಡ್, ಬಾಲಿವುಡ್, ಕಾಲಿವುಡ್ನಲ್ಲಿ ತಮನ್ನಾ ಸಖತ್ ಡ್ಯಾನ್ಸ್
- ನಟಿ ಹೆಜ್ಜೆ ಹಾಕಿದ ಬಹುತೇಕ ಹಾಡುಗಳು ಸೂಪರ್ಹಿಟ್
- ಮಿಲ್ಕಿ ಬ್ಯೂಟಿಯನ್ನು ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡ ಬಾಲಿವುಡ್ ಹಿರಿಯ ನಟ ಅನ್ನು ಕಪೂರ್
- ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಆಕ್ರೋಶಕ್ಕೆ ಮಣಿದು ಕ್ಷಮಾಪಣೆ
ಮುಂಬೈ: ಸೌತ್ ಸಿನಿ ಇಂಡಸ್ಟ್ರಿಯ 'ಮಿಲ್ಕಿ ಬ್ಯೂಟಿ' ಮೈಮಾಟ ಕುರಿತು ಮಾತನಾಡಿದ್ದ ಬಾಲಿವುಡ್ ಹಿರಿಯ ನಟ ಅನ್ನು ಕಪೂರ್ ಇದೀಗ ನೆಟ್ಟಿಗರ ಆಕ್ರೋಶಕ್ಕೆ ಮಣಿದು ನಟಿಗೆ ಕ್ಷಮಾಪಣೆ ಕೋರಿದ್ದಾರೆ.
ಸಿನಿಮಾಗಳಿಗಿಂತ ಹೆಚ್ಚಾಗಿ ಚಿತ್ರದ ವಿಶೇಷ ಹಾಡುಗಳಲ್ಲಿ ಮೈಚಳಿ ಬಿಟ್ಟು ಕುಣಿಯುವ ತಮನ್ನಾ, ತಮ್ಮ ಅಭಿಮಾನಿಗಳನ್ನು ರಂಜಿಸುವುದರ ಜೊತೆಗೆ ಹಾಡಿನ ಸೂಪರ್ಹಿಟ್ಗೆ ಕಾರಣವಾಗುತ್ತಿದ್ದಾರೆ. ಕಳೆದ ವರ್ಷ ತೆರೆಕಂಡ 'ಸ್ತ್ರೀ 2' ಚಿತ್ರದ 'ಆಜ್ ಕಿ ರಾತ್' ಸಾಂಗ್ನಲ್ಲಿ ಮಿಲ್ಕಿ ಬ್ಯೂಟಿಯ ಡ್ಯಾನ್ಸ್ಗೆ ನೋಡುಗರು ಫಿದಾ ಆಗಿದ್ದಾರೆ. ಇದೇ ವಿಷಯವನ್ನು ಮುಂದಿಟ್ಟು ತಮನ್ನಾರನ್ನು ಹೊಗಳಿದ ಹಿರಿಯ ನಟ, ತಮನ್ನಾ ಅವರದ್ದು ಮಿಲ್ಕಿ ದೇಹ ಎಂದು ಹೇಳಿದ್ದರು. ಈ ಕುರಿತಾಗಿ ಕಡೆಗೂ ಅವರು ಸ್ಪಷ್ಟನೆ ನೀಡಿದ್ದಾರೆ.
ಕಳೆದ ವರ್ಷ ಅಮೆರಿಕ ಪ್ರವಾಸದಲ್ಲಿದ್ದಾಗ ಆಡಿದ ಮಾತುಗಳಿಗೆ ತಾನು ಎದುರಿಸಿದ ಟೀಕೆಗಳ ಬಗ್ಗೆ ಸಿದ್ಧಾರ್ಥ್ ಕಣ್ಣನ್ ಅವರ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ ಹಿರಿಯ ನಟ, ಜನರು ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಮತ್ತು ಭಾಷಾ ವ್ಯತ್ಯಾಸದಿಂದಾಗಿ ಇಂತಹ ಅಭಿಪ್ರಾಯಗಳು ಉದ್ಭವಿಸಿತು. ಅದೇ ಪದಗಳನ್ನು ನಾನೇನಾದರೂ ಇಂಗ್ಲಿಷ್‌ನಲ್ಲಿ 'ಮಿಲ್ಕ್ ಬಾಡಿ' ಎಂದು ಹೊಗಳಿದ್ದರೆ, ಯಾರೂ ಕಿಡಿಕಾರುತ್ತಿರಲಿಲ್ಲ. ಆದರೆ, ನಾನು ಅದನ್ನು ಹಿಂದಿಯಲ್ಲಿ ಹೇಳಿದ್ದೇ ತಪ್ಪಾಯ್ತು ಎಂದರು.
ಭಾಷೆ ಬದಲಾದ ಮಾತ್ರಕ್ಕೆ, ಒಬ್ಬ ವ್ಯಕ್ತಿಯನ್ನು ಹೊಗಳುವುದರ ಹಿಂದಿನ ಉದ್ದೇಶ ಬದಲಾಗುವುದಿಲ್ಲ ಮತ್ತು ಯಾರೊಬ್ಬರ ನೋಟವನ್ನು ಹೊಗಳುವುದು ಎಂದರೆ ಅವರನ್ನು ಕೀಳಾಗಿ ನೋಡ್ತಿದ್ದೇವೆ ಎಂದರ್ಥವಲ್ಲ. ತಮನ್ನಾ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ. ಮತ್ತು ನನ್ನ ಮಾತುಗಳಿಂದ ಆಕೆಯ ಮನಸ್ಸಿಗೆ ಏನಾದರೂ ನೋವಾಗಿದ್ದರೆ ಖಂಡಿತ ಕ್ಷಮೆಯಾಚಿಸಲು ಹಿಂಜರಿಯುವುದಿಲ್ಲ. ಅಗತ್ಯಬಿದ್ದರೆ ಅವರ ಕಾಲು ಹಿಡಿದು ಕ್ಷಮೆ ಕೇಳಲು ನನಗೇನು ಬೇಸರವಿಲ್ಲ ಎಂದಿದ್ದಾರೆ.
ನನ್ನ ಮನಸ್ಸಿನಲ್ಲಿ ಯಾವುದೇ ಕೆಟ್ಟ ಯೋಚನೆ ಇಲ್ಲದಿರುವಾಗ ಅದು ನನಗೆ ದೊಡ್ಡ ವಿಷಯ ಅಂತೇನು ಅನಿಸಲ್ಲ. ಕಲಾವಿದರ ಪ್ರತಿಭೆ ಮತ್ತು ನೋಟವನ್ನು ಒಬ್ಬ ಅಭಿಮಾನಿಯಾಗಿ ಮಾತ್ರ ನೋಡುತ್ತೇನೆ ಎಂದು ಹೇಳುವ ಮೂಲಕ ಈ ವಿವಾದಕ್ಕೆ ಪುಲ್ ಸ್ಟಾಪ್ ಇಡಲು ಪ್ರಯತ್ನಿಸಿರುವುದು ಇಲ್ಲಿ ಸ್ಪಷ್ಟವಾಗಿದೆ. ಈ ಕುರಿತಂತೆ ಇಲ್ಲಿಯವರೆಗೆ ತಮನ್ನಾ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಿಲ್ಲ. ಮುಂದೇನಾದರೂ ಹೇಳ್ತಾರಾ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).