Hema Malini ಚಿತ್ರ Instagram
ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯು ಅಂಗೀಕಾರಗೊಳ್ಳಲು ವಿಫಲವಾಗಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಂಸದೆ ಹೇಮಾ ಮಾಲಿನಿ (Hema Malini) ಸಂಸತ್ತಿನಲ್ಲಿ ನಡೆದ ಈ ಘಟನೆಯನ್ನು ಮಹಿಳೆಯರ ಪಾಲಿಗೆ ದುಃಖದ ದಿನ ಎಂದು ಬಣ್ಣಿಸಿದ್ದಾರೆ.
ಪೋಸ್ಟ್ನಲ್ಲೇನಿದೆ?
ಮಸೂದೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಹೇಮಾ ಮಾಲಿನಿ ಅತ್ಯಂತ ಭಾವುಕರಾಗಿ ಟ್ವೀಟ್ ಮಾಡಿದ್ದು, ರಾಷ್ಟ್ರೀಯ ವ್ಯವಹಾರಗಳಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಎದುರು ನೋಡುತ್ತಿದ್ದ ಮಹಿಳೆಯರಿಗೆ ಇಂದು ಕರಾಳ ದಿನವಾಗಿದೆ. ಆದಾಗ್ಯೂ, ವೈಯಕ್ತಿಕವಾಗಿ, ಮತದಾನಕ್ಕೆ ಸ್ವಲ್ಪ ಮೊದಲು ಮಸೂದೆಯ ಮಹತ್ವದ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿದ್ದರಿಂದ ನನಗೆ ಸಾಕಷ್ಟು ನಿರಾಶೆಯಾಯಿತು.
ನಮ್ಮ ಪ್ರಧಾನಿ ಮೋದಿ ಅವರು ಇಂದು ರಾತ್ರಿ 8:30 ಕ್ಕೆ ಎಲ್ಲಾ ಮಹಿಳೆಯರಿಗೆ ಈ ಮಸೂದೆಯ ಮಹತ್ವದ ಕುರಿತು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ನೀವೆಲ್ಲರೂ ಅವರ ಭಾಷಣವನ್ನು ಆಲಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆಯಲ್ಲಿ ವಿಫಲವಾಗಿರುವುದರ ಬಗ್ಗೆ ನಟಿ ಕಂಗನಾ ರನೌತ್ ಮಾತನಾಡಿದ್ದು, ಈ ಘಟನೆ ನನಗೆ ವೈಯಕ್ತಿಕ ನಷ್ಟ ಮತ್ತು ನಾಚೀಕೆಗೇಡಿನ ಸಂಗತಿಯಾಗಿದೆ. ಇದಕ್ಕಿಂತ ದುಃಖಕರ ಮತ್ತು ನೋವಿನಿಂದ ಕೂಡಿದ ದಿನ ಇನ್ನೊಂದಿಲ್ಲ. ಆದಾಗ್ಯೂ, ಕಾಂಗ್ರೆಸ್ ಪಕ್ಷ ಇಂದು ಎಲ್ಲಾ ಮಿತಿಗಳನ್ನು ದಾಟಿದೆ. ಮಹಿಳೆಯರ ಹಕ್ಕುಗಳಿಗಾಗಿ ತಂದ ಮಸೂದೆಯನ್ನು ಬೆಂಬಲಿಸುವ ಬದಲು, ಅದನ್ನು ತಡೆಯುವ ಮೂಲಕ ಸಂಸತ್ತಿನ ಘನತೆಗೆ ಚ್ಯುತಿ ತಂದಿದೆ ಟೀಕಿಸಿದರು.
ಮಸೂದೆಗೆ ಸೋಲು..
ಸಂಸತ್ತಿನಲ್ಲಿ ನಡೆದ ಮತದಾನದ ವಿವರಗಳ ಪ್ರಕಾರ, ಚರ್ಚೆಯ ಬಳಿಕ ನಡೆದ ಮತದಾನದಲ್ಲಿ ಒಟ್ಟು 528 ಸದಸ್ಯರು ಭಾಗವಹಿಸಿದ್ದರು. ಈ ಪೈಕಿ 298 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 230 ಸದಸ್ಯರು ಮಸೂದೆಯನ್ನು ವಿರೋಧಿಸಿ ಮತ ಹಾಕಿದರು. ಸಾಂವಿಧಾನಿಕ ತಿದ್ದುಪಡಿ ಮಸೂದೆಯು ಅಂಗೀಕಾರವಾಗಲು ಸದನದಲ್ಲಿ ಹಾಜರಿದ್ದು ಮತ ಚಲಾಯಿಸುವ ಸದಸ್ಯರ ಪೈಕಿ ಕನಿಷ್ಠ ಮೂರನೇ ಎರಡರಷ್ಟು (ಅಂದರೆ ಸುಮಾರು 326 ಮತಗಳು) ಬೆಂಬಲದ ಅಗತ್ಯವಿತ್ತು. ಆದರೆ ಸರ್ಕಾರದ ಪರವಾಗಿ ಚಲಾವಣೆಯಾಗಿದ್ದು 298 ಮತಗಳು.
ಇಂಡಿಯಾ ಕೂಟದ ಬಹುತೇಕ ಎಲ್ಲಾ ಪಕ್ಷಗಳು ಈ ಮಸೂದೆಗಳನ್ನು ಒಗ್ಗಟ್ಟಿನಿಂದ ವಿರೋಧಿಸಿದ್ದು ಈ ಸೋಲಿಗೆ ಪ್ರಮುಖ ಕಾರಣವಾಗಿದೆ. ಹೊಸ ಜನಗಣತಿಯಿಲ್ಲದೆ ಕ್ಷೇತ್ರ ಪುನರ್ವಿಂಗಡಣೆ ಮಾಡುವುದು ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆ ತರುತ್ತದೆ ಮತ್ತು ಇದು ಒಬಿಸಿ ಸಮುದಾಯವನ್ನು ನಿರ್ಲಕ್ಷಿಸುವ ಪ್ರಯತ್ನ ಎಂದು ವಿರೋಧ ಪಕ್ಷಗಳು ವಾದಿಸಿದವು. 2029ರ ಚುನಾವಣೆಯಿಂದ ಮೀಸಲಾತಿ ಜಾರಿಯಾಗಲಿದೆ ಎಂಬ ಸರ್ಕಾರದ ಪ್ರಸ್ತಾಪವನ್ನು ಚುನಾವಣಾ ಗಿಮಿಕ್ ಎಂದು ಕರೆದಿದ್ದ ವಿಪಕ್ಷಗಳು, ಅಂತಿಮವಾಗಿ ಸದನದಲ್ಲಿ ಮಸೂದೆಯನ್ನು ತಡೆಯುವಲ್ಲಿ ಯಶಸ್ವಿಯಾಗಿವೆ (ಏಜೆನ್ಸೀಸ್).