ಸಂಸ್ಕೃತಿ ಜಯನಾ, ಆನಂದಿಬೆನ್​ ಪಟೇಲ್​ 
ಬಾಲಿವುಡ್

ಬಣ್ಣದ ಲೋಕಕ್ಕೆ ಬಂದ ಗುಜರಾತ್ ಮಾಜಿ ಸಿಎಂ ಆನಂದಿಬೆನ್ ಮೊಮ್ಮಗಳು ಸಂಸ್ಕೃತಿ ಜಯನಾ

ಪ್ರಮುಖ ಮುಖ್ಯಾಂಶಗಳು

  • ಸಿನಿಮಾ ರಂಗಕ್ಕೆ ಬಂದ ಉತ್ತರ ಪ್ರದೇಶ ರಾಜ್ಯಪಾಲರ ಮೊಮ್ಮಗಳು
  • ಪೌರಾಣಿಕ ಚಿತ್ರದ ಸತ್ಯಭಾಮೆ ಪಾತ್ರದಲ್ಲಿ ನಟಿ
  • ಮೇ 7ಕ್ಕೆ ಸಿನಿಮಾ ತೆರೆಗೆ
ರಾಜಕೀಯ ರಂಗಕ್ಕೂ ಮತ್ತು ಸಿನಿಮಾ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಗಳಿಸಿದ ಮೇಲೆ ರಾಜಕೀಯ ಸೇರುವವರ ಮಧ್ಯೆಯೇ ರಾಜಕೀಯ ಹಿನ್ನೆಲೆ ಇರುವ ಕುಟುಂಬದ ಸದಸ್ಯರು ಕೂಡ ಸಿನಿಮಾ ರಂಗ ಪ್ರವೇಶಿಸಿದ ಸಾಕಷ್ಟು ಉದಾಹರಣೆಗಳಿವೆ. ಇದೀಗ ಗುಜರಾತ್ ಮಾಜಿ ಸಿಎಂ, ಉತ್ತರಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಮೊಮ್ಮಗಳು ಸಂಸ್ಕೃತಿ ಜಯಾನಾ ಬಣ್ಣದ ಲೋಕ ಪ್ರವೇಶಿಸಿದ್ದಾರೆ. ಹೌದು, ಆನಂದಿ ಬೆನ್ ಪಟೇಲ್ ಪುತ್ರಿ ಅನರ್ ಪಟೇಲ್ ಮಗಳಾದ ಸಂಸ್ಕೃತಿ ‘ಕೃಷ್ಣಾವತಾರಂ ಭಾಗ 1: ಹೃದಯಂ’ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಟ್ರೇಲರ್ ರಿಲೀಸ್ ಆಗಿದ್ದು, ಇಲ್ಲಿ ಸಂಸ್ಕೃತಿ ‘ಸತ್ಯಭಾಮೆ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡೆಲಿಂಗ್ ಕ್ಷೇತ್ರದ ಜತೆಗೆ ಈ ಹಿಂದೆ ‘ರೂಪ್ ರಾಧಾ ಕಾ’ ಎಂಬ ಮ್ಯೂಸಿಕ್ ವಿಡಿಯೋ ಮೂಲಕ ಸಂಸ್ಕೃತಿ ಬಣ್ಣದ ಲೋಕಕ್ಕೆ ಪರಿಚಯವಾಗಿದ್ದರು. ಇದೀಗ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ‘ಕೃಷ್ಣಾವತಾರಂ ಭಾಗ 1’ ಪೌರಾಣಿಕ ಚಿತ್ರವಾಗಿದ್ದು, ಕೃಷ್ಣನ ಲೀಲೆಯ ಸುತ್ತ ಸುತ್ತುತ್ತದೆ. ಹಾರ್ದಿಕ್ ಗಜ್ಜರ್ ಈ ಚಿತ್ರಕ್ಕೆ ಆ್ಯಕ್ಷನ್ -ಕಟ್ ಹೇಳುತ್ತಿದ್ದಾರೆ. ಕೃಷ್ಣನ ಪಾತ್ರದಲ್ಲಿ ಸಿದ್ಧಾರ್ಥ ಗುಪ್ತ, ರಾಧೆಯಾಗಿ ಕನ್ನಡತಿ ಸುಶ್ಮಿತಾ ಭಟ್, ರುಕ್ಮಿಣಿಯಾಗಿ ನಿವಾಶಿಯ್ನಿ ಕೃಷ್ಣನ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೇ 7ಕ್ಕೆ ‘ಕೃಷ್ಣಾವತಾರಂ ಭಾಗ 1: ಹೃದಯಂ’ ತೆರೆಗೆ ಬರಲಿದೆ. -ಏಜೆನ್ಸೀಸ್

ಯೋಗಿ ಭೇಟಿ ಮಾಡಿದ ತಂಡ

ಬಿಡುಗಡೆಗೆ ಸಿದ್ಧವಾಗಿರುವ ‘ಕೃಷ್ಣಾವತಾರಂ ಭಾಗ 1’ ಚಿತ್ರತಂಡ, ಶುಕ್ರವಾರ (ಏ. 17) ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿದೆ. ಲಕ್ನೋದ ಸಿಎಂ ನಿವಾಸದಲ್ಲಿ ಭೇಟಿ ಮಾಡಿದ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದು, ಯೋಗಿ ಆದಿತ್ಯನಾಥ ತಂಡಕ್ಕೆ ಶುಭ ಕೋರಿದ್ದಾರೆ.