- ಚಿತ್ರರಂಗಕ್ಕೆ ಬರುವ ಮೊದಲು 3 ಆ್ಯಡ್ನಲ್ಲಿ ನಟಿಸಿದ್ದಕ್ಕೆ 5000 ರೂ. ಸಂಭಾವನೆ
- ಸಣ್ಣ ಹೆಜ್ಜೆಗಳಿಂದ ಪಯಣ ಆರಂಭಿಸಿದ ನಟಿ ಇಂದು ಮಿಲಿಯನೇರ್
- ಈಕೆಯ ನಟನೆ ಮತ್ತು ಬ್ಯೂಟಿಗೆ ಮನಸೋಲದವರೇ ಇಲ್ಲ
ಮುಂಬೈ: 'ಹನಿ ಹನಿ ಗೂಡಿದರೆ ಹಳ್ಳ' ಎಂಬ ಗಾದೆ ಮಾತು ಇಂದಿಗೂ ನಮ್ಮ ಹಿರಿಯರಿಂದ ಕೇಳಿಬರುತ್ತವೆ. ನಮ್ಮ ಪಾಲಿಗೆ ಬರುವ ಸಣ್ಣ-ಪುಟ್ಟ ಅವಕಾಶಗಳನ್ನು ಪರಿಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಬಳಸಿಕೊಂಡರೆ ಅದೇ ನಮಗೆ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಮತ್ತು ಅಪಾರ ಕೀರ್ತಿ, ಯಶಸ್ಸನ್ನು ತಂದುಕೊಡುತ್ತದೆ ಎಂಬುದಕ್ಕೆ ಅನೇಕ ಯಶಸ್ವಿ ವ್ಯಕ್ತಿಗಳ ಜೀವನಗಾಥೆಯೇ ಜ್ವಲಂತ ಸಾಕ್ಷಿ. ಈ ಸಾಲಿನಲ್ಲಿ ಬಾಲಿವುಡ್ನ ಸ್ಟಾರ್ ನಟಿ ಕೂಡ ಇದ್ದು, ಅವರ ಪಯಣ ಕೂಡ ರೋಚಕವಾಗಿದೆ.
90ರ ದಶಕ
ಇವರು ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ದಿನದಿಂದ ಇಂದಿನವರೆಗೆ ಅವರ ಅಭಿಮಾನಿಗಳ ಸಂಖ್ಯೆಯಲ್ಲಿ ಕಿಂಚಿತ್ತು ಕಡಿಮೆಯಾಗಿಲ್ಲ. ಕಾರಣ, ಅಷ್ಟಾಗಿ ಯಾವುದೇ ನೆಗೆಟಿವ್ ಸುದ್ದಿ ಮತ್ತು ವಿವಾದಗಳಲ್ಲಿ ಈ ನಟಿ ಸುಖಾಸುಮ್ಮನೆ ಕಾಣಿಸಿಕೊಂಡಿಲ್ಲ. ತಾವಾಯಿತು, ತಮ್ಮ ಕೆಲಸವಾಯಿತು ಎಂದು ಇರುವವರು. 90ರ ದಶಕದಲ್ಲಿ ಸಿನಿಪ್ರಿಯರನ್ನು ರಂಜಿಸಿದ ಈಕೆ ಒಂದು ಸಮಯದಲ್ಲಿ ವಿಶ್ವ ಸುಂದರಿ ಆಗಿ ಮಿಂಚಿದವರು ಎಂಬುದು ಮತ್ತೊಂದು ರೋಚಕ ಸಂಗತಿ. ವಿಶ್ವ ಸುಂದರಿ ಎಂಬ ಪದ ಕೇಳ್ತಿದ್ದಂತೆ ಬಹುತೇಕರಿಗೆ ನಾವ್ಯಾರ ಬಗ್ಗೆ ಹೇಳ್ತಿದ್ದೇವೆ ಎಂಬುದರ ಸುಳಿವು ಸಿಕ್ಕಿರಬಹುದು.
ಹಿಂದಿ ಚಿತ್ರೋದ್ಯಮ
ಬಾಲಿವುಡ್ನಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ದಿಗ್ಗಜ ನಟರೊಂದಿಗೆ ಅಭಿನಯಿಸಿದ ಚೆಲುವೆ ಬೇರಾರೂ ಅಲ್ಲ. ಅವರೇ ಮಂಗಳೂರಿನ ಬೆಡಗಿ ಐಶ್ವರ್ಯ ರೈ. ವಿಶ್ವ ಸುಂದರಿ ಆಗಿ ಮಿಂಚಿದ ನಟಿ, ಸಿನಿ ಪಯಣದಲ್ಲಿ ಅದ್ಭುತ ಯಶಸ್ಸನ್ನೇ ಕಂಡರು. ತಾವು ಅಭಿನಯಿಸಿದ ಹಲವು ಸಿನಿಮಾಗಳು ಅಂದಿನ ಕಾಲಕ್ಕೆ ಬ್ಲಾಕ್ಬಸ್ಟರ್ ಹಿಟ್ ಆದವು. ಜಾಗತಿಕ ಮಟ್ಟದಲ್ಲಿ ತಮ್ಮ ಕೀರ್ತಿಯನ್ನು ಹೆಚ್ಚಿಸಿಕೊಂಡ ಐಶ್ವರ್ಯ ಅವರ ವೃತ್ತಿಜೀವನ ಆರಂಭದಲ್ಲಿ ಅಷ್ಟು ಸುಲಭವಾಗಿರಲಿಲ್ಲ.
3 ಆ್ಯಡ್...
ಚಿತ್ರೋದ್ಯಮಕ್ಕೆ ಎಂಟ್ರಿಕೊಟ್ಟ ಆರಂಭಿಕ ದಿನಗಳಲ್ಲಿ, ಐಶ್ವರ್ಯ ರೈ ಅವರು ತಮಗೆ ಸಿಕ್ಕ ಮೊದಲ ಮೂರು ಜಾಹೀರಾತುಗಳಿಂದ 5 ಸಾವಿರ ರೂ. ಹಣವನ್ನು ಸಂಭಾವನೆಯಾಗಿ ಪಡೆದರು. ಬ್ಯೂಟಿ, ವಿಶ್ವ ಸುಂದರಿ ಪಟ್ಟ, ಪ್ರಶಸ್ತಿಗಳು ಮತ್ತು ಅಂತಾರಾಷ್ಟ್ರೀಯ ಮನ್ನಣೆಗೂ ಮೊದಲು, ಇಂತಹ ಸಣ್ಣ-ಪುಟ್ಟ ಅವಕಾಶಗಳಿಂದ ಬೆಳೆದು, ಇಂದು ಓರ್ವ ಸ್ಟಾರ್ ನಟಿಯಾಗಿ ಮಿಂಚಿದರು ಎಂಬುದು ಇಲ್ಲಿ ಗಮನಾರ್ಹ.
ನಿರ್ಮಾಪಕ ಶೈಲೇಂದ್ರ ಸಿಂಗ್ ಅವರು ಇತ್ತೀಚಿಗಿನ ಸಂದರ್ಶನವೊಂದರಲ್ಲಿ ನಟಿ ಐಶ್ವರ್ಯ ಅವರ ಆರಂಭಿಕ ದಿನಗಳ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡರು. ಆ ಸಮಯದಲ್ಲಿ ಐಶ್ವರ್ಯ ಅವರಿಗೆ 18 ಅಥವಾ 19 ವರ್ಷ ವಯಸ್ಸು. ರಾತ್ರಿ 8:30ಕ್ಕೆ ತಮ್ಮ ಪೋಷಕರೊಂದಿಗೆ ಮೆರೈನ್ ಡ್ರೈವ್‌ನಲ್ಲಿ ನಮ್ಮನ್ನು ಭೇಟಿಯಾದ ಅವರು, ನಮ್ಮ ಮೊದಲ ಮೂರು ಜಾಹೀರಾತುಗಳನ್ನು ಕೇವಲ 5,000 ರೂ.ಗೆ ಮಾಡಿಕೊಟ್ಟರು. ನಟಿಯ ಮೊದಲ ಆ್ಯಡ್ ಮುಖೇಶ್ ಮಿಲ್ಸ್‌ನಲ್ಲಿ ಚಿತ್ರೀಕರಿಸಲಾಯಿತು ಎಂದರು.
ಸಾಲು ಸಾಲು ಸಿನಿಮಾಗಳು ಹಿಟ್
1994ರಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಐಶ್ವರ್ಯ ರೈ, ಅದಾದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಗಳಿಸಿದರು. ಅಲ್ಲಿಂದ ಚಿತ್ರರಂಗದಲ್ಲಿ ಹೆಚ್ಚಾಗಿ ಸಕ್ರಿಯರಾದ ಅವರು, ಬ್ಯಾಕ್ ಟು ಬ್ಯಾಕ್ ಭರ್ಜರಿ ಯಶಸ್ಸನ್ನು ಕಂಡರು. "ಹಮ್ ದಿಲ್ ದೇ ಚುಕೆ ಸನಮ್", "ದೇವದಾಸ್", "ತಾಲ್", "ಗುರು", "ಜೋಧಾ ಅಕ್ಬರ್", "ಏ ದಿಲ್ ಹೈ ಮುಷ್ಕಿಲ್" ನಂತಹ ಸೂಪರ್ಹಿಟ್ ಚಿತ್ರಗಳ ಮೂಲಕ ಅಪಾರ ಸಿನಿಪ್ರಿಯರ ಹೃದಯ ಗೆದ್ದರು. ಇಂದು ಚಿತ್ರೋದ್ಯಮದಿಂದ ದೂರ ಉಳಿದಿದ್ದರೂ ಅವರ ಮೇಲಿನ ಕ್ರೇಜ್, ಅಭಿಮಾನ, ಪ್ರೀತಿ ಅಭಿಮಾನಿಗಳಲ್ಲಿ ಹಾಗೆಯೇ ಇದೆ ಎಂದೇ ಹೇಳಬಹುದು,(ಏಜೆನ್ಸೀಸ್).