ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್
- ಬಾಲಿವುಡ್ ಕಂಡ ಯಶಸ್ವಿ ಚಿತ್ರ ಕಥೆಗಾರ ಸಲೀಂ ಖಾನ್ ಆಸ್ಪತ್ರೆಗೆ ದಾಖಲು
- ಸಲೀಂ ಖಾನ್ ನಟ ಸಲ್ಮಾನ್ ಖಾನ್ ತಂದೆ
- ಸಲೀಂ ಖಾನ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿಲ್ಲ ಎಂದ ವೈದ್ಯರು
ಮುಂಬೈ: ಬಾಲಿವುಡ್ ಕಂಡ ಯಶಸ್ವಿ ಚಿತ್ರ ಕಥೆಗಾರ ಹಾಗೂ ನಟ ಸಲ್ಮಾನ್ ಖಾನ್ ತಂದೆ, ಸಲೀಂ ಖಾನ್ (Salim Khan) ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನಲೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಲೀಂ ಖಾನ್ ಅವರ ಆರೋಗ್ಯದ ಬಗ್ಗೆ ಮಾತನಾಡಿದ ಡಾಕ್ಟರ್ ಜಲೀಲ್ ಪಾರ್ಕರ್, ಫೆ.17 ರಂದು ಸಲೀಂ ಖಾನ್ರನ್ನು ಲೀಲಾವತಿ ಆಸ್ಪತ್ರೆಗೆ ಅವರ ಕುಟುಂಬದ ವೈದ್ಯರಾದ ಡಾ. ಸಂದೀಪ್ ಚೋಪ್ರಾ, ಕರೆತಂದಿದ್ದರು. ಆರಂಭಿಕ ಹಂತದಲ್ಲಿ ನಾವು ಖಾನ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ನಿರ್ಧರಿಸಿದ್ದೆವು.
ಆದರೆ ಅವರನ್ನು ಐಸಿಯುನಲ್ಲಿ ವೀಕ್ಷಣೆಗೆಂದು ಇರಿಸಿದಾಗ, ಅವರ ಆರೋಗ್ಯ ಸುಧಾರಣೆಯಾಗಿದೆ. ಸದ್ಯಕ್ಕೆ ಅವರು ವೆಂಟಿಲೇಟರ್ನಲ್ಲಿದ್ದು, ಅವರಿಗೆ ಯಾವುದೇ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂದಿದ್ದಾರೆ. ಅವರು ನಾಳೆಯೊಳಗೆ ಸಂಪೂರ್ಣವಾಗಿ ಚೇತರಿಸಿಕೊಂಡು, ಮನೆಗೆ ತೆರಳಿದ್ದಾರೆ ಎಂದು ನಾವು ಆಶಿಸುತ್ತೇವೆ ಎಂದು ಲೀಲಾವತಿ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ತಂದೆಯನ್ನು ಆಸ್ಪತ್ರೆಗೆ ದಾಖಲಾಗಿಸಿದೆ ಎಂದ ಕೂಡಲೇ ಮಕ್ಕಳಾದ ಸಲ್ಮಾನ್ ಖಾನ್, ಸೋಹೇಲ್, ಅರ್ಬಾಜ್ ಮತ್ತು ಮಗಳು ಅರ್ಪಿತಾ, ಅಳಿಯ ಆಯುಷ್ ಶರ್ಮಾ ಆಸ್ಪತ್ರೆಗೆ ಧಾವಿಸಿದ್ದಾರೆ. ಹಿರಿಯ ಬಾಲಿವುಡ್ ಚಿತ್ರಕಥೆಗಾರನನ್ನು ಆಸ್ಪತ್ರೆಗೆ ದಾಖಲಿಸಿದ ಮಾಹಿತಿ ದೊರೆತ ನಂತರ, ಬಹುಕಾಲದ ಗೆಳೆಯ ಜಾವೇದ್ ಅಖ್ತರ್, ಸಂಜಯ್ ದತ್ತ್, ಅತುಲ್ ಕುಲಕರ್ಣಿ ಮೊದಲಾದವರು ಸಲೀಂ ಖಾನ್ ಅವರನ್ನು ನೋಡಲು ಲೀಲಾವತಿ ಆಸ್ಪತ್ರೆಗೆ ಆಗಮಿಸಿದ್ದಾರೆ.
1970-80 ರ ಸಮಯದಲ್ಲಿ ತಮ್ಮ ಚಿತ್ರಕಥೆಗಳ ಮೂಲಕವೇ ಖ್ಯಾತಿಗಳಿಸಿದ್ದ ಸಲೀಂ ಖಾನ್, ಶೋಲೆ, ಜಂಜೀರ್, ದೀವಾರ್, ತ್ರಿಶೂಲ್, ಶಕ್ತಿ ಮತ್ತು ಮಿಸ್ಟರ್ ಇಂಡಿಯಾ ಮೊದಲಾದ ಸಿನಿಮಾಗಳ ಮೂಲಕ ಮನೆಮಾತಾಗಿದ್ದರು. ಬಾಲಿವುಡ್ನ ಬಿಗ್ಬಿ ಖ್ಯಾತಿಯ ಅಮಿತಾಬ್ ಬಚ್ಚನ್ ಅವರಿಗೆ ಆ್ಯಂಗ್ರಿ ಯಂಗ್ ಮ್ಯಾನ್ ರೀತಿಯ ಛವಿಯನ್ನು ಗಳಿಸುವಲ್ಲಿ ಸಲೀಂ ಖಾನ್ ಅವರ ಬರವಣಿಗೆಯೇ ಕಾರಣ ಎಂದು ಹೇಳಲಾಗುತ್ತದೆ,(ಏಜನ್ಸೀಸ್).