'ಏಕ್ ದುಜೆ ಕೆ ಲಿಯೆ' ಸಿನಿಮಾದ ದೃಶ್ಯ  
ಬಾಲಿವುಡ್

ಯಾವುದು ಈ ಸಿನಿಮಾ? 20ಕ್ಕೂ ಹೆಚ್ಚು ಪ್ರೇಮಿಗಳ ಸಾವಿಗೆ ಕಾರಣವಾದ ಚಿತ್ರ! ಇಲ್ಲಿದೆ ನಿಮ್ಮನ್ನು ಬೆರಗಾಗಿಸುವ ವರದಿ

ಪ್ರಮುಖ ಮುಖ್ಯಾಂಶಗಳು

  • ಸಿನಿಮಾಗಳು ಮನುಷ್ಯನ ಬದುಕಿನಲ್ಲಿ ಎಷ್ಟು ಪ್ರಭಾವ ಬೀರುತ್ತೆ ಅನ್ನೋದಕ್ಕೆ ಈ ಚಿತ್ರವೇ ಸಾಕ್ಷಿ
  • 1981ರಲ್ಲಿ ತೆರೆಕಂಡ ಈ ಚಿತ್ರದ ಕಥೆ ಪ್ರೇಮಿಗಳ ಸಾವಿಗೆ ಕಾರಣ?
  • ನಿರ್ದೇಶಕರಿಗೆ ಸಂಕಷ್ಟ ತಂದಿಟ್ಟಿತು 20ಕ್ಕೂ ಹೆಚ್ಚು ಜೋಡಿ ದುರಂತ ಅಂತ್ಯ
ಮುಂಬೈ: ಪ್ರಸ್ತುತ ಕಾಲಘಟ್ಟದ ಸಿನಿಮಾಗಳು 80-90ರ ದಶಕದಲ್ಲಿ ಜನರ ಮೇಲೆ ಬೀರುತ್ತಿದ್ದ ಪ್ರಭಾವವನ್ನು ಇಂದು ಬೀರಲು ಸಾಧ್ಯವೇ ಇಲ್ಲ. ಕಾರಣ, ಆ ಮಟ್ಟಿಗಿನ ಒಳ್ಳೆಯ ವಿಷಯಗಳು, ಉತ್ತಮ ಸಂದೇಶ, ಆಳವಾದ ಭಾವನೆ ಮತ್ತು ಕಥಾವಸ್ತುವುಳ್ಳ ಚಿತ್ರಗಳು ಪ್ರೇಕ್ಷಕರ ಎದುರು ಹಾಜರಾಗುತ್ತಿಲ್ಲ. ಒಂದು ಸಿನಿಮಾ ಎಷ್ಟರ ಮಟ್ಟಿಗೆ ಒಬ್ಬ ವ್ಯಕ್ತಿ ಮೇಲೆ ಪ್ರಭಾವ ಬೀರುತ್ತೆ, ಅವರ ಬದುಕನ್ನೇ ಬದಲಿಸುತ್ತೆ ಎಂಬುದಕ್ಕೆ ಅನೇಕ ದಿಗ್ಗಜ ನಟರ ಸೂಪರ್​ಹಿಟ್​ ಚಿತ್ರಗಳೇ ಜ್ವಲಂತ ಸಾಕ್ಷಿ. 
ಅಂದಿನ ಕಾಲದ ಬಹುತೇಕ ಸಿನಿಮಾಗಳು ನಮ್ಮ ಸುತ್ತಮುತ್ತಲು ನಡೆಯುವ ನೈಜ ಘಟನೆಗಳನ್ನೇ ಆಧರಿಸಿ, ಬೆಳ್ಳಿಪರದೆಯಲ್ಲಿ ತೋರಿಸುವ ಮೂಲಕ ಜನರ ಬದುಕಿನಲ್ಲಿ ದೊಡ್ಡ ಮಟ್ಟಿಗಿನ ಪ್ರಭಾವ ಬೀರುತ್ತಿತ್ತು. ಸಾಕಷ್ಟು ಚಿತ್ರಗಳು ಹೃದಯಸ್ಪರ್ಶಿಯಾದರೆ, ಕೆಲವು ಸಿನಿಮಾಗಳ ಪಾತ್ರಗಳು ಮತ್ತು ಅದರಲ್ಲಿನ ಕಥೆಗಳು ಸಿನಿಪ್ರೇಮಿಗಳ ಬದುಕನ್ನೇ ಕೊನೆಗೊಳಿಸಿದ ಘಟನೆ ನಿಜಕ್ಕೂ ಬೆಚ್ಚಿಬೀಳಿಸುವಂತದ್ದು. ಅದಕ್ಕೆ ಉತ್ತಮ ನಿದರ್ಶನ 1981ರಲ್ಲಿ ತೆರೆಕಂಡ ಬಾಲಿವುಡ್​ನ ಈ ಬ್ಲಾಕ್​ಬಸ್ಟರ್​ ಸಿನಿಮಾ.       
ಕಮಲ್​ ಹಾಸನ್​ ಮತ್ತು ರತಿ ಅಗ್ನಿಹೋತ್ರಿ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಏಕ್ ದುಜೆ ಕೆ ಲಿಯೆ'. ಕೆ. ಬಾಲಚಂದರ್ ನಿರ್ದೇಶಿಸಿದ ಈ ಕ್ಲಾಸಿಕ್ ಪ್ರೇಮಕಥೆಯು ಆ ಸಮಯದಲ್ಲಿ ಭಾರತೀಯ ಚಲನಚಿತ್ರೋದ್ಯಮದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಅಂದಾಜು 1 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಿಸಲಾದ ಈ ಚಿತ್ರವು, ಆ ಕಾಲಕ್ಕೆ 10 ಕೋಟಿ ರೂ. ಬಾಕ್ಸ್ ಆಫೀಸ್​ ಲಾಭ ಕಂಡಿತು. ಇದು ಚಿತ್ರತಂಡಕ್ಕೆ ಖುಷಿ ನೀಡಿದ್ದೇ ಆದರೂ, ಪ್ರೇಮಿಗಳ ಸರಣಿ ದುರಂತ ಅಂತ್ಯಗಳು ದೊಡ್ಡ ತಲೆನೋವಿಗೆ ಕಾರಣವಾಯಿತು.  
ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಅಮರ ಪ್ರೇಮಿಗಳಾದ ಕಮಲ್​-ರತಿ ಜೋಡಿ, ಬಂಡೆಯಿಂದ ಹಾರಿ ಒಟ್ಟಿಗೆ ಪ್ರಾಣ ಕಳೆದುಕೊಳ್ಳುತ್ತಾರೆ. ಈ ದೃಶ್ಯವನ್ನು ನೋಡಿದ ಅನೇಕ ಲವ್​ ಫೇಲ್ಯೂರ್​, ಕುಟುಂಬದಲ್ಲಿ ಪ್ರೀತಿಗೆ ಬೆಂಬಲ ಸಿಗದ ಜೋಡಿಗಳು ನಿಜವಾಗಿಯೂ ಸಾಯುವ ನಿರ್ಧಾರ ಕೈಗೊಂಡಿದ್ದು ದುರಂತ. ಒಂದೆಡೆ, ಚಿತ್ರ ಸಕ್ಸಸ್​ಫುಲ್​ ಆಗಿ ಓಡುತ್ತಿದ್ದರೆ, ಮತ್ತೊಂದೆಡೆ ಕೇಳಿಬರುತ್ತಿದ್ದ ಪ್ರೇಮಿಗಳ ಸರಣಿ ಸಾವಿನ ಸುದ್ದಿಗಳು ಚಿತ್ರತಂಡಕ್ಕೆ ದೊಡ್ಡ ಸಂಕಷ್ಟ ತಂದೊಡ್ಡಿತ್ತು. ಆಗಲೇ ಬದಲಾಗಿದ್ದು ಕ್ಲೈಮ್ಯಾಕ್ಸ್​.  
ಕೆಲವೊಂದು ವರದಿಗಳ ಪ್ರಕಾರ, ಸುಮಾರು 20 ಜೋಡಿಗಳು (ಒಟ್ಟು 40 ಮಂದಿ) ನಿಜ ಜೀವನದಲ್ಲಿ ಆತ್ಮಹತ್ಯೆಗೆ ಶರಣಾಗುವ ಮೂಲಕ ದುರಂತ ಅಂತ್ಯ ಕಂಡರು ಎನ್ನಲಾಗಿದೆ. ಆದರೆ, ಇದೆಷ್ಟು ನಿಜ ಎಂಬುದಕ್ಕೆ ಯಾವುದೇ ಅಂಕಿ-ಅಂಶಗಳು ಅಥವಾ ಸಂಖ್ಯೆ ಉಲ್ಲೇಖಿಸುವ ವರದಿಗಳಿಲ್ಲ. ಆ ಸಮಯದಲ್ಲಿ ಈ ಸುದ್ದಿ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದ್ದಂತೆ, ನಿರ್ದೇಶಕರು ಕ್ಲೈಮ್ಯಾಕ್ಸ್​ ಬದಲಿಸಿದರು. ಆದರೆ, ಇದನ್ನು ಒಪ್ಪದ ಸಿನಿಪ್ರಿಯರು ಭಾರೀ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಹಳೆಯದ್ದನ್ನೇ ಹಾಕಲಾಯಿತು ಎಂದು ವರದಿಯಾಗಿದೆ. 
ಅಸಲಿಗೆ ಇದು 1978ರಲ್ಲಿ ಬಿಡುಗಡೆಯಾದ ತೆಲುಗಿನ 'ಮಾರೋ ಚರಿತ್ರ' ಸಿನಿಮಾದ ರಿಮೇಕ್​ ಆಗಿದೆ. ಈ ಚಿತ್ರವನ್ನೂ ಕೆ.ಬಾಲಚಂದರ್​ ಅವರೇ ನಿರ್ದೇಶಿಸಿದ್ದು, ನಾಯಕನಾಗಿ ಕಮಲ್ ಹಾಸನ್ ಮತ್ತು ನಾಯಕಿಯಾಗಿ ಸರಿತಾ ಅವರು ತೆರೆ ಮೇಲೆ ಮಿಂಚಿದ್ದರು. ಇದೇ ಕಥೆಯನ್ನೇ ಹಿಂದಿಯಲ್ಲಿ ಮಾಡಿದ ನಿರ್ದೇಶಕರು, ಅಲ್ಲಿಯೂ ಕಮಲ್ ಹಾಸನ್​ ಅವರನ್ನೇ ಹೀರೋ ಆಗಿ ಮಾಡಿದರು. ಆದರೆ, ನಾಯಕಿಯ ಪಾತ್ರಕ್ಕೆ ಹಿಂದಿ ನಟಿ ರತಿ ಅವರಿಂದ ಅಭಿನಯ ಮಾಡಿಸಿದರು,(ಏಜೆನ್ಸೀಸ್).